ಬುಧವಾರ, ಜನವರಿ 22, 2020
24 °C
ದಟ್ಟ ಮಂಜಿನಿಂದ ಕಡಲೆ ಬೆಳೆಗೆ ಹಾನಿ

ದಟ್ಟಮಂಜು: ತೊಗರಿಗೆ ಹಾನಿ, ರೈತರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಮಂಜಿನ ವಾತಾವರಣ ಇದೆ. ಶನಿವಾರ ಸೂರ್ಯೋದಯದ ಸಮಯದಲ್ಲಿ ದಟ್ಟವಾದ ಮಂಜು ಕವಿದು ರೈತ ಸಮುದಾಯ ಆತಂಕ ಪಡುವಂತೆ ಮಾಡಿದೆ.

ದಟ್ಟವಾಗಿ ಮಂಜು ಹೂವಾಡುತ್ತಿರುವ ತೊಗರಿ ಬೆಳೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ತೊಗರಿ ಮೊಗ್ಗಿನ ಕೊನೆಯ ಭಾಗ ಸುಟ್ಟಂತ್ತಾಗಿದೆ. ಹೂವು ಮತ್ತು ಚೆಟ್ಟಿ ಉದುರಿ ಬೆಳೆ ಹಾನಿ ಆಗುತ್ತಿದೆ. ಹುಲುಸಾಗಿ ಬೆಳೆದ ತೊಗರಿ ಬೆಳೆ ಕಂಡು ಬಂಪರ್ ಇಳುವರಿಯ ನಿರೀಕ್ಷೆ ಕಾಣುತ್ತಿದ್ದ ರೈತರಿಗೆ ಈಗ ಇಳುವರಿ ಕುಸಿಯುವ ಆತಂಕ ಶುರುವಾಗಿದೆ.

ತೊಗರಿ ಬೆಳೆ ಸಂರಕ್ಷಣೆಗೆ ರೈತರು ದುಬಾರಿ ಖರ್ಚು ಮಾಡಬೇಕಾಗಿದೆ. ಮಂಜಿನಿಂದಾಗಿ ಹೂವು ಉದುರಿ ಇಳುವರಿ ತುಂಬ ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಭಾಗೋಡಿ ಗ್ರಾಮದ ರೈತ ದೇವಿಂದ್ರ ಅವರು ಶನಿವಾರ ‘ಪ್ರಜಾವಾಣಿ’ಗೆ ಅಳಲು ತೋಡಿಕೊಂಡರು.

‘ನಸುಕಿನಲ್ಲಿ ಶುರುವಾಗುವ ಮಂಜಿನ ವಾತಾವರಣವು ಬೆಳಿಗ್ಗೆ 9 ಗಂಟೆಯವರೆಗೆ ಮುಂದುವರಿಯುತ್ತಿದೆ. 200 ಮೀಟರ್ ದೂರದಲ್ಲಿರುವ ಗಿಡಮರಗಳು, ರಸ್ತೆಯಲ್ಲಿ ಸಂಚರಿಸುವ ವಾಹನಗಳು ಗೋಚರಿಸುತ್ತಿಲ್ಲ. ಲೈಟ್ ಹಾಕಿಕೊಂಡು ವಾಹನಗಳು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ದಂಡೋತಿ ಗ್ರಾಮದ ಸಾಬಣ್ಣ ಭರಾಟೆ ಹೇಳಿದರು.

‘ಚಳಿಗಾಲ ಇರುವುದರಿಂದ ಮಂಜು ಕವಿಯುವುದು ಸಾಮಾನ್ಯ. ಮಂಜಿನಿಂದಾಗಿ ತೊಗರಿ ಬೆಳೆಯ ಹೂವು ಉದುರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಹೂವು ಉದುರುವುದನ್ನು ತಡೆಯಲು ಕೃಷಿ ಇಲಾಖೆಯಲ್ಲಿ ಔ‍ಷಧವಿದೆ. ರೈತರು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಬೆಳೆ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಕೃಷಿ ಇಲಾಖೆಯ ಸೇಡಂ ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಬಾಲರಾಜ ರಂಗರಾವ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು