ಲೂಸನ್, ಸ್ವಿಟ್ಜರ್ಲೆಂಡ್: ಭಾರತ ಪುರುಷರ ಹಾಕಿ ತಂಡವು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಸೋಮವಾರ ಬಿಡುಗಡೆ ಮಾಡಿದ ವಿಶ್ವ ರ್‍ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ.
ಕಳೆದ ತಿಂಗಳು ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಬಳಿಕ 2771 ಅಂಕಗಳೊಂದಿಗೆ 16 ತಿಂಗಳ ನಂತರ ಮತ್ತೆ ಮೂರನೇ ಸ್ಥಾನಕ್ಕೆ ಭಾರತ ಮರಳಿದೆ. ಭಾರತ ಆಡಿರುವ ಕೊನೆಯ ಏಳು ಪಂದ್ಯಗಳಲ್ಲಿ 6ರಲ್ಲಿ ಗೆದ್ದರೆ, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.
ನೆದರ್‌ಲೆಂಡ್ಸ್ ತಂಡವು (3113 ಅಂಕ) ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಈಚೆಗೆ ನಡೆದ ಯುರೋಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಜತೆಗೆ ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ಚಾಂಪಿಯನ್, ಹಾಕಿ ವಿಶ್ವಕಪ್‌ನಲ್ಲಿ ಕಂಚಿನ ಪದಕವನ್ನು ನೆದರ್‌ಲೆಂಡ್ಸ್ ಜಯಿಸಿತ್ತು.
ಬೆಲ್ಜಿಯಂ (2989) ಎರಡನೇ ಸ್ಥಾನದಲ್ಲಿ ಮುಂದುವರಿದರೆ, ಜರ್ಮನಿ (2689) ಮತ್ತು ಆಸ್ಟ್ರೇಲಿಯಾ (2544) ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿವೆ. ಅರ್ಜೆಂಟೀನಾ (2350), ಸ್ಪೇನ್ (2347)ಗಿಂತ ಒಂದು ಸ್ಥಾನ ಬಡ್ತಿ ಪಡೆದು ಏಳನೇ ಸ್ಥಾನ ತಲುಪಿದೆ.
ಏಳನೇ ಸ್ಥಾನದಲ್ಲಿ ಮಹಿಳಾ ತಂಡ: ಭಾರತ ಮಹಿಳೆಯರ ಹಾಕಿ ತಂಡವು (2325) ರ‍್ಯಾಂಕಿಂಗ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇಲ್ಲೂ ನೆದರ್‌ಲೆಂಡ್ಸ್ ತಂಡ (3422) ಅಗ್ರಸ್ಥಾನದಲ್ಲಿದೆ.
ಆಸ್ಟ್ರೇಲಿಯಾ (2818) ಮತ್ತು ಅರ್ಜೆಂಟೀನಾ (2767) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿದ್ದರೆ, ಬೆಲ್ಜಿಯಂ (2609) ನಾಲ್ಕನೇ, ಜರ್ಮನಿ (2574) ಐದನೇ ಸ್ಥಾನದಲ್ಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.