ಸೋಮವಾರ, ಜುಲೈ 4, 2022
20 °C
ನಗರದ ವಿವಿಧ ಶಾಲೆ, ಕಾಲೇಜುಗಳಲ್ಲಿ ನೇತಾಜಿ ಜನ್ಮ ದಿನದ ಅಂಗವಾಗಿ ಪರಾಕ್ರಮ ದಿವಸ್‌ ಆಚರಣೆ

ಸ್ವಾತಂತ್ರ್ಯ ಚಳವಳಿಯ ಕಿಡಿ ಸುಭಾಷಚಂದ್ರ ಬೋಸ್‌: ಐ.ಎಸ್‌.ವಿದ್ಯಾಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಸುಭಾಷಚಂದ್ರ ಬೋಸ್‌ ಅವರು ಕಟ್ಟಲು ಹೊರಟಿದ್ದ ಭಾರತ ಅತ್ಯಂತ ವಿಭಿನ್ನ ಹಾಗೂ ಆದರ್ಶಮಯವಾಗಿತ್ತು. ದೇಶವನ್ನು ಬ್ರಿಟಿಷರ ಮುಷ್ಟಿಯಿಂದ ಸ್ವತಂತ್ರಗೊಳಿಸಲು ಅವರು ಹೆಣೆದಿದ್ದ ಹೋರಾಟ ರೋಮಾಂಚನಕಾರಿ’ ಎಂದು ಡಾ.ಅಂಬೇಡ್ಕರ್‌ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದ ಪ್ರಾಚಾರ್ಯ ಐ.ಎಸ್‌.ವಿದ್ಯಾಸಾಗರ ಹೇಳಿದರು.

ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪರಾಕ್ರಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಜರ್ಮನ್‌ ದೇಶದ ಹಿಟ್ಲರ್‌ನೊಂದಿಗೆ ಕೂಡಿಕೊಂಡು ಭಾರತದಿಂದ ಬ್ರಿಟಿಷರನ್ನು ಹೊಡೆದೊಡಿಸಲು ಕಂಕಣ ಬದ್ಧರಾಗಿದ್ದರು. ಅವರ ಪರಾಕ್ರಮಿ ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ ದಾರಿದೀಪವಗಬೇಕು’ ಎಂದರು.

ಇತಿಹಾಸ ಪ್ರಾಧ್ಯಾಪಕ ಗಾಂಧಿಜಿ ಮೋಳಕೆರೆ ಮಾತನಾಡಿ, ‘ನೇತಾಜಿ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ದ್ವಿಮುಖ ಪಾತ್ರ ವಹಿಸಿದ್ದರು. ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳನ್ನು ಪಾಲನೆ ಮಾಡಿಕೊಂಡು ತಮ್ಮ ಪ್ರಾಣವನ್ನು ದೇಶಕ್ಕಾಗಿ ಮುಡಿಪಿಟ್ಟರು. ಬ್ರಿಟಿಷರನ್ನು ದೇಶದಿಂದ ಮುಕ್ತಿಗೊಳಿಸುವುದಕ್ಕಾಗಿ ‘ಇಂಡಿಯನ್ ನ್ಯಾಷನಲ್ ಆರ್ಮಿ’ ಎಂಬ ಸೈನಿಕ ಪಡೆಯನ್ನು ರಚಿಸಿ ಹೊರಾಡಿದ ಮಹಾನ್‌ ದೇಶಭಕ್ತ’ ಎಂದು ಹೇಳಿದರು.

ವಿದ್ಯಾರ್ಥಿಗಳಿಂದ ನೇತಾಜಿ ಸುಭಾಷಚಂದ್ರ ಬೋಸರ ಕುರಿತು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ಪ್ರೊ.ನಿರ್ಮಲಾ ಸಿರಗಾಪುರ, ಅನೀಲಕುಮಾರ ರಾಜನಾಳಕರ, ಪ್ರೊ.ಮಹಾಂತೇಶ ಬಿದನೂರು, ಪ್ರೊ.ದಶರಥ ಇದ್ದರು. ರಾಷ್ಟ್ರೀಯ ಸೇವಾಯೋಜನೆಯ ಅಧಿಕಾರಿ ಪ್ರೊ.ಸಿದ್ದಪ್ಪ ಎಂ. ಕಾಂತಾ ನಿರೂಪಿಸಿದರು. ಪ್ರೊ.ಅರುಣ ವಂದಿಸಿದರು.

ಅನನ್ಯ ಕಾಲೇಜು: ನಗರದ ಅನನ್ಯ ಪದವಿ ಮತ್ತು ಸ್ನಾತಕೋತ್ತರ ಎಂಎಸ್‌ಡಬ್ಲ್ಯೂ ಮಹಾವಿದ್ಯಾಲಂಯದಲ್ಲಿ ನೇತಾಜಿ ಸುಭಾಷಚಂದ್ರ ಬೋಸ್ ಅವರ 125ನೇ ಜನ್ಮೋತ್ಸವ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷೆ ಸುಷ್ಮಾವತಿ ಎಸ್. ಹೂನಗೇಜಿ ಮಾತನಾಡಿ, ‘ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂಬ ವಾಕ್ಯ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಅದೆಷ್ಟೋ ಜನರಿಗೆ ಸ್ಫೂರ್ತಿ ತುಂಬಿತ್ತು. ಅಂದು ಸಿಡಿಲಬ್ಬರದ ಈ ಮಾತು ಕೇಳಿದ್ದ ಪ್ರತಿಯೊಬ್ಬರಲ್ಲೂ ದೇಶಪ್ರೇಮದ ಕಿಚ್ಚು ಜಾಗೃತವಾಗುತ್ತಿತ್ತು. ಇದು ನೇತಾಜಿ ಅವರಲ್ಲಿದ್ದ ಶಕ್ತಿ’ ಎಂದರು.

ಪ್ರಾಂಶುಪಾಲರಾದ ಶರಣು ಬಿ ಹೂನಗೇಜಿ (ಪೂಜಾರಿ), ಸುಧಾ, ಇಂದುಮತಿ, ರೇಣುಕಾ ರಾಜಕುಮಾರ್, ಸುಜಾತ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿವಿಧೆಡೆ ಬೋಸ್‌ ಜಯಂತಿ: ನಗರದ ವಿ.ಜಿ ಮಹಿಳಾ ಮಹಾವಿದ್ಯಾಲಯ, ಉರ್ದು ಸರ್ಕಾರಿ ಶಾಲೆ, ಸರ್ಕಾರಿ ಮಹಿಳಾ ಪದವಿ ಮಹಾವಿದ್ಯಾಲಯ, ಸರ್ಕಾರಿ ಸ್ವಾತಂತ್ರ್ಯ ಪದವಿಪೂರ್ವ ಕಾಲೇಜು ಮುಂತಾದ ಕಡೆಗಳಲ್ಲಿ ಎಐಡಿಎಸ್‌ಒ ಆಶ್ರಯದಲ್ಲಿ ಶನಿವಾರ ನೇತಾಜಿ ಸುಭಾಷಚಂದ್ರ ಬೋಸ್‌ ಅವರ ಜಯಂತಿ ಅಂಗವಾಗಿ ಪರಾಕ್ರಮ ದಿವನ್‌ ಕಾರ್ಯಕ್ರಮ ನಡೆಯಿತು.

ಸ್ನೇಹ ಕಟ್ಟಿಮನಿ, ಶಿಲ್ಪಾ ಬಿ.ಕೆ., ಪ್ರೀತಿ ದೊಡ್ಡಮನಿ, ಭಿಮಾಶಂಕರ, ನಾಗರಾಜ್, ಪೂಜಾ, ಮಂಜುಳಾ, ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಸ್‌.ಬಿ.ಆರ್‌.ನಲ್ಲಿ ಪರಾಕ್ರಮ ದಿನಾಚರಣೆ: ಇಲ್ಲಿನ ಎಸ್.ಬಿ.ಆರ್. ಶಾಲೆಯ ಶನಿವಾರ ನೇತಾಜಿ ಸುಭಾಷಚಂದ್ ಬೋಸ್ ಅವರ 125ನೇ ಜನ್ಮ ದಿನವನ್ನು ಪರಾಕ್ರಮ ದಿವಸ್‌ ಆಗಿ ಆಚರಿಸಲಾಯಿತು. ಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮುಖ್ಯ ಅತಿಥಿಗಳಾಗಿ ಪ್ರೊ.ಎಸ್.ಎಲ್. ಪಾಟೀಲ ಭಾಗವಹಿಸಿದ್ದರು. ಶಾಲೆಯ ಹಿಂದಿ ಶಿಕ್ಷಕಿ ಬಸಂತಿ ಆಲ್ಕುರ್ ಅವರು ಗೌರವ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದ ಅಂಗವಾಗಿ ನೇತಾಜಿ ಅವರ ಕುರಿತು ಗಾಯನ, ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು.

ಪ್ರಾಚಾರ್ಯ ಎನ್. ಎಸ್. ದೇವರಕಲ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಜರುಗಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು