ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಜೀವ ಪಣಕ್ಕಿಟ್ಟು ಅಕ್ಷರ ಕಲಿಸಿದವರು...

ಹಿಂದೆಂದೂ ಕಂಡರಿಯದ ಕೋವಿಡ್ ಬಿಕ್ಕಟ್ಟನ್ನು ಎದುರಿಸಿದ ಶಿಕ್ಷಕ ಸಮುದಾಯ
Last Updated 5 ಸೆಪ್ಟೆಂಬರ್ 2021, 6:56 IST
ಅಕ್ಷರ ಗಾತ್ರ

ಕಲಬುರ್ಗಿ: ತಮ್ಮ ಜೀವಕ್ಕೇ ಎರವಾಗಬಲ್ಲ ಕೋವಿಡ್‌ ಸೋಂಕಿನ ಆತಂಕದ ಮಧ್ಯೆಯೂ ಶಿಕ್ಷಕ ಸಮುದಾಯ ತಮ್ಮನ್ನೇ ನಂಬಿದ ಮಕ್ಕಳಿಗೆ ಅಕ್ಷರ ಧಾರೆಯನ್ನು ಹರಿಸಿದೆ. ಸಾಲದೆಂಬಂತೆ ಮನೆ ಮನೆಗೆ ತೆರಳಿ ಹಸಿವಿನಿಂದ ಕೂತಿದ್ದ ಮಕ್ಕಳಿಗೆ ಆಹಾರ ಧಾನ್ಯಗಳನ್ನೂ ಶಿಕ್ಷಕರು ಹಂಚಿದ್ದಾರೆ. ಹಾಗಾಗಿ, ಕಳೆದ ಬಾರಿಗಿಂತ ಈ ಬಾರಿಯ ಶಿಕ್ಷಕರ ದಿನಾಚರಣೆ ಹೆಚ್ಚು ಅರ್ಥಪೂರ್ಣ ಎನಿಸಿಕೊಂಡಿದೆ.

ಶಿಕ್ಷಕರೆಂದರೆ ಮಕ್ಕಳಿಗೆ ಪಾಠ ಮಾಡುವವರಷ್ಟೇ ಎಂಬ ಪರಿಕಲ್ಪನೆ ದೂರವಾಗಿ ಬಹಳ ಕಾಲವೇ ಆಗಿದೆ. ಚುನಾವಣೆ ಕರ್ತವ್ಯ, ಗಣತಿ ಕಾರ್ಯಕ್ಕೆ ಮುಖ್ಯವಾಗಿ ಬಳಕೆಯಾಗುವವರೇ ಶಿಕ್ಷಕರು. ಇಂತಹ ಕಾರ್ಯವನ್ನು ನಿರ್ವಹಿಸುತ್ತಿರುವಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲೇ ಕಳೆದ ಮೇ ತಿಂಗಳವರೆಗೆ 156 ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿತ್ತು. ಶಿಕ್ಷಕರ ಸಾವು ಮಕ್ಕಳಿಗೆ ಬಹುದೊಡ್ಡ ನಷ್ಟ. ಅದರಲ್ಲೂ ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪೆಟ್ಟು ಕೊಡಲಿದೆ.

ಕೋವಿಡ್ ಹರಡುವ ಆತಂಕದ ಮಧ್ಯೆಯೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೋವಿಡ್ ಆರಂಭದ ಹಂತದಲ್ಲಿ ಸರ್ಕಾರ ವಿದ್ಯಾಗಮವನ್ನು ಜಾರಿಗೆ ತಂದಿತ್ತು. ಮಕ್ಕಳು ಇರುವ ಓಣಿಗಳಿಗೇ ತೆರಳಿ ಪಾಠ ಮಾಡಬೇಕಾದ ಅನಿವಾರ್ಯತೆ ಶಿಕ್ಷಕರದ್ದಾಗಿತ್ತು. ಬಸ್‌, ಆಟೊಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದ ಸಂದರ್ಭದಲ್ಲಿ, ಬೈಕ್‌ನಲ್ಲಿ ಹೊರಟರೂ ಅಡ್ಡಗಟ್ಟಿ ವಾಪಸ್ ಕಳಿಸುವ ಪೊಲೀಸರ ಮನವೊಲಿಸಿ ಶಾಲೆಗೆ ಹೋಗುವುದು ದೊಡ್ಡ ಸಾಹಸವೇ ಆಗಿತ್ತು. ಅದನ್ನೂ ಮೀರಿ ಎಷ್ಟೋ ಶಿಕ್ಷಕರೆಂಬ ಆಪದ್ಬಾಂಧವರು ಗ್ರಾಮೀಣ ಬಡಮಕ್ಕಳ ಮಸ್ತಕದಲ್ಲಿ ಒಂದಷ್ಟು ಅಕ್ಷರಗಳನ್ನು ತುಂಬಿದ್ದರು.

ಶಿಕ್ಷಕಿಯರ ಪರಿಸ್ಥಿತಿಯಂತೂ ಇನ್ನಷ್ಟು ಸವಾಲಿನಿಂದ ಕೂಡಿತ್ತು. ನಿತ್ಯವೂ ಶಾಲೆಗೆ ಹೋಗಬೇಕಾದ ಅನಿವಾರ್ಯತೆ. ಖಾಲಿ ಕುಳಿತುಕೊಳ್ಳುವ ಬದಲು ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಮನೆಗಳಿಗೇ ತೆರಳಿ ಪಾಠ ಪ್ರವಚನ ಹೇಳಿ ಬರಬೇಕಿತ್ತು. ಎಲ್ಲರೂ ಲಾಕ್‌ಡೌನ್ ಕಾರಣಕ್ಕೆ ಮನೆಯಲ್ಲಿದ್ದರೆ ಸರ್ಕಾರಿ ಶಾಲಾ ಶಿಕ್ಷಕ, ಶಿಕ್ಷಕಿಯರು ನಿತ್ಯ ಶಾಲೆಗೆ ತೆರಳಿ ವಿದ್ಯಾರ್ಥಿಗಳು ತರುತ್ತಿದ್ದ ಮನೆ ಪಾಠದ ಪುಸ್ತಕಗಳನ್ನು ನೋಡಿ ಸರಿ ಮಾಡಿ ಕೊಡಬೇಕಿತ್ತು.

ಕೋವಿಡ್‌ ಸೋಂಕು ಕಡಿಮೆಯಾಗುತ್ತಿದ್ದ ಸಂದರ್ಭದಲ್ಲೇ ಎದುರಾದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸಬೇಕಾದ ಸವಾಲು ಎದುರಾಗಿತ್ತು. ಮೊಬೈಲ್‌ ನೆಟ್‌ವರ್ಕ್‌ ಹಳ್ಳಿಗಳಲ್ಲಿನ ಮಕ್ಕಳ ಪರಿಸ್ಥಿತಿ ಅರಿತುಕೊಂಡು ಇದ್ದ ವ್ಯವಸ್ಥೆಯಲ್ಲಿಯೇ ಆನ್‌ಲೈನ್‌ ಬದಲು ಮೊಬೈಲ್‌ ಫೋನ್‌ ಮೂಲಕ ಕರೆ ಮಾಡುವುದಕ್ಕಾಗಿಯೇ ರಾಯಚೂರು ಜಿಲ್ಲೆ ದೇವದುರ್ಗದ ಉತ್ಸಾಹಿ ಶಿಕ್ಷಕರ ತಂಡ ರೂಪಿಸಿದ ಯೋಜನೆ ಯಶಸ್ವಿಯಾಯಿತು. ಅದರಲ್ಲಿ ಕಲ್ಯಾಣ ಕರ್ನಾಟಕದ ಕಲಬುರ್ಗಿ, ಬೀದರ್, ಯಾದಗಿರಿ, ಕೊಪ್ಪಳ ಅಷ್ಟೇ ಅಲ್ಲದೇ ರಾಜ್ಯದ ದಕ್ಷಿಣದ ಜಿಲ್ಲೆಗಳ ವಿಷಯ ತಜ್ಞರ ಮೊಬೈಲ್ ನಂಬರ್‌ಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಆ ಮೂಲಕ ನಿತ್ಯ ಒಂದೆರೆಡು ತಾಸು ಪಠ್ಯದ ಸಂದೇಹಗಳನ್ನು ಪರಿಹರಿಸಿಕೊಳ್ಳಲು ನೀಡಿದ್ದ ಅಪೂರ್ವ ಅವಕಾಶವನ್ನು ಬಳಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆ ಅದೆಷ್ಟೋ ಸಾವಿರ.

ಹೀಗಾಗಿ, ನಿಜ ಅರ್ಥದಲ್ಲಿ ಹರ ಮುನಿದರೆ ಗುರು ಕಾಯುವನು ಎಂಬ ಮಾತು ಅಕ್ಷರಶಃ ಶಿಕ್ಷಕ ಸಮುದಾಯಕ್ಕೆ ಒಪ್ಪುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT