ಶುಕ್ರವಾರ, ಮಾರ್ಚ್ 5, 2021
16 °C
ಈಗಾಗಲೇ 20 ಸಾವಿರ ಪ್ರಕರಣ ದಾಖಲು

‘ಜೀವ ರಕ್ಷಣೆಗಾಗಿ ಹೆಲ್ಮೆಟ್‌ ಧರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ನಿಮ್ಮ ಕುಟುಂಬ ನಿಮಗಾಗಿ ಕಾಯುತ್ತಿರುತ್ತದೆ. ಹಾಗಾಗಿ, ರಸ್ತೆಯಲ್ಲಿ ವಾಹನ ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು’ ಎಂದು ಸಂಚಾರ ವಿಭಾಗದ ಎಸಿಪಿ ವೀರೇಶ್‌ ಮನವಿ ಮಾಡಿದರು.

ರಸ್ತೆ ನಿಯಮಗಳ ಬಗ್ಗೆ ತಿಳಿವಳಿಕೆ ಮೂಡಿಸಲು ಜಿಲ್ಲಾ ಪೊಲೀಸ್‌ ವತಿಯಿಂದ ನಗರದ ಎಸ್‌ವಿಪಿ ವೃತ್ತದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೆಲ್ಮೆಟ್‌ ಹಾಕದ್ದಕ್ಕೆ ನಾವು ದಂಡ ಹಾಕುವಾಗ, ಅರೆ ಮತ್ತೆ ಹೆಲ್ಮೆಟ್‌ ಹಾಕುವುದು ಶುರುವಾಯಿತೇ ಎಂದು ಬೈಕ್‌ ಸವಾರರು ಪ್ರಶ್ನಿಸುತ್ತಾರೆ. ಮತ್ತೆ ಶುರುವಾಗಲು ಅದು ನಿಂತೇ ಇರಲಿಲ್ಲ. ಮೊದಲಿನಿಂದಲೂ ಸರ್ಕಾರದ ಆದೇಶದಂತೆ ಹೆಲ್ಮೆಟ್‌ ಕಡ್ಡಾಯ ಮಾಡಲಾಗಿದ್ದು, ಈಗಾಗಲೇ 20 ಸಾವಿರ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗಿದೆ. ಸಾರಿಗೆ ಇಲಾಖೆ ವಿವಿಧ ರಸ್ತೆ ನಿಯಮಗಳ ಉಲ್ಲಂಘನೆಗಾಗಿ ದಂಡದ ಮೊತ್ತವನ್ನು ಬಹಳ ಹೆಚ್ಚಿಸಿದೆ. ದಂಡ ಕೊಡುವ ಬದಲು ನಿಯಮ ಪಾಲಿಸಿದರೆ ನಿಮಗೂ ಕ್ಷೇಮ ಎಂದರು.

ಸಂಚಾರ ವಿಭಾಗದ ಇನ್‌ಸ್ಪೆಕ್ಟರ್‌ ಮಹಾದೇವ ಪಂಚಮುಖಿ ಮಾತನಾಡಿ, ‘ವಿವಿಧ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಸರ್ಕಾರ ₹ 1 ಸಾವಿರದಿಂದ ₹ 25 ಸಾವಿರದವರೆಗೆ ದಂಡದ ಮೊತ್ತವನ್ನು ಹೆಚ್ಚಿಸಿದೆ. ವಾಹನದ ನೋಂದಣಿ ಮಾಡಿಸದೇ ಓಡಿಸುವುದು, ನೋ ಪಾರ್ಕಿಂಗ್‌ ಪ್ರದೇಶದಲ್ಲಿ ನಿಲುಗಡೆ ಮಾಡುವುದು, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವುದು ಅಪಾಯಕಾರಿ. ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ₹ 25 ಸಾವಿರ ದಂಡ ವಿಧಿಸಲಾಗುತ್ತದೆ. ನೋಂದಣಿ ಇಲ್ಲದ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ಮೊದಲ ಬಾರಿ ₹ 5 ಸಾವಿರ, ಎರಡನೇ ಬಾರಿ ₹ 10 ಸಾವಿರ ವಿಧಿಸಬೇಕಾಗುತ್ತದೆ. ಕಡ್ಡಾಯವಾಗಿ ವಾಹನಕ್ಕೆ ವಿಮೆ ಮಾಡಿಸಬೇಕು. ಇಲ್ಲದಿದ್ದರೆ ವಾಹನ ಅಪಘಾತ ಮಾಡಿ ವ್ಯಕ್ತಿಯ ಸಾವಿಗೆ ಕಾರಣರಾದರೆ ನ್ಯಾಯಾಲಯ ₹ 10ರಿಂದ ₹ 15 ಲಕ್ಷದವರೆಗೆ ಶಿಕ್ಷೆ ವಿಧಿಸಬಹುದು. ಹೀಗಾಗಿ, ನಿಯಮಗಳನ್ನು ಚಾಚೂತಪ್ಪದೇ ಪಾಲಿಸಬೇಕು’ ಎಂದು ಮನವಿ ಮಾಡಿದರು.

ಇನ್‌ಸ್ಪೆಕ್ಟರ್‌ ಮಹೇಶ ಪಾಟೀಲ, ಪಿಎಸ್‌ಐಗಳಾದ ಹಸೇನ್‌ಬಾಷಾ, ಭಾರತಿಬಾಯಿ ದನ್ನಿ ವೇದಿಕೆಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು