ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಟೊಮೆಟೊ, ಈರುಳ್ಳಿ ದರ ಇಳಿಕೆ

ಧಾರಾಕಾರ ಮಳೆಯಿಂದ ಸಂಕಷ್ಟಕ್ಕೀಡಾದ ತರಕಾರಿ ವ್ಯಾಪಾರಿಗಳು
Last Updated 20 ಸೆಪ್ಟೆಂಬರ್ 2020, 4:01 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ಹಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆತರಕಾರಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.

ಭಾರಿ ಮಳೆಯಿಂದ ಜಿಲ್ಲೆಯ ವಿವಿಧೆಡೆ ಜಮೀನುಗಳಿಗೆ ನೀರು ನುಗ್ಗಿ ತರಕಾರಿ ಸೇರಿದಂತೆ ಹಲವು ಬೆಳೆಗಳು ಹಾನಿಗೊಳಗಾಗಿವೆ. ಅಲ್ಲದೆ ಹಲವೆಡೆ ರಸ್ತೆಗಳು ಹದಗೆಟ್ಟು, ಸಂಪರ್ಕ ಕಡಿತಗೊಂಡಿದ್ದರಿಂದ ತರಕಾರಿಯನ್ನು ಮಾರುಕಟ್ಟೆಗೆ ಕೊಂಡೊಯ್ಯಲು ರೈತರು ಮತ್ತು ವ್ಯಾಪಾರಿಗಳು ಪರದಾಡುವಂತಾಗಿದೆ.

ಈ ಕಾರಣಗಳಿಂದ ಆವಕ ಕಡಿಮೆಯಾಗಿ ತರಕಾರಿ ಬೆಲೆ ಏರಿಕೆಯಾಗಬಹುದು ಎಂಬ ಲೆಕ್ಕಾ ಚಾರದ ನಡುವೆಯೂ ಟೊಮೆಟೊ, ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ತರಕಾರಿಗಳ ಬೆಲೆ ಇಳಿಕೆಯಾಗಿದೆ.

ಕಳೆದ ವಾರ ಕೆಜಿಗೆ ₹60ರಂತೆ ಮಾರಾಟವಾಗುತ್ತಿದ್ದ ಟೊಮೆಟೊ, ಈ ವಾರ ₹40ಕ್ಕೆ ಮಾರಾಟವಾಗುತ್ತಿದ್ದು ಗ್ರಾಹಕರಿಗೆ ‘ಸಿಹಿ’ಯಾಗಿ ಪರಿಣಮಿಸಿದೆ. ₹40 ಕೆ.ಜಿ ಇದ್ದ ಈರುಳ್ಳಿ ₹30ಕ್ಕೆ ಇಳಿದಿದ್ದರೆ, ಮೆಣಸಿನಕಾಯಿ ₹60ರಿಂದ ₹40ಕ್ಕೆ ಇಳಿಕೆಯಾಗಿದೆ.

ಕಳೆದ ವಾರ ಶತಕದ ಗಡಿ ದಾಟಿದ್ದ ಬೀನ್ಸ್ ಬೆಲೆ ಈ ವಾರ ಅಲ್ಪ ಇಳಿಕೆಯಾಗಿದ್ದು, ಕೆ.ಜಿಗೆ ₹100ರಂತೆ ಮಾರಾಟವಾಗುತ್ತಿದೆ. ಇನ್ನುಳಿದಂತೆಆಲೂಗಡ್ಡೆ, ಬೆಂಡೆಕಾಯಿ, ಬದನೆಕಾಯಿ, ಹೂಕೋಸು, ಸೌತೆಕಾಯಿ ಸೇರಿದಂತೆ ಹಲವು ತರಕಾರಿ ಬೆಲೆಗಳು ಯಥಾಸ್ಥಿತಿ ಕಾಪಾಡಿಕೊಂಡಿವೆ.

ಸೊಪ್ಪು ಸ್ಥಿರ: ಸೊಪ್ಪುಗಳು ಬೆಲೆಯಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದು, ಪಾಲಕ್ ₹20ಕ್ಕೆ 3, ಸಬ್ಬಸಗಿ 4 ಕಟ್ಟುಗಳಂತೆ ಮಾರಾಟವಾಗುತ್ತಿವೆ. ಇನ್ನುಳಿದಂತೆ ಕೊತ್ತಂಬರಿ, ಪುದೀನಾ, ಮೆಂತ್ಯೆ ₹20ಕ್ಕೆ ತಲಾ ಒಂದು ಕಟ್ಟು ಸಿಗುತ್ತಿದೆ. ಕರಿಬೇವಿನ ಒಂದು ಕಟ್ಟು ಬೆಲೆಗೆ ₹10 ಇದೆ.

‘ಕಣ್ಣಿ ಮತ್ತು ತಾಜಸುಲ್ತಾನಪುರ ಮಾರುಕಟ್ಟೆಗಳಿಂದ ತರಕಾರಿ ತಂದು ಮಾರಾಟ ಮಾಡುತ್ತಿದ್ದೇವೆ.ಹೊರ ಜಿಲ್ಲೆಗಳಿಂದ ಬರುತ್ತಿರುವ ತರಕಾರಿ ಆವಕ ಕಡಿಮೆಯಾಗಿದ್ದರಿಂದ ಕೆಲವು ತರಕಾರಿಗಳ ಬೆಲೆ ಹೆಚ್ಚಾಗಿದೆ’ ಎಂದು ತರಕಾರಿ ವ್ಯಾಪಾರಿ ಅಹ್ಮದ್ ತಿಳಿಸಿದರು.

‘ಹಲವು ದಿನಗಳಿಂದ ದಿನವಿಡೀ ಮಳೆ ಸುರಿಯುತ್ತಿರುವುದರಿಂದ ಜನರು ಹೊರಗಡೆ ಬರುತ್ತಿಲ್ಲ. ಇದರಿಂದಾಗಿ ವ್ಯಾಪಾರವೂ ಕಡಿಮೆಯಾಗಿದೆ. ಅಲ್ಲದೆ ಮಾರಾಟವಾಗದ ತರಕಾರಿಯು ಮನೆಯಲ್ಲಿ ಹಾಳಾಗುವ ಭೀತಿ ಉಂಟಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT