ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಇಎಯಿಂದ ಅರ್ಜಿ ಆಹ್ವಾನ: ಸಲ್ಲಿಕೆಯಾಗದ ಅರ್ಜಿ, ಆಕಾಂಕ್ಷಿಗಳ ಪರದಾಟ

Published 7 ಜುಲೈ 2023, 23:30 IST
Last Updated 7 ಜುಲೈ 2023, 23:30 IST
ಅಕ್ಷರ ಗಾತ್ರ

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿವಿಧ ವೃಂದಗಳಲ್ಲಿ ಖಾಲಿ ಇರುವ 670 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಅರ್ಜಿ ನಮೂನೆ ತೆರೆದುಕೊಳ್ಳುತ್ತಿಲ್ಲ. ಇದು ಸರ್ಕಾರಿ ನೌಕರಿಯ ಆಕಾಂಕ್ಷಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಕೆಇಎಯು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಆಹಾರ ಮತ್ತು ಸರಬರಾಜು ನಿಗಮ, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್‌), ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ಸಂಸ್ಥೆಗಳಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಜೂನ್‌ 23ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಅರ್ಜಿ ಆಹ್ವಾನಿಸಿದ ಆರಂಭದಲ್ಲಿಯೇ ಆಕಾಂಕ್ಷಿಗಳಲ್ಲಿ ಗೊಂದಲ ಉಂಟಾಗಿತ್ತು. ಕೆಇಎ ಆರಂಭದಲ್ಲಿ ಒಂದು ಅರ್ಜಿಗೆ ₹1000 ಶುಲ್ಕ ನಿಗದಿಗೊಳಿಸಿತ್ತು. ಆಕಾಂಕ್ಷಿಗಳಿಂದ ವಿರೋಧ ವ್ಯಕ್ತವಾದ ಬಳಿಕ ಅರ್ಜಿ ಶುಲ್ಕವನ್ನು ಕಡಿತಗೊಳಿಸಿತ್ತು. ಈಗ ತಾಂತ್ರಿಕ ಸಮಸ್ಯೆಯಿದ್ದರೂ ಸರಿಪಡಿಸುತ್ತಿಲ್ಲ. ಒಂದು ದಿನ ಕಾಯ್ದರೂ ಅರ್ಜಿ ಸಲ್ಲಿಕೆ ಕಾರ್ಯ ಮುಗಿಯುತ್ತಿಲ್ಲ. ಅರ್ಜಿ ನಮೂನೆ ಭರ್ತಿ ಮಾಡಿದರೆ, ಸಹಿ ಹಾಗೂ ಭಾವಚಿತ್ರಗಳು ಅಪ್‌ಲೋಡ್‌ ಆಗುತ್ತಿಲ್ಲ. ಒಂದು ವೇಳೆ ಅಪ್‌ಲೋಡ್‌ ಆದರೂ ಅರ್ಜಿ ಸ್ವೀಕಾರವಾಗುತ್ತಿಲ್ಲ ಎಂದು ಆಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರಂಭದ ಒಂದೆರಡು ದಿನ ಈ ಸಮಸ್ಯೆಯಿರಲಿಲ್ಲ. ಆದರೆ, ಕಳೆದೊಂದು ವಾರದಿಂದ ತಾಂತ್ರಿಕ ಸಮಸ್ಯೆಯಾಗಿದ್ದು, ಅರ್ಜಿ ಸಲ್ಲಿಕೆಯಾಗುತ್ತಿಲ್ಲ. ಈಗ ನೋಡಿದರೆ ಅರ್ಜಿ ನಮೂನೆಯೇ ತೆರೆದುಕೊಳ್ಳುತ್ತಿಲ್ಲ. ಅರ್ಜಿ ಸಲ್ಲಿಕೆಗೆ ಜುಲೈ 22 ಕೊನೆಯ ದಿನವಾಗಿದ್ದು, ಪರೀಕ್ಷೆ ಪ್ರಾಧಿಕಾರದವರು ಸಮಸ್ಯೆಯನ್ನು ಶೀಘ್ರವೇ ಪರಿಹರಿಸಬೇಕು ಎಂದು ಸರ್ಕಾರಿ ಹುದ್ದೆ ಆಕಾಂಕ್ಷಿ ಗಿರೀಶ್‌ ಒತ್ತಾಯಿಸಿದ್ದಾರೆ.

ಆರ್‌.ಡಿ. ನಂಬರ್‌: ಯೋಜನಾ ನಿರಾಶ್ರಿತರಿಗಾಗಿ ನೀಡಲಾಗಿರುವ ಯೋಜನಾ ನಿರಾಶ್ರಿತ ಪ್ರಮಾಣಪತ್ರದಲ್ಲಿ (ಪಿಡಿಪಿ) ಆರ್‌ಡಿ ನಂಬರ್‌ ಇರುವುದಿಲ್ಲ. ಆದರೆ, ಅರ್ಜಿ ಸಲ್ಲಿಕೆ ವೇಳೆ ಆರ್‌ಡಿ ನಂಬರ್‌ ಕೇಳುತ್ತಿದ್ದು, ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಕೂಡ ಸರಿಪಡಿಸಬೇಕು ಎಂದು ಆಕಾಂಕ್ಷಿಗಳು ಆಗ್ರಹಿಸಿದ್ದಾರೆ.

ಅರ್ಜಿ ಸಲ್ಲಿಕೆ ವೇಳೆ ತಾಂತ್ರಿಕ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಶೀಘ್ರವೇ ಸಮಸ್ಯೆ ಸರಿಪಡಿಸಿ, ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗುವುದು
-ರಮ್ಯಾ, ಕೆಇಎ ನಿರ್ದೇಶಕಿ
ತಾಂತ್ರಿಕ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಶೀಘ್ರವೇ ಸರ್ವರ್‌ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಅವಕಾಶ ವಂಚಿತರಾಗುತ್ತೇವೆ
-ರಫೀಕ್‌ ಚಿನ್ಮಳ್ಳಿ, ಆಕಾಂಕ್ಷಿ, ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT