ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮವಾಗಿದ್ದ ಕುಸನೂರ ರಸ್ತೆಗೆ ಮತ್ತೆ ಡಾಂಬರು: ಲೋಕೋಪಯೋಗಿ ಇಲಾಖೆಗೆ ದೂರು

ಉತ್ತಮ ಸ್ಥಿತಿಯಲ್ಲಿದ್ದ ಕುಸನೂರ ರಸ್ತೆಗೆ ಡಾಂಬರೀಕರಣ ಮಾಡಿದ್ದಕ್ಕೆ ಆಕ್ರೋಶ
Last Updated 3 ಅಕ್ಟೋಬರ್ 2022, 13:04 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಹೊಸ ಆರ್‌ಟಿಒ ಕಚೇರಿ ಬಳಿಯ ಕುಸನೂರ ರಸ್ತೆ ಸುಸ್ಥಿತಿಯಲ್ಲಿದ್ದರೂ ಮತ್ತೆ ₹ 1.25 ಕೋಟಿ ವೆಚ್ಚದಲ್ಲಿ 3 ಕಿ.ಮೀ. ರಸ್ತೆಗೆ ಡಾಂಬರೀಕರಣ ಮಾಡುವ ಮೂಲಕ ಲೋಕೋಪಯೋಗಿ ಇಲಾಖೆ ಹಾಗೂ ಸರ್ಕಾರದ ಖಜಾನೆಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕೋಟ್ಯಂತರ ರೂಪಾಯಿ ನಷ್ಟ ಮಾಡಿದ್ದಾರೆ ಎಂದು ಆರೋಪಿಸಿ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಭೀಮನಗೌಡ ಪರಗೊಂಡ ಇಲಾಖೆಯ ಅಧೀಕ್ಷಕ ಎಂಜಿನಿಯರ್ (ಸೂಪರಿಂಟೆಂಡಿಂಗ್ ಎಂಜಿನಿಯರ್) ಅವರಿಗೆ ಲಿಖಿತ ದೂರು ನೀಡಿದ್ದಾರೆ.

‘ಪ್ರಜಾವಾಣಿ’ ಅಕ್ಟೋಬರ್ 1ರ ಸಂಚಿಕೆಯಲ್ಲಿ ಪ್ರಕಟಿಸಿದ್ದ ‘ರಸ್ತೆ ಸುಸ್ಥಿತಿಯಲ್ಲಿದ್ದರೂ ಮತ್ತೆ ಡಾಂಬರೀಕರಣ’ ವಿಶೇಷ ವರದಿಯನ್ನು ಆಧರಿಸಿ ಈ ದೂರು ನೀಡಿರುವ ಅವರು, ‘ತರಾತುರಿಯಲ್ಲಿ ಅಷ್ಟೊಂದು ಹಣವನ್ನು ವೆಚ್ಚ ಮಾಡಿ ರಸ್ತೆ ನಿರ್ಮಿಸಲಾಗಿದೆ. ಅದೇ ಸಮಯದಲ್ಲಿ ನಗರದಲ್ಲಿ ಹಲವು ರಸ್ತೆಗಳು ತಗ್ಗು ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದರೂ ಅವುಗಳ ದುರಸ್ತಿಗೆ ಮುಂದಾಗದ ಇಲಾಖೆ ಮೊದಲೇ ಉತ್ತಮ ಸ್ಥಿತಿಯಲ್ಲಿರುವ ರಸ್ತೆಗೆ ಅಷ್ಟೊಂದು ಹಣ ಖರ್ಚು ಮಾಡುವ ಅಗತ್ಯವೇನಿತ್ತು’ ಎಂದು ಪ್ರಶ್ನಿಸಿದ್ದಾರೆ.

‘ಡಾಂಬರೀಕರಣ ಮಾಡುವ ಸಂದರ್ಭದಲ್ಲಿ ಆ ರಸ್ತೆಯನ್ನು ಬಂದ್‌ ಮಾಡಿ ಸಾರ್ವಜನಿಕ ವಾಹನಗಳ ಅಡೆ ತಡೆ ಮಾಡಿದ್ದಾರೆ. ಇದರಿಂದ ಎಷ್ಟೋ ಪ್ರಯಾಣಿಕರಿಗೆ ತೊಂದರೆಯಾಗಿದೆ. ಏಕಾಏಕಿ ಈ ರಸ್ತೆಗೆ ಡಾಂಬರ್ ಹಾಕುವ ಅಗತ್ಯವೇನಿತ್ತು? ಸರ್ಕಾರಿ ಹಣವನ್ನು ಪೋಲು ಮಾಡುವ ಉದ್ದೇಶದಿಂದಲೇ ಹೀಗೆ ಮಾಡಿರುವ ಸಂದೇಹವಿದೆ. ಆದ್ದರಿಂದ ಫೈನಾನ್ಶಿಯಲ್ ಕೋಡ್ ಅನ್ವಯ ಈ ಹಣವನ್ನು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಶೇ 18ರ ಬಡ್ಡಿ ದರದಲ್ಲಿ ವಸೂಲಿ ಮಾಡಿ ಖಜಾನೆಗೆ ಭರ್ತಿ ಮಾಡಿಕೊಳ್ಳಬೇಕು. ಈ ಕಾಮಗಾರಿಯ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

***

ಲೋಕೋಪಯೋಗಿ ಇಲಾಖೆಯವರು ದುಡ್ಡು ಪೋಲು ಮಾಡುವ ಉದ್ದೇಶದಿಂದಲೇ ಒಳ್ಳೆಯ ಸ್ಥಿತಿಯಲ್ಲಿರುವ ರಸ್ತೆಗೆ ಡಾಂಬರೀಕರಣ ಮಾಡಿದ್ದಾರೆ. ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದರೆ ಲೋಕಾಯುಕ್ತರಿಗೆ ದೂರು ನೀಡಲಾಗುವುದು

– ಭೀಮನಗೌಡ ಪರಗೊಂಡ, ವಕೀಲ, ಸಾಮಾಜಿಕ ಕಾರ್ಯಕರ್ತ, ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT