ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳಂದಕ್ಕೆ ವಿಶೇಷ ಅನುದಾನ ತರುವಲ್ಲಿ ಶಾಸಕ ಬಿ.ಆರ್.ಪಾಟೀಲ ವಿಫಲ: ಸುಭಾಷ ಗುತ್ತೇದಾರ

Published : 23 ಸೆಪ್ಟೆಂಬರ್ 2024, 14:19 IST
Last Updated : 23 ಸೆಪ್ಟೆಂಬರ್ 2024, 14:19 IST
ಫಾಲೋ ಮಾಡಿ
Comments

ಆಳಂದ: ಸೆ.17ರಂದು ಕಲಬುರಗಿಯಲ್ಲಿ ಜರುಗಿದ ಸಚಿವ ಸಂಪುಟ ಸಭೆಯಿಂದ ಆಳಂದ ಮತಕ್ಷೇತ್ರಕ್ಕೆ ಯಾವುದೇ ಲಾಭವಾಗಿಲ್ಲ. ಮುಖ್ಯಮಂತ್ರಿಗಳ ಸಲಹೆಗಾರರಾಗಿರುವ ಆಳಂದ ಶಾಸಕ ಬಿ.ಆರ್.ಪಾಟೀಲ ಆಳಂದ ತಾಲ್ಲೂಕಿನ ಮಹತ್ವದ ಕೆರೆ ತುಂಬಿಸುವ ಯೋಜನೆಗೆ ಅನುಮೋದನೆ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ’ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಆಪಾದಿಸಿದರು.

ಸೋಮವಾರ ಆಳಂದ ಪಟ್ಟಣದ ಸ್ವಗೃಹದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಉದ್ದು, ಹೆಸರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದರೂ ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ತೆಗೆದಿಲ್ಲ. ಇದರಿಂದ ರೈತಾಪಿ ವರ್ಗಕ್ಕೆ ನಷ್ಟವಾಗುತ್ತಿದೆ. ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ದರ ದೊರೆಯುತ್ತಿಲ್ಲ. ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಿ ಪ್ರತಿ ರೈತರಿಂದ ಉದ್ದು, ಹೆಸರು ಖರೀದಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ತಾಲ್ಲೂಕಿನಲ್ಲಿ ಹೆಚ್ಚು ಮಳೆ ಬಂದಿರುವುದರಿಂದ ಮುಂಗಾರು ಬೆಳೆಗಳಾದ ಹೆಸರು, ಉದ್ದು, ತೊಗರಿ, ಸೋಯಾಬಿನ್ ಬೆಳೆಗಳು ಮಳೆಯಿಂದ ಹಾಳಾಗಿವೆ. ಹಾಳಾದ ಬೆಳೆಗಳಿಗೆ ಪರಿಹಾರ ನೀಡಬೇಕು’ ಎಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ ಒತ್ತಾಯಿಸಿದ್ದಾರೆ.

ಶಾಸಕ ಬಿ.ಆರ್.ಪಾಟೀಲರಿಂದ ಯಾವುದೇ ಹೊಸ ಕಾಮಗಾರಿಗಳು ಕ್ಷೇತ್ರಕ್ಕೆ ಬಂದಿಲ್ಲ. ಕೇವಲ ಚಲಾವಣೆಯಲ್ಲಿರಬೇಕು ಎಂಬ ಉದ್ದೇಶದಿಂದ ನಮ್ಮ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಬೇರೆ ಬೇರೆ ಹೆಸರು ಕೊಟ್ಟು ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಕೆಕೆಆರ್‌ಡಿಬಿಗೆ ₹5 ಸಾವಿರ ಕೋಟಿ ನೀಡುವ ತೀರ್ಮಾನ ಮಾಡಿದ್ದು ಬಿಜೆಪಿ ಸರ್ಕಾರ. ಸಚಿವಾಲಯ ಸ್ಥಾಪಿಸುವ ನಿರ್ಧಾರ ಉತ್ತಮವಾದದ್ದು. ಆದರೆ ಅದನ್ನು ಕಾಲಮಿತಿಯಲ್ಲಿ ಜಾರಿಗೊಳಿಸಬೇಕು. ಸಚಿವ ಸಂಪುಟ ಸಭೆ ನಡೆದಿರುವ ಬಗ್ಗೆ ಕಾಂಗ್ರೆಸ್ ಶಾಸಕರೇ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಕೆಕೆಆರ್‌ಡಿಬಿಯ ಯೋಜನೆಗಳನ್ನೇ ಪುನಃ ಘೋಷಣೆ ಮಾಡಿದ್ದಾರೆ. ಈ ಭಾಗದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಆಗಿಲ್ಲ’ ಎಂದು ಹೇಳಿದರು.

ಕಲಬುರಗಿ ಸಂಪುಟ ಸಭೆ ಈ ಭಾಗದ ಕಾಂಗ್ರೆಸ್‌ ಶಾಸಕರಲ್ಲೇ ಅಸಮಾಧಾನ ಹುಟ್ಟು ಹಾಕಿದೆ. ಸ್ವತಃ ಆಳಂದ ಶಾಸಕ ಬಿ.ಆರ್.ಪಾಟೀಲ ಅಸಮಾಧಾನ ಹೊರ ಹಾಕಿದ್ದಾರೆ. ಸಚಿವ ಸಂಪುಟ ಸಭೆಯ 46 ನಿರ್ಣಯಗಳಲ್ಲಿ ಪ್ರಭಾವಿಗಳ ಕ್ಷೇತ್ರಕ್ಕೆ ಮಣೆ ಹಾಕಲಾಗಿದೆ. ಕಲಬುರಗಿ, ಸೇಡಂ, ಜೇವರ್ಗಿ ಕ್ಷೇತ್ರಗಳಿಗೆ ಅತ್ಯಧಿಕ ಅನುದಾನ ನೀಡಲಾಗಿದೆ. ಇದರಿಂದ ಇದೊಂದು ವ್ಯರ್ಥ ಸಚಿವ ಸಂಪುಟ ಸಭೆ ಎಂದು ಸುಭಾಷ ಗುತ್ತೇದಾರ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಮಲ್ಲಣ್ಣಾ ನಾಗೂರೆ, ಶರಣಬಸಪ್ಪ ಸಂಜವಾಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT