ಚಿತ್ತಾಪುರ: ‘ತಮ್ಮ ವಿರುದ್ಧ ಯಾರೂ ಧ್ವನಿ ಎತ್ತಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದರೆ ಹೋರಾಟದ ಧ್ವನಿ ಅಡಗುತ್ತದೆ ಎಂದು ತಿಳಿದುಕೊಂಡಿದ್ದಾರೆ. ಸುಳ್ಳು ಪ್ರಕರಣಗಳಿಂದ ಸಂವಿಧಾನಬದ್ಧ ಹೋರಾಟದ ಧ್ವನಿ ಅಡಗಿಸಲಾಗದು’ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನರ ಕಷ್ಟ, ಕ್ಷೇತ್ರದ ಸಮಸ್ಯೆಗಳು, ಅಕ್ರಮ, ಅವ್ಯವಹಾರ ಕುರಿತು ಮಾತನಾಡಲು ಸಂವಿಧಾನ ಹಕ್ಕು ನೀಡಿದೆ. ಅದನ್ನು ನಾವು ಬಳಸಿಕೊಂಡು ಮಾತನಾಡುತ್ತೇವೆ’ ಎಂದರು.
‘ಜೈಲಿಗೆ ಕಳಿಸಿದರೆ ಸುಮ್ಮನಿರುತ್ತಾನೆ, ಧ್ವನಿ ಅಡಗುತ್ತದೆ ಎಂದುಕೊಂಡಿದ್ದು ತಪ್ಪು. ಜೈಲಿನಲ್ಲಿದ್ದರೂ ಪ್ರಕರಣ ದಾಖಲಿಸುವುದಕ್ಕೆ ಸಂವಿಧಾನ ಮತ್ತು ಕಾನೂನು ಅವಕಾಶ ಮಾಡಿಕೊಟ್ಟಿದೆ ಎಂಬುದು ಮರೆಯಬಾರದು. ನಾನು ಕಳೆದ 11 ತಿಂಗಳಿಂದ ಕ್ಷೇತ್ರದಿಂದ ದೂರ ಇದ್ದೇನೆ. ನಾನಾಗಿ ಹಾಗೆ ಮಾಡಿಲ್ಲ. ನನ್ನ ವಿರುದ್ಧ ಸುಳ್ಳು ದೂರು, ಪ್ರಕರಣ ಹಾಕಿಸಿ, ಗಡಿಪಾರು ಮಾಡಿದ್ದರಿಂದ ಚಿತ್ತಾಪುರಕ್ಕೆ ಬರಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.
ಮರಳು ದಂಧೆ: ‘ಕಾಗಿಣಾ ನದಿಯನ್ನು ಜೆಸಿಬಿ, ಹಿಟಾಚಿ ಯಂತ್ರಗಳಿಂದ ಬಗೆದು ಮರಳು ಅಕ್ರಮವಾಗಿ ಸಾಗಿಸುವ ಧಂದೆ ವ್ಯಾಪಕವಾಗಿ ನಡೆಯುತ್ತಿದೆ. ನಿಗದಿಗಿಂತ ಹೆಚ್ಚಿನ ಮರಳು ತುಂಬಿದ ಟಿಪ್ಪರ್ ಓಡಾಟದಿಂದ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಸಂಬಂಧಿತ ಅಧಿಕಾರಿಗಳು ತಡೆಯಲು ಮುಂದಾಗುತ್ತಿಲ್ಲ. ಸಚಿವರ ಸರ್ವಾಧಿಕಾರ, ಅಧಿಕಾರ ದುರುಪಯೋಗದಿಂದ ಮರಳು ದಂಧೆ ನಡೆಯುತ್ತಿದೆ. ಕಾಗಿಣಾ ನದಿಯ ಮರಳು ಗಣಿಗಾರಿಕೆ ಅಕ್ರಮದ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಿ ತನಿಖೆಗೆ ಒತ್ತಾಯಿಸುತ್ತೇವೆ’ ಎಂದು ತಿಳಿಸಿದರು.
‘ತಾಲ್ಲೂಕಿನ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರ ನಡೆಯುತ್ತಿರುವ ಮಾಹಿತಿ ದೊರೆತಿದೆ. ಅಗತ್ಯ ದಾಖಲೆ ಸಂಗ್ರಹಿಸಿ ಅವ್ಯವಹಾರದ ವಿರುದ್ಧ ಹೋರಾಟ ನಡೆಸುತ್ತೇವೆ’ ಎಂದರು.
ಬಿಜೆಪಿ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಯುವ ಘಟಕದ ಅಧ್ಯಕ್ಷ ದೇವರಾಜ ತಳವಾರ, ಮುಖಂಡರಾದ ಮಹೇಶ ಬಾಳಿ, ಗುಂಡು ಮತ್ತಿಮಡು, ದೂಳಪ್ಪ ಸಾತನೂರು, ಶ್ರೀಕಾಂತ ಸುಲೇಗಾಂವ, ಮಹೇಶ ಗೌಳಿ, ರಾಜು ಮೊಗಲಾ, ರಾಮಲಿಂಗ ಮೊಗಲಾ ಇದ್ದರು.
‘ಅಕ್ಕಿ ನಾಪತ್ತೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ’
‘ಯಾದಗಿರಿ ಜಿಲ್ಲೆಯ ಸರ್ಕಾರಿ ಗೋದಾಮಿನಿಂದ ₹2 ಕೋಟಿ ಮೌಲ್ಯದ ಪಡಿತರ ಅಕ್ಕಿ ನಾಪತ್ತೆಯಾಗಿರುವ ಪ್ರಕರಣದಲ್ಲಿ ನನ್ನದು ಯಾವುದೇ ಪಾತ್ರವಿಲ್ಲ. ಪ್ರಕರಣದಲ್ಲಿ ನನ್ನ ಹೆಸರು ಅನಗತ್ಯವಾಗಿ ಸೇರಿಸಲಾಗಿದೆ’ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಹೇಳಿದರು.
‘ಅಕ್ರಮವಾಗಿ ಅಕ್ಕಿ ದಂಧೆ ನಡೆಯುತ್ತಿದೆ. ರಾಜ್ಯದ ಎಲ್ಲ ಸರ್ಕಾರಿ ಗೋದಾಮುಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ಅಕ್ರಮ ತಡೆಯಬೇಕು ಎಂದು ಆಹಾರ ಸಚಿವರಿಗೆ, ಪ್ರಧಾನ ಕಾರ್ಯದರ್ಶಿಗೆ ದೂರು ನೀಡಿದ್ದೇನೆ. ಅದನ್ನು ಕಡೆಗಣಿಸಿದ್ದರಿಂದ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ನಂತರ ಗೋದಾಮಿನಿಂದ ಅಕ್ಕಿ ನಾಪತ್ತೆ ಕುರಿತು ಆಹಾರ ಇಲಾಖೆಯ ಅಧಿಕಾರಿ ದೂರು ನೀಡಿದ್ದಾರೆ. ದೂರಿನಲ್ಲಿ ಮೊದಲು ನನ್ನ ಹೆಸರೇ ಇರಲಿಲ್ಲ. ನಂತರ ನನ್ನ ಹೆಸರು ಸೇರ್ಪಡೆ ಮಾಡಲಾಗಿದೆ. ದೂರು ನೀಡಿದ ನನ್ನನ್ನೇ ಆರೋಪಿಯಾಗಿ ಮಾಡಿದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.