ಶನಿವಾರ, ಜನವರಿ 23, 2021
24 °C
ಪರಿಶಿಷ್ಟ ರೈತರಿಗೆ ಮಂಜೂರಾದ ಕೃಷಿ ಪರಿಕರ; ಏಜೆನ್ಸಿ ಮೂಲಕ ದುಬಾರಿ ಬೆಲೆಗೆ ಬಿಕರಿ

ಕಾಳಸಂತೆಯಲ್ಲಿ ಸ್ಪ್ರಿಂಕ್ಲರ್‌ ಮಾರಾಟ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ‘ತುಂತುರು ನೀರಾವರಿಗಾಗಿ ರೈತರಿಗೆ ಸಯಾಧನದ ಅಡಿ ಮಂಜೂರಾದ ಸ್ಪ್ರಿಂಕ್ಲರ್‌ ಸೆಟ್‌ಗಳಲ್ಲಿ, ಇಲ್ಲಿನ ಕೃಷಿ ಇಲಾಖೆ ಅಧಿಕಾರಿಗಳು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಿಕೊಳ್ಳುತ್ತಿದ್ದಾರೆ’ ಎಂದು ಫಲಾನುಭವಿ ರೈತರು ದೂರಿದ್ದಾರೆ.

‘ಪಟ್ಟಣದ ಕೃಷಿ ಇಲಾಖೆ ಕಚೇರಿ ಮುಂದೆ ಒಂದು ವಾಹನದಲ್ಲಿ ಸ್ಪ್ರಿಂಕ್ಲರ್‌ ಸೆಟ್‌ ಸಾಗಿಸುತ್ತಿರುವುದು ಕಂಡುಬಂತು. ಅವರನ್ನು ವಿಚಾರಣೆ ಮಾಡಿದಾಗ ₹ 10 ಸಾವಿರ ನೀಡಿ ಏಜೆನ್ಸಿಯೊಂದರ ಮೂಲಕ ಖರೀದಿಸಿದ್ದಾರೆ ಹೇಳಿದ್ದಾರೆ. ಇದೇ ರೀತಿ ಕಳೆದ 15 ದಿನಗಳಿಂದ ಸ್ಪ್ರಿಂಕ್ಲರ್‌ ಮಾರಾಟ ಮಾಡಲಾಗುತ್ತಿದೆ. ತುಂತುರು ನೀರಾವರಿಗೆ ಅಗತ್ಯವಿರುವ ಪರಿಕರಗಳ ಕೃತಕ ಅಭಾವ ಸೃಷ್ಟಿ ಮಾಡಿ, ರೈತರೂ ಹೆಚ್ಚಿನ ಬೆಲೆ ನೀಡುವ ಅನಿವಾರ್ಯ ತಂದೊಡ್ಡಲಾಗಿದೆ. ರೈತರಿಗೆ ಸಹಾಯ ಧನದಲ್ಲಿ ₹ 2070ಕ್ಕೆ ಒಂದು ಸ್ಪ್ರಿಂಕ್ಲರ್‌ ಸೆಟ್ ಮಂಜೂರಾಗಿದೆ. ಆದರೆ, ಕೃಷಿ ಇಲಾಖೆಯ ಕೆಲವರು ಏಜೆನ್ಸಿಗಳ ಜತೆಗೆ ಒಪ್ಪಂದ ಮಾಡಿಕೊಂಡು, ಕಾಳಸಂತೆಯಲ್ಲಿ ಮಾರುತ್ತಿದ್ದಾರೆ’ ಎಂದೂ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಫಜಲಪುರ, ಕರಜಗಿ, ಅತನೂರ ರೈತ ಸಂಪರ್ಕ ಕೇಂದ್ರಗಳ ಇವುಗಳ ಮುಖಾಂತರ ಸ್ಪ್ರಿಂಕ್ಲರ್‌ ನೀಡಲಾಗುತ್ತಿದೆ. ಈ ಹಿಂದೆಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಈ ಸೆಟ್‌ಗಳನ್ನು ಸಹಾಯ ಧನದಲ್ಲಿ ಮಾರಾಟ ಮಾಡಲಾಗಿದೆ. ಆದರೆ, ಕಳೆದ 15 ದಿನಗಳಿಂದ ಸಾಮಾನ್ಯ ರೈತರಿಗೂ ಸಹಾಯಧನದಲ್ಲಿ ಸೆಟ್‌ಗಳನ್ನು ವಿತರಿಸುವ ಕೆಲಸ ನಡೆದಿದೆ’ ಎಂದು ರೈತರು ಹೇಳಿದ್ದಾರೆ.

ಈ ಕುರಿತು ಅಫಜಲಪುರ ರೈತ ಸಂ‍ಪರ್ಕ ಕೇಂದ್ರದ ಕೃಷಿ ಅಧಿಕಾರಿ ಅರವಿಂದಕುಮಾರ ರಾಠೋಡ ಅವರನ್ನು ವಿಚಾರಿಸಿದಾಗ, ‘ಸಾಮಾನ್ಯ ರೈತರಿಗೆ ಸ್ಪ್ರಿಂಕ್ಲರ್‌ ಬಂದಿಲ್ಲ. ಬರುವುದೂ ಇಲ್ಲ’ ಎಂದರು.

‘ಈಗಾಗಲೇ ಈ ಸೆಟ್‌ ಪಡೆಯಲು ಕರಜಗಿ ರೈತ ಸಂಪರ್ಕ ಕೇಂದ್ರಕ್ಕೆ ಒಂದು ಸಾವಿರ, ಅಫಜಲಪುರಕ್ಕೆ 750, ಅತನೂರ ಕೇಂದ್ರಕ್ಕೆ 700 ಅರ್ಜಿಗಳು ಬಂದಿವೆ. ಸ್ಪ್ರಿಂಕ್ಲರ್‌ಗಳಿಗಾಗಿ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಅಲೆಯುತ್ತಿದ್ದಾರೆ. ಆದರೂ ಫಲಾನುಭವಿಗಳನ್ನು ನೆಪ ಹೇಳಿ ಸಾಗಹಾಕುವ ಅಧಿಕಾರಿಗಳು ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ಜರುಗಿಸಬೇಕು’ ಎಂದೂ ರೈತರು ಆಗ್ರಹಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು