ಸೋಮವಾರ, ಜನವರಿ 27, 2020
17 °C
225 ಮಕ್ಕಳಿಗೆ ವಿಶೇಷ ತರಗತಿ, 100 ಫಲಿತಾಂಶದ ಗುರಿ

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ದತ್ತು ಯೋಜನೆ

ಶಿವಾನಂದ ಹಸರಗುಂಡಗಿ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಮತ್ತು ಕಲ್ಯಾಣ ಕರ್ನಾಟಕ ಯೋಜನೆ ಅಡಿಯಲ್ಲಿ 10ನೇ ತರಗತಿ ಮಕ್ಕಳ ಫಲಿತಾಂಶ ಹೆಚ್ಚಳಕ್ಕೆ ದತ್ತು ಯೋಜನೆ ಮತ್ತು ವಿಶೇಷ ತರಗತಿಗಳನ್ನು ನಡೆಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.

ತಾಲ್ಲೂಕಿನ ಆನೂರ, ಬಿದನೂರ, ಗೊಬ್ಬುರ(ಬಿ), ಹಸರಗುಂಡಗಿ, ದೇವಲಗಾಣಗಾಪುರ, ಆನೂರ, ಘತ್ತರಗಾ, ಅಫಜಲಪುರ ಮತ್ತು ಅತನೂರಿನ 9 ಸರ್ಕಾರಿ ಪ್ರೌಢಶಾಲೆಗಳ 225 ಮಕ್ಕಳಿಗೆ ಇಂಗ್ಲಿಷ್‌, ಗಣಿತ, ವಿಜ್ಞಾನ ವಿಷಯಗಳ ಕುರಿತು ವಿಶೇಷ ತರಗತಿಗಳನ್ನು ಆಯೋಜಿಸಲಾಗಿದೆ. 

ಬೆಳಿಗ್ಗೆ 8 ರಿಂದ 9 ರವರೆಗೆ ಮತ್ತು ಸಂಜೆ 4 ರಿಂದ 5 ರವರೆಗೆ ತರಗತಿಗಳನ್ನು ನಡೆಸಲಾಗುತ್ತದೆ. ಕೆಲವು ಶಾಲೆಗಳಲ್ಲಿ ವಸತಿ ವ್ಯವಸ್ಥೆ ಮಾಡಿ ಓದುವ ವ್ಯವಸ್ಥೆ ಮಾಡಲಾಗಿದೆ.

ದತ್ತು ಯೋಜನೆ ಅಡಿಯಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಇದುವರೆಗೂ ನಡೆದ ಮೌಲ್ಯಮಾಪನಗಳ ಆಧಾರದ ಮೇಲೆ 3 ಗುಂಪುಗಳಾಗಿ ವಿಂಗಡಿಸಿ,  ಅದರಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಗುಂಪು, ಉತ್ತೀರ್ಣತೆ ಹಂತದಲ್ಲಿರುವ ವಿದ್ಯಾರ್ಥಿಗಳು ಹಾಗೂ ಅನುತ್ತೀರ್ಣ ಮಟ್ಟದಲ್ಲಿರುವ ವಿದ್ಯಾರ್ಥಿಗಳ ಗುಂಪುಗಳನ್ನಾಗಿ ಮಾಡಲಾಗಿದೆ.

ಮೂರನೇ ಗುಂಪಿನ ವಿದ್ಯಾರ್ಥಿಗಳನ್ನು ದತ್ತು ಯೋಜನೆ ಅಡಿಯಲ್ಲಿ ಶಾಲೆಯಲ್ಲಿನ ಎಲ್ಲಾ ವಿಷಯ ಶಿಕ್ಷಕರು ಸಮನಾಗಿ ಹಂಚಿಕೊಂಡು, ಶಾಲಾ ಅವಧಿಯ ನಂತರ ಪ್ರತಿನಿತ್ಯ ಬೋಧನೆ ಮಾಡುವರು. ಪ್ರತಿ ವಿಷಯದ ಪ್ರಶ್ನೆಪತ್ರಿಕೆಗಳಲ್ಲಿ ಬರಬಹುದಾದ ಸಂಭವನೀಯ, ಸುಲಭ ಮತ್ತು ಸಾಧಾರಣ ಪ್ರಶ್ನೋತ್ತರ ಮತ್ತು ಸಮಸ್ಯೆಗಳನ್ನು ಪುನರಾವರ್ತನೆ ಮಾಡಿಸಲಾಗುವುದು. 2ನೇ ಗುಂಪಿನ ವಿದ್ಯಾರ್ಥಿಗಳನ್ನು ಆಯಾ ವಿಷಯದ ಶಿಕ್ಷಕರು ವಿದ್ಯಾರ್ಥಿಗಳ ಜವಾಬ್ದಾರಿ ತೆಗೆದುಕೊಂಡು ಅವರಿಗೆ ಪಾಠ ಮಾಡುವ ವ್ಯವಸ್ಥೆ ಮಾಡಲಾಗಿದೆ.

ಇನ್ನೊಂದು ಹಂತದಲ್ಲಿ ಪೋಷಕರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಮಕ್ಕಳ ಪ್ರಗತಿಯ ಬಗ್ಗೆ ಹಾಗೂ ಅವರ ಪ್ರತಿ ದಿನದ ಕಾರ್ಯ ವೈಖರಿ ಬಗ್ಗೆ ಚರ್ಚೆ ಮಾಡಲಾಗುತ್ತಿದೆ.  ಹೆಚ್ಚು ಗೈರುಹಾಜರಾಗುವ ಮಕ್ಕಳ ಮನೆಗಳಿಗೆ ಶಿಕ್ಷಕರು ಭೇಟಿ ನೀಡಿ ಗೈರು ಹಾಜರಾಗದಂತೆ ನೋಡಿಕೊಳ್ಳಲು ಕೆಲಸ ಮಾಡಲಾಗುತ್ತಿದೆ.

ಮಕ್ಕಳಿಗೆ ಪಾಠ ಮುಗಿದ ಮೇಲೆ ಮೌಲ್ಯಮಾಪನ ಕೆಲಸ ಮಾಡಲಾಗುತ್ತಿದೆ. 2014 – 15ನೇ ಸಾಲಿನಿಂದ 2018 – 19ನೇ ಸಾಲಿನವರೆಗೂ 5 ವರ್ಷಗಳ 10ನೇ ತರಗತಿಯಲ್ಲಿ ಅತಿ ಹೆಚ್ಚು ಎಂದರೆ ಶೇ 96.5, ಅತಿ ಕಡಿಮೆ ಎಂದರೆ ಶೇ 88.5 ಫಲಿತಾಂಶ ಬಂದಿದ್ದು, ಪ್ರಸ್ತುತ ವರ್ಷ 100ರಷ್ಟು ಫಲಿತಾಂಶವನ್ನು ಪಡೆಯುವ ಗುರಿಯನ್ನು ಕ್ಷೇತ್ರ ಕಾರ್ಯಾಲಯ ಹೊಂದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು