ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಸಿದ ರೆಮ್‌ಡಿಸಿವಿರ್‌ ಖಾಲಿ ಬಾಟಲ್‌ ಮರಳಿಸುವುದು ಕಡ್ಡಾಯ

ಖಾಸಗಿ ಆಸ್ಪತ್ರೆಗಳಲ್ಲಿ ರೆಮ್‌ಡಿಸಿವಿರ್‌, ಆಮ್ಲಜನಕ ಬಳಕೆ ಮೇಲೆ ನಿಗಾ ಇಡಲು ತಜ್ಞರ ಸಮಿತಿ
Last Updated 8 ಮೇ 2021, 5:21 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ಖಾಸಗಿ ಕೋವಿಡ್‌ ಆಸ್ಪತ್ರೆಗಳಲ್ಲಿ ಆಮ್ಲಜನಕ ಹಾಗೂ ರೆಮ್‌ಡಿವಿಸಿರ್‌ ಚುಚ್ಚುಮದ್ದಿನ ಬಗ್ಗೆ ನಿಗಾ ವಹಿಸಲು ಹಾಗೂ ಅಕ್ರಮ ತಡೆಯಲುಜಿಲ್ಲಾಡಳಿತವು ಆರು ತಜ್ಞರನ್ನು ಒಳಗೊಂಡ ತಾಂತ್ರಿಕ ಸಮಿತಿ ರಚಿಸಿದೆ.

ಖಾಸಗಿ ಆಸ್ಪತ್ರೆಗಳು ಸೋಂಕಿತರ ಆರೋಗ್ಯಸ್ಥಿತಿಯ ಗಂಭೀರತೆ ಪ್ರಮಾಣವನ್ನು ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಮಾಡಿ ರೆಮ್‌ಡಿಸಿವಿರ್‌ ಪಡೆದುಕೊಳ್ಳಬೇಕು. ಅಲ್ಲದೇ, ಬಳಸುವ ಪ್ರತಿಯೊಂದು ರೆಮ್‌ಡಿಸಿವಿರ್‌ ದಾಖಲೆಗಳನ್ನು ಈ ತಾಂತ್ರಿಕ ಸಮಿತಿಗೆ ನೀಡಬೇಕು. ಅದರೊಂದಿಗೆ ಖಾಲಿ ಆದ ವೈಲ್‌ಗಳನ್ನೂ ಮರಳಿಸಬೇಕು ಎಂಬ ನಿಯಮಗಳನ್ನು ಮಾಡಲಾಗಿದೆ.

ಪ್ರತಿ ಆಸ್ಪತ್ರೆ ‍ಪಡೆದುಕೊಂಡ ಆಮ್ಲಜನಕದ ಪ್ರಮಾಣ ಹಾಗೂ ಚುಚ್ಚುಮದ್ದಿನ ಸಂಖ್ಯೆ ಆಧರಿಸಿ ಈ ಸಮಿತಿ ಜಿಲ್ಲಾಡಳಿತಕ್ಕೆ ಆಡಿಟ್‌ ವರದಿ ನೀಡಬೇಕು. ಕೊರತೆ ಅಥವಾ ಅಕ್ರಮ ಕಂಡುಬಂದಲ್ಲಿ ಈ ಸಮಿತಿ ಖುದ್ದು ಪರಿಶೀಲನೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ನೀಡಲಿದೆ. ಸಮಿತಿ ವರದಿ ಸಲ್ಲಿಸಿದ ನಂತರ ಪೊಲೀಸ್‌ ಇಲಾಖೆಯಿಂದ ತನಿಖೆ ಕೂಡ ನಡೆಸಲಿದೆ. ಅಪರಾಧ ಕಂಡುಬಂದಲ್ಲಿ ಆಸ್ಪತ್ರೆಯ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ.

‘ಜಿಲ್ಲಾಡಳಿತದಿಂದ ಆಮ್ಲಜನಕ ಸಿಲಿಂಡರ್‌ ಪೂರೈಕೆ ಪ್ರಮಾಣವನ್ನು ಹೆಚ್ಚಿಸುತ್ತಲೇ ಇದ್ದೇವೆ. ಹೆಚ್ಚಿಗೆ ಪೂರೈಸಿದ್ದಷ್ಟು ಅವುಗಳ ಬೇಡಿಕೆ ಕಡಿಮೆ ಆಗಬೇಕು. ಆದರೆ, ಅದಕ್ಕೆ ವಿರುದ್ಧವಾಗಿ ಬೇಡಿಕೆ ಕೂಡ ದಿನೇದಿನೇ ಹೆಚ್ಚುತ್ತಲೇ ಇದೆ. ಆಮ್ಲಜನಕ ಹಾಗೂ ರೆಮ್‌ಡಿವಿಸಿವರ್‌ ಬಳಕೆ ಮಾಡುವಲ್ಲಿ ಖಾಸಗಿ ಆಸ್ಪತ್ರೆಗಳು ಎಲ್ಲೋ ಎಡವುತ್ತಿವೆ ಎಂಬುದು ತಜ್ಞರ ಅಭಿಮತ. ಇವುಗಳ ಬಳಕೆ ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ನಡೆಯುತ್ತಿಲ್ಲ. ಅನಗತ್ಯವಾಗಿ ಆಮ್ಲಜನಕ ಹಾಗೂ ಇಂಜಕ್ಷನ್‌ ನೀಡುತ್ತಿದ್ದಾರೆ. ಇದರಿಂದ ಅಗತ್ಯ ಇದ್ದವರಿಗೆ ಕೊರತೆ ಉಂಟಾಗುತ್ತಿದೆ. ಇದರ ಮೇಲೆ ನಿಗಾ ಇಡುವ ಉದ್ದೇಶದಿಂದ ಸಮಿತಿ ರಚನೆ ಮಾಡಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಮಾಹಿತಿ ನೀಡಿದರು.

ಸೋಂಕಿತರ ಸ್ಥಿತಿ ಗಂಭೀರವಾದಾಗ ಜೀವರಕ್ಷಕವಾಗಿ ನೀಡುವ ರೆಮ್‌ಡಿಸಿವಿರ್‌ ಚುಚ್ಚುಮದ್ದಿನ ಕೊರತೆ ಜಿಲ್ಲೆಯನ್ನು ತೀವ್ರವಾಗಿ ಕಾಡುತ್ತಿದೆ. ಸೋಂಕಿತರ ಸಂಬಂಧಿಕರು ಇನ್ನಿಲ್ಲದಂತೆ ಪರದಾಡುವ ಸ್ಥಿತಿ ಬಂದಿದೆ.

ಕೈ ಚೆಲ್ಲುವ ಆಸ್ಪತ್ರೆಗಳು: ‘ಖಾಸಗಿ ಆಸ್ಪತ್ರೆಗಳಲ್ಲಿ ಅಡ್ಮಿಟ್‌ ಆದ ಸೋಂಕಿತರು ಇನ್ನೇನು ಸಾಯುವ ಹಂತ ತಲುಪಿದ್ದಾರೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಅವರನ್ನು ಜಿಮ್ಸ್‌ ಆಸ್ಪತ್ರೆಗೆ ಸಾಗಹಾಕುವ ಪ್ರವೃತ್ತಿಯನ್ನು ಕೆಲ ಖಾಸಗಿ ಆಸ್ಪತ್ರೆಗಳು ಮುಂದುವರಿಸಿವೆ. ಇದಕ್ಕೆ ಕಾರಣ ಕೇಳಿದರೆ ತಮ್ಮ ಬಳಿ ರೆಮ್‌ಡಿಸಿವಿರ್‌ ಇಲ್ಲ, ಆಮ್ಲಜನಕ ಪೂರೈಕೆ ಆಗಿಲ್ಲ ಎಂಬ ಎಂಬ ಸಿದ್ಧ ಉತ್ತರ ಸಿಗುತ್ತಿದೆ’ ಎನ್ನುವುದು ಮೂಲಗಳ ಮಾಹಿತಿ.

ಇತ್ತ ಖಾಸಗಿಯಾಗಿ ರೆಮ್‌ಡಿಸಿವಿರ್‌, ಆಮ್ಲಜನಕ ಸಿಲಿಂಡರ್‌ ಸಿಗುತ್ತಿಲ್ಲ. ಜಿಮ್ಸ್‌ಗೆ ದಾಖಲಿಸಬೇಕೆಂದರೆ ಅಲ್ಲಿ ಬೆಡ್‌ಗಳು ಖಾಲಿ ಇಲ್ಲ. ಇದೊಂದೇ ಕಾರಣಕ್ಕೆ ಸೋಂಕಿತರು ಆಸ್ಪತ್ರೆಯ ಒಳಗೆ ನರಳುತ್ತಿದ್ದರೆ, ಅವರ ಸಂಬಂಧಿಕರು ಹೊರಗಡೆ ನರಳುವಂತಾಗಿದೆ.

ತಾಂತ್ರಿಕ ಸಮಿತಿಯಲ್ಲಿ ಯಾರಿದ್ದಾರೆ?
* ಇಎಸ್‌ಐಸಿ ಆಸ್ಪತ್ರೆಯ ಪಲ್ಮೋನಾಲಾಜಿಸ್ಟ್‌ ಡಾ.ಲಾವಣ್ಯ
* ಜಿಮ್ಸ್‌ನ ಜನರಲ್‌ ಮೆಡಿಸಿನ್‌ ವಿಭಾಗದ ಮುಖ್ಯಸ್ಥ ಡಾ.ಜಿ.ಬಿ. ದೊಡ್ಡಮನಿ
* ಜಿಮ್ಸ್‌ ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ.ಜಗದೀಶ
* ಇಎಸ್ಐಸಿಯ ಅರಿವಳಿಕೆ ವಿಭಾಗದ ಅಸೋಸಿಯೇಟ್‌ ಪ್ರೊಫೆಸರ್‌ ಡಾ.ಡಿ.ದೀಪಕ್‌
* ಜಿಮ್ಸ್‌ನ ಬಯೊಮೆಡಿಕಲ್‌ ಎಂಜಿನಿಯರ್‌ ರಮೇಶ ಪ್ಯಾಟಿ
* ಪೊಲೀಸ್‌ ಇನ್‌ಸ್ಪೆಕ್ಟರ್‌ವಾಜಿದ್‌ ಪಟೇಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT