ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತಿನ ಪಟೇಲ್‌ ಮಾದರಿ ಹೋರಾಟ: ಡಾ.ಸರ್ದಾರ ರಾಯಪ್ಪ

ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಡಾ.ಸರ್ದಾರ ರಾಯಪ್ಪ ಎಚ್ಚರಿಕೆ
Last Updated 1 ಸೆಪ್ಟೆಂಬರ್ 2020, 14:44 IST
ಅಕ್ಷರ ಗಾತ್ರ

ಕಲಬುರ್ಗಿ: ‘ತಳವಾರ ಮತ್ತು ಪರಿವಾರ ಸಮುದಾಯಗಳಿಗೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ನಿರಂತರ ಅನ್ಯಾಯ ಆಗುತ್ತಿದೆ. ಇದನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಗುಜರಾತಿನ ಪಟೇಲ್‌ ಹಾಗೂ ಗುಜ್ಜರ ಸಮುದಾಯದವರು ನಡೆಸಿದ ಮಾದರಿಯಲ್ಲಿ ಹೋರಾಟ ಮಾಡುತ್ತೇವೆ’ ಎಂದು ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಡಾ.ಸರ್ದಾರ ರಾಯಪ್ಪ ಎಚ್ಚರಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಅನಿದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ‘ತಳವಾರ ಸಮುದಾಯದಲ್ಲಿ ಇನ್ನೂ ಮೂಢನಂಬಿಕೆ, ಅನಿಷ್ಠ ಪದ್ಧತಿಗಳು ಆಚರಣೆಯಲ್ಲಿವೆ. ಅದರೊಂದಿಗೆ ನಮ್ಮ ಮೇಲೆ ನಿರಂತರ ಶೋಷಣೆಯು ನಡೆಯುತ್ತಿದೆ. ಬೆತ್ತಲೆಯಾಗಿ ಜೋಗಪ್ಪನು ಮೂರ್ತಿಯನ್ನು ಹೊರುವುದು, ನಮ್ಮ ಸಮುದಾಯದ ಮಹಿಳೆಯರು ಬಿಕ್ಷಾಟನೆ ಮಾಡುವುದು ಈಗ ಇಲ್ಲ. ಆದರೆ, ಇಷ್ಟು ಹೀನಾಯ ಸ್ಥಿತಿಯಲ್ಲಿದ್ದ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿರುವುದು ಖಂಡನಾರ್ಹ’ ಎಂದರು.

‘2014ರಲ್ಲಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾದ ‘ತಳವಾರ, ತಳವಾರ ಬೋಯಾವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಪ್ರಸ್ತಾವ’ವನ್ನು ಯಥಾವತ್ತಾಗಿ ಕೇಂದ್ರ ಸರ್ಕಾರ ಅನುಮೋದಿಸಿ ರಾಜ್ಯಪತ್ರ ಹೋರಡಿಸಿದೆ. ಕರ್ನಾಟಕ ಸರ್ಕಾರಕ್ಕೆ ನಿರ್ದೇಶನವನ್ನೂ ನೀಡಿದೆ. ಅದರಂತೆ ರಾಜ್ಯ ಸರ್ಕಾರ ಕೂಡ 2020ರ ಜೂನ್‌ 5ರಂದು ಅಂಗೀಕರಿಸಿ ರಾಜ್ಯಪತ್ರ ಹೊರಡಿಸಿ, ಪರಶಿಷ್ಟ ಪಂಗಡದ ಪ್ರಮಾಣ ಪತ್ರ ನೀಡಿತ್ತು. ಆದರೆ, ಈಗ ಕೆಲ ಸಮುದಾಯದ ರಾಜಕಾರಣಿಗಳ, ಮಠಾಧೀಶರ, ಅಧಿಕಾರಿಗಳ ಮತ್ತು ಸಂಘಟನೆಗಳ ಹಣಬಲ, ತೋಳುಬಲದ ಪ್ರಭಾವಕ್ಕೆ ಮಣಿದು, ಪ್ರಮಾಣಪತ್ರ ನೀಡುವುದನ್ನು ನಿಲ್ಲಿಸಿದೆ. ಈ ಮಸೂದೆ ರಾಷ್ಟ್ರಪತಿ ಅವರಿಂದ ಅಂಗೀಕಾರವಾಗಿದೆ. ಹಾಗೆಯೇ ಎರಡೂ ಸದನಗಳಲ್ಲಿ ಅನುಮೋದನೆ ಪಡೆದಿದೆ. ಮೂರು ಹಂತದಲ್ಲಿ ಅಂಗೀಕಾರವಾದ ಈ ಮಸೂದೆ ಏನೇನು ಅಂಶ ಒಳಗೊಂಡಿದೆ ಎಂದು ನಿಮಗೆ ಗೊತ್ತಿಲ್ಲವೇ? ಅಥವಾ ಅಧಿಕಾರಿಗಳು ನಿಮ್ಮ ಮಾತು ಕೇಳುತ್ತಿಲ್ಲವೆ? ಇದನ್ನು ಏಕೆ ನಿಲ್ಲಿಸಿದ್ದೀರಿ’ ಎಂದು ಅವರು ಖಾರವಾಗಿ ಪ್ರಶ್ನಿಸಿದರು.‌

‘ಖುದ್ದು ಕೆಲ ಜಿಲ್ಲಾಧಿಕಾರಿಗಳ, ತಾಶೀಲ್ದಾರರ, ಅಧಿಕಾರಿಗಳ ತಾರತಮ್ಯ ಮತ್ತು ಸ್ವಜಾತಿ ಹಿತಾಸಕ್ತಿಯಿಂದ ಈ ಸಮುದಾಯಗಳಿಗೆ ಎಸ್‌.ಟಿ ಪ್ರಮಾಣಪತ್ರ ನೀಡಬಾರದೆಂಬ ಉದ್ದೇಶ ಪೂರಕವಾಗಿ ಗೊಂದಲ ಸೃಷ್ಠಿಸುತ್ತಿದ್ದಾರೆ. ಈ ಅಧಿಕಾರಿಗಳಿಗೆ ವಾಸ್ತವಾಂಶ ಗೊತ್ತಿದ್ದರೂ ಸತ್ಯವನ್ನು ಮುಚ್ಚಿಟ್ಟು ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ನಮ್ಮ ವಿಷಯದಲ್ಲಿ ವಿರೋಧ ಪಕ್ಷದ ಮುಖಂಡರು ಕೂಡ ಸರ್ಕಾರದ ಜೊತೆ ಕೈಜೋಡಿಸಿದಂತೆ ಕಾಣುತ್ತಿದೆ. ಸರ್ಕಾರದ ಈ ನೀತಿಯಿಂದ ನಮಗೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅನ್ಯಾಯವಾಗುತ್ತಿದ್ದರೂ ವಿರೋಧ ಪಕ್ಷದ ಯಾವೊಬ್ಬ ನಾಯಕನ ನಮ್ಮ ಪರವಾಗಿ ಧ್ವನಿ ಎತ್ತುತ್ತಿಲ್ಲ. ಇದು ರಾಜ್ಯ ಸರಕಾರದ ದೊಡ್ಡ ವೈಫಲ್ಯ. ನೇರವಾಗಿ ಸರ್ಕಾರದಿಂದ ನಮಗೆ ಸಾಂವಿಧಾನಿಕ ಅನ್ಯಾಯ ಹಾಗೂ ಈ ಜನಾಂಗದ ಮೇಲೆ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ’ ಎಂದೂ ಹೇಳಿದರು.

ಮುಖಂಡರಾದ ರಾಜೇಂದ್ರ ರಾಜವಾಳ, ದೇವೇಂದ್ರ ಚಿಗರಳ್ಳಿ, ಚಂದ್ರಶೇಖರ ಜಮಾದಾರ, ಶಿವು ಸುಣಗಾರ, ಸೈಬಣ್ಣ ಜಾಲಗಾರ, ದಿಗಂಬರ ಕಾಡಪ್ಪಗೋಳ, ಶರಣು ಕೋಲಿ, ದಿಗಂಬರ ಡಾಂಗೆ, ಚಂದ್ರಕಾಂತ್ ಗಂವ್ಹಾರ, ಅನಿಲ ಕಾಮಣ್ಣ ವಚ್ಚಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT