ಮಂಗಳವಾರ, ಜನವರಿ 26, 2021
16 °C
ಇನ್ನೂ ಸ್ವಚ್ಛವಾಗದ ಕೊಳೆಗೇರಿಗಳು l ಜಿಲ್ಲೆಯ 147 ಸ್ಲಂಗಳ ಜನರ ಬದುಕು ಇನ್ನೂ ಅತಂತ್ರ l ಸ್ಲಂ ಬೋರ್ಡ್‌ನಿಂದ ಸಿಗದ ಅನುಕೂಲ l ಜನರ ಆರೋಪ

ಕಲಬುರ್ಗಿಯ ಕೊಳೆಗೇರಿಗಳಲ್ಲಿ ಹಕ್ಕುಪತ್ರದ್ದೇ ದೊಡ್ಡ ಸಮಸ್ಯೆ

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 147 ಕೊಳೆಗೇರಿ ಪ್ರದೇಶಗಳಿವೆ. ಇದರಲ್ಲಿ ಮುಕ್ಕಾಲು ಭಾಗದಷ್ಟು ಪ್ರದೇಶಗಳಲ್ಲಿ ಶೌಚಾಲಯಗಳೇ ಇಲ್ಲ. ಕಾಲುಭಾಗದಷ್ಟು ಪ್ರದೇಶಗಳನ್ನು ಇನ್ನೂ ಘೋಷಣೆ ಮಾಡಿಲ್ಲ. ಇಡೀ ಊರನ್ನು ಸ್ವಚ್ಛವಾಗಿ ಇಡಲು ಶ್ರಮಿಸುವ ಕೊಳೆಗೇರಿಯ ನಿವಾಸಿಗಳ ಬದುಕು ಮಾತ್ರ ಇನ್ನೂ ಮಾಲಿನ್ಯದ ಮಧ್ಯೆಯೇ ತೆವಳುತ್ತಿದೆ.

ಕೊಳೆಗೇರಿಗಳ ಬದುಕನ್ನು ಹಸನು ಮಾಡಲು ಬಂದ ಸ್ಲಂ ಬೋರ್ಡ್‌ನಿಂದ ತಕ್ಕಮಟ್ಟಿನ ಅನುಕೂಲಗಳೂ ಸಿಕ್ಕಿಲ್ಲ ಎಂಬುದು ಇಲ್ಲಿನ ನಿವಾಸಿಗಳ ದೂರು. ಅದರಲ್ಲೂ ಕಲಬುರ್ಗಿ ಜಿಲ್ಲೆಯಲ್ಲಿ ಈಗ ಎಲ್ಲಕ್ಕಿಂತ ದೊಡ್ಡ ಸವಾಲಾಗಿ ಪರಿಣಮಿಸಿರುವುದು ‘ಹಕ್ಕುಪತ್ರ’.

ಹಲವೆಡೆ ಕೊಳೆಗೇರಿ ನಿವಾಸಿಗಳಿಗೆ ಮನೆ ಕಟ್ಟಿ ದಶಕಗಳೇ ಕಳೆದಿವೆ. ಆದರೂ ಅವರಿಗೆ ಹಕ್ಕುಪತ್ರ ನೀಡಿಲ್ಲ. ಇದರಿಂದಾಗಿ ಮನೆಯಲ್ಲಿ ವಾಸವಿದ್ದ ಮೇಲೂ ಅವರಿಗೆ ಭೂ ಒಡೆತನ ಇಲ್ಲ. ಹೀಗಾಗಿ ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ, ವೈದ್ಯಕೀಯ ಸೌಕರ್ಯ, ಲೈಸನ್ಸ್‌ ಮುಂತಾದ ಯೋಜನೆಗಳಲ್ಲಿ ಅವರು ಫಲಾನುಭವಿ ಆಗುತ್ತಿಲ್ಲ.

ನಿಲ್ಲದ ಬಯಲು ಶೌಚ: ನಗರದ ಬಹಳಷ್ಟು ಕೊಳೆಗೇರಿಗಳಲ್ಲಿ ಸಾಮೂಹಿಕ ಶೌಚಾಲಯಗಳು ಇದ್ದರೂ ನಿರ್ವಹಣೆ ಇಲ್ಲ. ಮನೆ ಕಟ್ಟಿಸಿಕೊಂಡವರಿಗೆ ಹಕ್ಕುಪತ್ರ ಇಲ್ಲದ ಕಾರಣ ಶೌಚಾಲಯಗಳು ಮಂಜೂರಾಗುತ್ತಿಲ್ಲ. ಇದರಿಂದ ಬಯಲು ಮಲ– ಮೂತ್ರ ವಿಸರ್ಜನೆ ಅನಿವಾರ್ಯವಾಗಿದೆ. ಪರಿಣಾಮ, ಕೊಳೆಗೇರಿಗಳು ಮತ್ತದೇ ರೋಗಗ್ರಸ್ಥ ದಾರಿ ಹಿಡಿಯುತ್ತಿವೆ.

ಇತ್ತೀಚೆಗೆ ಹಕ್ಕುಪತ್ರ ವಿತರಣೆಗ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ನೀಡಿದ್ದಾರೆ. ಆದರೆ ‘ಸಕಾಲ’ದಲ್ಲಿ ಇದನ್ನು ಪಡೆಯಲು ₹ 10 ಸಾವಿರ ವಂತಿಗೆ ಕಟ್ಟಬೇಕು ಎಂದು ನಿಯಮ ಮಾಡಿದ್ದು, ನಿವಾಸಿಗಳನ್ನು ಸಂಕಷ್ಟಕ್ಕೆ ತಳ್ಳಿದೆ.

ಕುಡಿಯುವ ನೀರು ಇನ್ನೂ ಮರೀಚಿಕೆ: ಬಹುತೇಕ ಸ್ಲಂಗಳಲ್ಲಿ ನೀರಿನ ಟ್ಯಾಂಕ್‌ ನಿರ್ಮಿಸಲಾಗಿದೆ. ಆದರೆ, ಶುದ್ಧ ಕುಡಿಯುವ ನೀರು ಇನ್ನೂ ಮರೀಚಿಕೆಯಾಗಿದೆ. ಬಹುತೇಕ ಕಡೆ ಮೂರು ದಿನಕ್ಕೊಮ್ಮೆ ನೀರು ಬರುತ್ತದೆ. ಬೇಸಿಗೆಯಲ್ಲಿ ಇವರ ಸ್ಥಿತಿ ಕೇಳುವವರೇ ಇಲ್ಲ.

ನಗರದ 11 ಸ್ಲಂಗಳಲ್ಲಿ ಮಾತ್ರ ಸರಿಯಾದ ರಸ್ತೆ, ವಿದ್ಯುತ್‌ ಸಂಪರ್ಕ ಹಾಗೂ ನೀರಿನ ಸಂಪರ್ಕ ಕಾಣಸಿಗುತ್ತದೆ. ಉಳಿದ ಕಡೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ನಡೆದ ಹೋರಾಟ ನಿರಂತರವಾಗಿ ಸಾಗಿದೆ.

‘ಮಹಾನಗರ ಪಾಲಿಕೆ ಅಧಿಕಾರಿಗಳೇ ಸಮೀಕ್ಷೆ ನಡೆಸಿ ನಗರದಲ್ಲಿ 53 ಕೊಳೆಗೇರಿಗಳಿವೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯವರು ಡಬರಾಬಾದ್‌ ಮಾರ್ಗದಲ್ಲಿ 1024 ಮನೆಗಳನ್ನು ನಿರ್ಮಿಸಿದ್ದು ಅವುಗಳಲ್ಲಿ 704 ಮನೆ ಹಂಚಿಕೆಯಾಗಿವೆ. ಆದರೆ, ನಿಜವಾದ ಫಲಾನುಭವಿಗಳಿಗೆ ನೀಡಿಲ್ಲ. ಕೆಸಟಗಿ ರಸ್ತೆಯಲ್ಲಿ 300 ಮನೆ ನಿರ್ಮಿಸಿದ್ದು ಅಲ್ಲಿಯೂ ನಿಜವಾದ ಸ್ಲಂ ಫಲಾನುಭವಿಗಳಿಗೆ ನೀಡಬೇಕು’ ಎಂಬುದು ಸ್ಲಂ ಜನಾಂದೋಲನ ಸಂಘಟನೆಯ ಸಂಚಾಲಕಿ ರೇಣುಕಾ ಸರಡಗಿ ಅವರ ಆಗ್ರಹ.

ಬಾಕ್ಸ್–1‌

ಮನೆ ಮಂಜೂರಿಗೆ ₹ 90 ಸಾವಿರ ವಂತಿಗೆ

‘ಕೊಳೆಗೇರಿಗಳ ಮನೆ ಮಂಜೂರಾತಿಗಾಗಿ ಈ ಹಿಂದೆ ಶೇ 10ರಷ್ಟು ವಂತಿಗೆ ಹಣ ಕಟ್ಟಬೇಕಿತ್ತು. ಈಗ ಅದನ್ನು ಶೇ 15ಕ್ಕೆ ಏರಿಸಲಾಗಿದೆ. ಕಳೆದ ವರ್ಷದವರೆಗೂ ₹ 40 ಸಾವಿರ ವಂತಿಗೆ ಕಟ್ಟಬೇಕಾಗಿದ್ದವರು ಈಗ ₹ 90 ಸಾವಿರ ಕಟ್ಟುವುದು ಅನಿವಾರ್ಯವಾಗಿದೆ. ಎರಡು ಹೊತ್ತಿನ ಊಟಕ್ಕೆ ಪರದಾಡುವ ಜನ ಇಷ್ಟೊಂದು ವಂತಿಗೆ ಹೇಗೆ ಕಟ್ಟಬೇಕು’ ಎಂದು ನಿವಾಸಿಗಳು ಪ್ರಶ್ನಿಸುತ್ತಾರೆ.

ಬಾಕ್ಸ–2

ಆರ್ಥಿಕ ನೆರವು ₹ 1.5 ಲಕ್ಷಕ್ಕೆ ಇಳಿಕೆ

ಸ್ಲಂ ನಿವಾಸಿಗಳಿಗೆ ಮನೆ ಕಟ್ಟಿಕೊಳ್ಳಲು ಈ ಹಿಂದೆ ₹ 3.30 ಲಕ್ಷ ಆರ್ಥಿಕ ನೆರವು ನೀಡಲಾಗುತ್ತಿತ್ತು. ಆದರೆ, ಕೊರೊನಾ– ಲಾಕ್‌ಡೌನ್‌ನಿಂದ ಹಾನಿಯ ನೆಪ ಹೇಳಿಕೊಂಡು ಸರ್ಕಾರ ಇದರ ಮೊತ್ತವನ್ನು ಮುಕ್ಕಾಲು ಭಾಗ ಕಡಿತಗೊಳಿಸಿದೆ. ಪ್ರಸಕ್ತ ವರ್ಷದಿಂದ ಮನೆ ನಿರ್ಮಾಣಕ್ಕೆ ₹ 1.5 ಲಕ್ಷ ಮಾತ್ರ ನೆರವು ಸಿಗಲಿದೆ. ಇದನ್ನು ಕೂಡ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ನೀಡಲಾಗುತ್ತಿದೆ.

ಗುಲ್ಲಾಬೌಡಿ, ಇಂದಿರಾನಗರ, ತಾರಪೈಲ್‌ ಬಡಾವಣೆ, ಜ್ಯೋತಿ ನಗರ, ತಿಲಕ ನಗರ ಮುಂತಾದ ಸ್ಲಂಗಳಲ್ಲಿ ಹಲವರು ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದಾರೆ. ಆದರೆ, ಸರ್ಕಾರ ನೆರವು ಕಡಿತಗೊಳಿಸಿದ್ದಿಂದ ಸಾಲದ ಶೂಲಕ್ಕೆ ಸಿಕ್ಕಿಕೊಂಡಂತಾಗಿದೆ. ಮತ್ತೆ ಕೆಲವರ ಮನೆಗಳು ಅರ್ಧಕ್ಕೆ ನಿಂತಿದ್ದು, ಬಾಡಿಗೆ ಮನೆಯಲ್ಲೇ ವಾಸವಾಗಿದ್ದಾರೆ. ಇತ್ತ ಸ್ವಂತ ಮನೆಯೂ ಇಲ್ಲ, ಆರ್ಥಿಕ ನೆರವೂ ಇಲ್ಲ, ಹಕ್ಕುಪತ್ರವೂ ಇಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು