ಶನಿವಾರ, ಸೆಪ್ಟೆಂಬರ್ 18, 2021
30 °C
27 ವಾರ್ಡ್‌ಗಳು ಮಹಿಳೆಯರಿಗೆ ಮೀಸಲು, 31 ವಾರ್ಡ್‌ಗಳಲ್ಲಿ ಮಹಿಳಾ ಮತದಾರರೇ ನಿರ್ಣಾಯಕ

ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಹೆಚ್ಚಲಿದೆ ಮಹಿಳಾ ಆಧಿಪತ್ಯ

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಪ್ರಸಕ್ತ ಅವಧಿಯ ಪಾಲಿಕೆಯಲ್ಲಿ ಮಹಿಳಾ ದರ್ಬಾರ್‌ ನಡೆಯುವ ಸಾಧ್ಯತೆ ಹೆಚ್ಚಿದೆ. ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ವನಿತೆಯರು ಪಾಲಿಕೆಯ ಸದಸ್ಯರಾಗುವ ನಿರೀಕ್ಷೆಯಿದೆ. ಇದಕ್ಕೆ ಪೂರಕವಾಗಿ ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ.

ಪ್ರಸಕ್ತ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶೇ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. 55 ಪೈಕಿ 27 ವಾರ್ಡ್‌ಗಳ ವಿವಿಧ ವರ್ಗಗಳ ಮಹಿಳೆಯರಿಗೇ ಮೀಸಲಾಗಿವೆ. ಪುರುಷರ ಸದಸ್ಯರ ಸಂಖ್ಯೆ 28 ಅಥವಾ ಅದಕ್ಕಿಂತ ಕಡಿಮೆ ಆಗುವ ಸಾಧ್ಯತೆ ಇದೆ.

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲು ಸ್ಥಾನಗಳನ್ನು ಇಡಬೇಕು ಎಂಬ ಆದೇಶ ನ್ಯಾಯಾಲಯವು 2011ರಲ್ಲೇ ನೀಡಿತ್ತು. ಆದರೆ, ಕೆಲವರು ತಕರಾರು ಸಲ್ಲಿಸಿದ್ದರಿಂದ ಇದರ ಚರ್ಚೆ 2015ರವರೆಗೂ ಮುಂದುವರಿಯಿತು. ಹೀಗಾಗಿ, 2014ರಲ್ಲಿ ನಡೆದ ಪಾಲಿಕೆ ಚುನಾವಣೆ ವೇಳೆ ಅದರ ಹಿಂದೆ ಇದ್ದ ಮೀಸಲಾತಿ ಪ್ರಮಾಣದ (ಶೇ 33) ಆಧಾರದ ಮೇಲೇಯೇ ಚುನಾವಣೆ ನಡೆದಿತ್ತು. ಅದರ ಪ್ರಕಾರ, 19 ಮಹಿಳಾ ಸದಸ್ಯರು ಮಾತ್ರ ನಗರದ ಆಡಳಿತ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಈ ಬಾರಿ ಮಹಿಳಾ ಬಲ ಹೆಚ್ಚುವ ನಿರೀಕ್ಷೆಯಿದೆ. ಹಲವು ವರ್ಷಗಳಿಂದ ಪುರುಷ ಪ್ರಧಾನ ‘ಧ್ವನಿ’ಯೇ ಸದ್ದು ಮಾಡುತ್ತಿದ್ದ ಪಾಲಿಕೆಯಲ್ಲಿ ಇನ್ನು ‘ಸ್ತ್ರೀಶಕ್ತಿ’ ಕೂಡ ಪ್ರದರ್ಶನವಾಗಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಹೆಚ್ಚಿದ ಮಹಿಳಾ ಆಕಾಂಕ್ಷಿಗಳ ಸಂಖ್ಯೆ: ‘ಮಹಿಳಾ ಪ್ರಾಧಾನ್ಯ ಕ್ಷೇತ್ರಗಳ ಸಂಖ್ಯೆ ಹೆಚ್ಚಿದ್ದರಿಂದ ಸಹಜವಾಗಿಯೇ ಆಕಾಂಕ್ಷಿಗಳ ಸಂಖ್ಯೆ ಕೂಡ ಏರುತ್ತಿದೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಆಮ್‌ ಆದ್ಮಿ ಸೇರಿದಂತೆ ಎಲ್ಲ ಪಕ್ಷಗಳಲ್ಲೂ ಟಿಕೆಟ್‌ಗಾಗಿ ಮುಂದೆ ಬರುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ’ ಎಂದು ಪಕ್ಷದ ಮುಖಂಡರು ಹೇಳುತ್ತಾರೆ.

ಈ ಹಿಂದೆ ಪುರುಷರು ಪ್ರತಿನಿಧಿಸಿದ ಕೆಲವು ಕ್ಷೇತ್ರಗಳೂ ಈಗ ಮಹಿಳೆಯರ ಪಾಲಾಗಿವೆ. ಇದರಿಂದ ಹಲವರು ಮಾಜಿ ಸದಸ್ಯರು ತಮ್ಮ ಪತ್ನಿ, ತಾಯಿ, ಸಂಬಂಧಿ ಮಹಿಳೆಯರನ್ನೇ ಕಣಕ್ಕಿಳಿಸುವ ಸಿದ್ಧತೆ ನಡೆಸಿದ್ದಾರೆ. ಇದು ಸಾಧ್ಯವಾಗದ ಕೆಲವರು ಮೀಸಲಾತಿ ಅನುಸಾರ ಕ್ಷೇತ್ರ ಬಿಟ್ಟುಕೊಟ್ಟು ಬೇರೆಡೆ ವಲಸೆ ಹೋಗುವುದು ಅನಿವಾರ್ಯವಾಗಿದೆ.

ಮತದಾರರ ಸಂಖ್ಯೆಯೂ ಹೆಚ್ಚು: ಮಹಾನಗರ ಪಾಲಿಕೆಯ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಪುರುಷರಿಗಿಂತ 1768 ಮಹಿಳೆಯರು ಹೆಚ್ಚಾಗಿದ್ದಾರೆ. ಒಟ್ಟು ಮತದಾರರ ಸಂಖ್ಯೆ 5,19,464 ಇದ್ದು, ಇದರಲ್ಲಿ 2,58,775 ಪುರುಷರಿದ್ದಾರೆ. ಮಹಿಳೆಯರ ಸಂಖ್ಯೆ 2,60,543 ಇದೆ.

ವಿಶೇಷವೆಂದರೆ 55 ವಾರ್ಡ್‌ಗಳ ಪೈಕಿ 31ರಲ್ಲಿ ಮಹಿಳಾ ಮತದಾರರೇ ನಿರ್ಣಾಯಕ ಎಂಬಷ್ಟರ ಮಟ್ಟಿಗೆ ಅವರ ಸಂಖ್ಯೆ ಹೆಚ್ಚಿದೆ. ಸಹಜವಾಗಿಯೇ ಇದು ಮಹಿಳಾ ಅಭ್ಯರ್ಥಿಗಳಲ್ಲಿ ಹುಮ್ಮಸ್ಸು ಇಮ್ಮಡಿಗೊಳಿಸಿದೆ. ಚುನಾವಣೆಗೂ ಹೊಸ ಕಳೆ ತಂದುಕೊಟ್ಟಿದೆ.

-------

ಮೇಯರ್‌ ಸ್ಥಾನಕ್ಕೇರಿದ ವನಿತೆಯರು

l ಗಂಗೂಬಾಯಿ ವಳಕೇರಿ (ಜೆಡಿಎಸ್‌–1998–99)

l ಚಂದ್ರಿಕಾ ಪರಮೇಶ್ವರ (ಕಾಂಗ್ರೆಸ್– 2005–06)

l ಸಯೀದಾ ಬೇಗಂ (ಕಾಂಗ್ರೆಸ್– 2007–08)

l ಸುನಂದಾ ರಾಜಾರಾಂ (ಬಿಜೆಪಿ–2010-11)

l ಆಲಿಯಾ ಶಿರೀನ್‌ (ಕಾಂಗ್ರೆಸ್‌– 2014–15)

l ಮಲ್ಲಮ್ಮ ವಳಕೇರಿ (ಕಾಂಗ್ರೆಸ್‌–2018–19)

----------

ಮಹಿಳೆ ಕೂಡ ಸಮರ್ಥ ಆಡಳಿತ ಮಾಡಬಲ್ಲಳು

ಎರಡು ದಶಕದ ಹಿಂದೆ ಇದ್ದ ರಾಜಕೀಯ ಮೌಲ್ಯಗಳು ಈಗ ಉಳಿದಿಲ್ಲ. 1998–99ರಲ್ಲಿ ನಾನು ಮೇಯರ್‌ ಆಗಿದ್ದಾಗ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೆ. ಅದನ್ನು ಗಮನಿಸಿ ಭೋಪಾಲ್‌ ಗವರ್ನರ್‌ ನಮ್ಮನ್ನು ಆಹ್ವಾನಿಸಿ, ನಮ್ಮ ಪಾಲಿಕೆ ಮತ್ತು ಮೇಯರ್‌ ಆಗಿದ್ದ ನನಗೆ ಉತ್ತಮ ಸಾಧಕಿ ಪ್ರಶಸ್ತಿ ನೀಡಿದ್ದರು. ₹ 25 ಸಾವಿರ ನಗದು ಬಹುಮಾನ ಕೂಡ ಪಾಲಿಕೆಗೆ ಬಂದಿತ್ತು. ಸದ್ಯ ಸಕ್ರಿಯ ರಾಜಕಾರಣದಿಂದ ದೂರ ಇದ್ದೇನೆ. ಮಹಿಳೆಯರಿಗೆ ಚುಕ್ಕಾಣಿ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತಾರೆ ಎನ್ನುವುದಕ್ಕೆ ಕಲಬುರ್ಗಿ ಪಾಲಿಕೆಯೂ ನಿರ್ದರ್ಶನ.

–ಗಂಗೂಬಾಯಿ ವಳಕೇರಿ, ಮಾಜಿ ಮೇಯರ್‌, ಜೆಡಿಎಸ್‌

---------

ಆಡಳಿತದಲ್ಲಿ ಶಿಸ್ತು ಸಾಧ್ಯ

ಪಾಲಿಕೆ ಚುನಾವಣೆಯಿಂದ ನಾನೀಗ ಹೊರಬಂದಿದ್ದೇನೆ. ಸದಸ್ಯಳಾಗಿ, ಉಪ ಮೇಯರ್‌ ಆಗಿ, ಮೇಯರ್‌ ಆಗಿ ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ. ಒಮ್ಮೆ ಕಾಂಗ್ರೆಸ್‌ನಿಂದ ವಿಧಾನಸಭಾ ಕ್ಷೇತ್ರಕ್ಕೂ ಸ್ಪರ್ಧಿಸಿ, ಸ್ವಲ್ಪದರಲ್ಲೇ ಹಿಂದೆ ಬಿದ್ದೆ. ನನ್ನ ಮುಂದಿನ ನಡೆ ಕೂಡ ವಿಧಾನಸಭಾ ಕ್ಷೇತ್ರದಲ್ಲೇ ಇರಲಿದೆ. ಸದ್ಯ ಮಹಿಳೆಯರಿಗೆ ಹೆಚ್ಚು ಸ್ಥಾನಗಳು ಸಿಗುತ್ತಿರುವುದು ಆಶಾದಾಯಕ ಬೆಳವಣಿಗೆ. ಪಾಲಿಕೆ ಆಡಳಿತದಲ್ಲೂ ಇದು ಶಿಸ್ತು ತರಲಿದೆ.

–ಚಂದ್ರಿಕಾ ಪರಮೇಶ್ವರ, ಮಾಜಿ ಮೇಯರ್‌, ಕಾಂಗ್ರೆಸ್‌

ಅವಕಾಶದ ಬಾಗಿಲು ತೆರೆದಿದೆ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ 50ರಷ್ಟು ಮೀಸಲಾತಿ ತುಂಬ ಆಶಾದಾಯಕ ಬೆಳವಣಿಗೆ. ಮುಖಂಡರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತೆಯರಿಗೂ ಇದು ಅವಕಾಶದ ಬಾಗಿಲು ತೆರೆಯಲಿದೆ. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ 27 ಅಥವಾ ಅದಕ್ಕೂ ಹೆಚ್ಚು ಮಹಿಳೆಯರೇ ಇರುತ್ತಾರೆ ಎನ್ನವುದು ಗಮನಾರ್ಹ. ಇದೇ ಮೊದಲ ಬಾರಿಗೆ ಪಾಲಿಕೆ ಆಡಳಿತದಲ್ಲಿ ಪುರುಷರಿಗೆ ಸಮನಾಗಿ ಮಹಿಳೆಯರ ಧ್ವನಿಯೂ ಕೇಳಿಬರುತ್ತದೆ ಎಂಬ ಉಮೇದು ಬಂದಿದೆ.

–ವಿಜಯಲಕ್ಷ್ಮಿ ಸಿ. ಗೊಬ್ಬೂರಕರ್‌, ಬಿಜೆಪಿ ಮಹಾನಗರ ಘಟಕದ ಉಪಾಧ್ಯಕ್ಷೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು