ಸೋಮವಾರ, ಏಪ್ರಿಲ್ 12, 2021
32 °C
ನಾಗರಿಕ ಹೋರಾಟ ಸಮಿತಿ, ಎಸ್‌ಯುಸಿಐನಿಂದ ಪಾಲಿಕೆ ಆಯುಕ್ತರಿಗೆ ಮನವಿ

ಕಲಬುರ್ಗಿ: ಉದ್ಯಾನ ಅತಿಕ್ರಮಣ ತಡೆಗಟ್ಟಲು ಒತ್ತಾಯಿಸಿ ‍ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ವಾರ್ಡ್‌ ನಂ 55ರ ಸಾಯಿಮಂದಿರ ಬಡಾವಣೆಯಲ್ಲಿರುವ ರಾಘವೇಂದ್ರ ಲೇಔಟ್, ಸಂಗಮೇಶ್ವರ ಲೇಔಟ್ ಉದ್ಯಾನವನ್ನು ಕೆಲವರು ಅತಿಕ್ರಮಣ ಮಾಡಿದ್ದು, ಕೂಡಲೇ ಅವರನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಉದ್ಯಾನವನ ಉಳಿಸಿ ಸಾಯಿ ಮಂದಿರ ಬಡಾವಣೆ ನಾಗರಿಕ ಹೋರಾಟ ಸಮಿತಿ ಹಾಗೂ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಮಂಗಳವಾರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಉದ್ಯಾನ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಈ ನಿಷ್ಕ್ರಿಯತೆಯನ್ನೇ ಬಂಡವಾಳ ಮಾಡಿಕೊಂಡ ಕೆಲವರು ಅತಿಕ್ರಮಣ ಮಾಡಿ ಮನೆಕಟ್ಟಲು ಪ್ರಾರಂಭಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಳೆದ 12 ವರ್ಷಗಳಿಂದ ಬಡಾವಣೆಯ ಜನತೆ ಸತತ ಪ್ರಯತ್ನ ಮಾಡಿದಾಗಲೂ ಸಾರ್ವಜನಿಕ ಉದ್ಯಾನವನ ಇನ್ನೂ ಜನಬಳಕೆಗೆ ಯೋಗ್ಯವಾಗಿಲ್ಲ. ಲೇಔಟ್‌ನ ಹೆಸರಲ್ಲಿ ನಡೆಯುತ್ತಿರುವ ಅಕ್ರಮಗಳೂ ಸಾರ್ವಜನಿಕ ಉದ್ಯಾನವನವನ್ನು ದುರುಪಯೋಗ ಪಡಿಸಿಕೊಳ್ಳುವುದಕ್ಕೆ ಮೂಲ ಕಾರಣವಾಗಿವೆ. ಜೊತೆಗೆ ಪಾಲಿಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಒತ್ತುವರಿಯಾಗುತ್ತಿದೆ ಎಂದರು.

ಈ ಬಡಾವಣೆಯಲ್ಲಿ ಶಿಕ್ಷಿತರಿಂದ ಕೂಡಿರುವ ಮಧ್ಯಮ ವರ್ಗದ ಜನರಿದ್ದರೂ ಒಂದೂ ಉದ್ಯಾನ ಇಲ್ಲದಿರುವುದರಿಂದ ಜನತೆಗೆ ಭಾರಿ ತೊಂದರೆಯುಂಟಾಗುತ್ತಿದೆ. ಮಕ್ಕಳಿಗೆ ಅಟವಾಡಲು, ವಯೋವೃದ್ಧರು ವಿಶ್ರಾಂತಿಯಿಂದ ಸಮಯ ಕಳೆಯಲು, ಸಾರ್ವಜನಿಕರು ವ್ಯಾಯಾಮ, ವಾಯುವಿಹಾರಕ್ಕಾಗಿ, ವಿದ್ಯಾರ್ಥಿ–ಯುವಜನರು ಕ್ರೀಡಾಂಗಣಕ್ಕಾಗಿ ಬಡಾವಣೆಯಿಂದ ಹೊರಗೆ ಹೋಗಬೇಕಿದೆ. ಆದ್ದರಿಂದ ಅತಿಕ್ರಮಣವನ್ನು ತಡೆಗಟ್ಟಿ ಕೂಡಲೇ ಜನಬಳಕೆಗೆ ಯೋಗ್ಯವಾಗುವಂತೆ ಉದ್ಯಾನ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಹೊಸೂರಕರ್, ನಾಗರಿಕ ಹೋರಾಟ ಸಮಿತಿ ಹಾಗೂ ಎಸ್‌ಯುಸಿಐ ಮುಖಂಡ ಮಹೇಶ ಎಸ್.ಬಿ, ಎ.ಬಿ.ಹೊಸಮನಿ, ಗೌರಮ್ಮ ಸಿ.ಕೆ, ಸ್ನೇಹ ಕಟ್ಟೀಮನಿ, ರಾಧಾ ಜಿ, ಹನುಮಂತ, ವಿ.ಜಿ.ದೇಸಾಯಿ, ಶಿಲ್ಪಾ, ಜ್ಯೋತಿ, ಮಂಜುಳಾ, ಅರುಣ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು