ಶನಿವಾರ, ಸೆಪ್ಟೆಂಬರ್ 18, 2021
22 °C

ಕಲಬುರ್ಗಿ: ರಿಯಾಯಿತಿ ದರದಲ್ಲಿ ಮಣ್ಣಿನ ಗಣಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಇಲ್ಲಿನ ಸ್ವಗ್ರಾಮ ಸಂಘಟನೆ ವತಿಯಿಂದ ಮಣ್ಣಿನಿಂದಲೇ ಸುಮಾರು 10 ಸಾವಿರ ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸಲಾಗಿದೆ. ಪರಿಸರಕ್ಕೆ ಹಾನಿ ಮಾಡದಂಥ ಈ ಮೂರ್ತಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ’ ಎಂದು ಸಂಘಟನೆ ಅಧ್ಯಕ್ಷ ಸಂಗಮೇಶ ಮಡಿವಾಳ ತಿಳಿಸಿದರು.

‘ಪ್ಯಾರಿಸ್‌ ಪ್ಲಾಸ್ಟರ್‌ ಅಥವಾ ಪ್ಲಾಸ್ಟಿಕ್‌ ಗಣಪನ ಮೂರ್ತಿಗಳಿಂದ ಮಣ್ಣು, ಗಾಳಿ ಹಾಗೂ ಜಲ ಮಾಲಿನ್ಯ ತೀವ್ರವಾಗುತ್ತಿದೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಮಣ್ಣಿನ ಮೂರ್ತಿಗಳ ಮಾರಾಟಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಈ ಮೂರ್ತಿಗಳು ತುಟ್ಟಿ ಎಂದು ಬಹಳಷ್ಟು ಜನ ಭಾವಿಸಿದ್ದಾರೆ. ಆದರೆ, ಕೇವಲ ₹ 40ಕ್ಕೂ ನಾವು ಮೂರ್ತಿ ನೀಡುತ್ತಿದ್ದೇವೆ’ ಎಂದು ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಮ್ಮ ಸಂಘಟನೆಯಿಂದ ಕಳೆದ ಆರು ವರ್ಷಗಳಿಂದ ಬೆಳಗಾವಿಯಿಂದ ತರಿಸಿದ ಮೂರ್ತಿಗಳನ್ನು ಮನೆಮನೆಗೆ ತಲುಪಿಸಿದ್ದೇವೆ. ಈ ವರ್ಷ ಅಲ್ಲಿಂದ ಮಣ್ಣು ತರಿಸಿ ನಾವೇ ಸಿದ್ಧಪಡಿಸುತ್ತಿದ್ದೇವೆ. ಜನವರಿಯಿಂದ 30 ಮಹಿಳೆಯರು ಇದರಿಂದ ಉದ್ಯೋಗ ಪಡೆದಿದ್ದಾರೆ. ಮೂರ್ತಿ ಮಾರುವವರು ಮತ್ತು ಕೊಳ್ಳುವವರ ಸಂಖ್ಯೆ ಹೆಚ್ಚಾದರೆ ಹಲವಾರು ಮಹಿಳೆಯರಿಗೆ ವರ್ಷಪೂರ್ತಿ ಕೆಲಸ ಕೊಡಲು ಸಾಧ್ಯವಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಕೈಜೋಡಿಸಬೇಕು’ ಎಂದು ಕೋರಿದರು.

ಜೇಡಿಮಣ್ಣಿನಿಂದ ತಯಾರಿಸಿದ ಈ ಮೂರ್ತಿಗಳು ನೀರಿನಲ್ಲಿ ಎಷ್ಟು ಸುಲಭವಾಗಿ ಕರಗುತ್ತವೆ ಎಂಬುದನ್ನೂ ಅವರು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.

ಮೂರ್ತಿ ಬೇಕಾದವರು ನಗರದ ಸೂಪರ್‌ ಮಾರ್ಕೆಟ್‌ನ ಹುಮನಾಬಾದ್‌ ಬೇಸ್‌ ಬಳಿಯ ಸುಭಾಷಚಂದ್ರ ಬೋಸ್‌ ಪ್ರತಿಮೆ ಹಿಂದಿರುವ ಸಂಘದ ಕಚೇರಿಗೆ ಬರಬೇಕು. ಮಾಹಿತಿಗೆ 7676922891 ಸಂಪರ್ಕಿಸಲು ಕೋರಿದರು.

ಮೂರ್ತಿ ತಯಾರಕರಾದ ಸರಸ್ವತಿ ಸಾರವೆ, ಈರಮ್ಮ ವಿಶ್ವಕರ್ಮ, ಕಲಾವತಿ ಮಠಪತಿ, ಸವಿತಾ ಚಂದ್ರಕಾಂತ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು