ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ | ರಸ್ತೆ ಮೇಲೆ ಸಂಕಟದ ಸಂಚಾರ!

Published 12 ಅಕ್ಟೋಬರ್ 2023, 6:14 IST
Last Updated 12 ಅಕ್ಟೋಬರ್ 2023, 6:14 IST
ಅಕ್ಷರ ಗಾತ್ರ

ವಾಡಿ: ಶಹಾಬಾದ್‌ ಹತ್ತಿರ ಕಾಗಿಣಾ ನದಿ ಮೇಲೆ ಸೇತುವೆ ನಿರ್ಮಿಸಲಾಗುತ್ತಿದ್ದು, ಪರ್ಯಾಯ ಉತ್ತಮ ರಸ್ತೆ ಇಲ್ಲದೇ ವಾಹನ ಸವಾರರು ನಿತ್ಯ ಪರದಾಡುತ್ತಿದ್ದಾರೆ.

ಇದರ ಜೊತೆ ಶಹಾಬಾದ್‌ ಹತ್ತಿರ ರೈಲ್ವೆ ಸೇತುವೆ ಸಹ ನಿರ್ಮಿಸಲಾಗುತ್ತಿದ್ದು, ಇಲ್ಲಿ ಸಹ ವಾಹನಗಳ ಓಡಾಟಕ್ಕೆ ಸೂಕ್ತ ರಸ್ತೆ ನಿರ್ಮಿಸದೇ ಇರುವುದು ಸಂಕಷ್ಟಕ್ಕೆ ಕಾರಣವಾಗಿದೆ. ಹಳೆಯ ಸೇತುವೆಗಳನ್ನು ಕಿತ್ತುಹಾಕಿ ಅಗಲ ವಿಸ್ತೀರ್ಣದ ಹೊಸ ಸೇತುವೆ ನಿರ್ಮಾಣವಾಗುತ್ತಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ಆದರೆ ಕಾಮಗಾರಿ ಮುಗಿಯುವವರೆಗೂ ಉತ್ತಮ ಗುಣಮಟ್ಟದ ತಾತ್ಕಾಲಿಕ ರಸ್ತೆ ನಿರ್ಮಿಸಿ ಓಡಾಟಕ್ಕೆ ಅನುಕೂಲ ಮಾಡಿಕೊಡುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎನ್ನುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.

ಹಳೆಯ ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆ ನಿರ್ಮಿಸುತ್ತಿರುವುದು ಸಂತೋಷದ ವಿಷಯ. ಅದರೆ ಸೇತುವೆ ನಿರ್ಮಾಣವಾಗುವರೆಗೂ ಓಡಾಟಕ್ಕೆ ಉತ್ತಮ ರಸ್ತೆ ನಿರ್ಮಿಸಬೇಕು
ಗಣಪತ್ ರಾವ್ ಮಾನೆ, ಎಸ್‌ಯುಸಿಐ (ಸಿ) ಪಕ್ಷದ ಶಹಾಬಾದ ತಾಲ್ಲೂಕು ಸಮಿತಿ ಕಾರ್ಯದರ್ಶಿ

ರಾಷ್ಟ್ರೀಯ ಹೆದ್ದಾರಿ 150 ಇದಾಗಿದ್ದು ಸಹಜವಾಗಿ ವಾಹನ ದಟ್ಟಣೆ ಹೆಚ್ಚಿದೆ. ಅಂದಾಜು 1 ಕಿ.ಮೀ. ರಸ್ತೆ ವಾಹನ ಚಲಾವಣೆಗೆ ಯೋಗ್ಯವಾಗಿಲ್ಲ. ಕಾಮಗಾರಿ ಮುಗಿಯುವವರೆಗೂ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಉತ್ತಮ ಗುಣಮಟ್ಟದ ತಾತ್ಕಾಲಿಕ ರಸ್ತೆ ನಿರ್ಮಿಸಬೇಕು ಎನ್ನುವ ನಿಯಮ ಇಲ್ಲಿ ಉಲ್ಲಂಘಿಸಲಾಗಿದೆ. ಸೇತುವೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ವಾಹನಗಳ ಓಡಾಟಕ್ಕೆ ಉತ್ತಮ ತಾತ್ಕಾಲಿಕ ರಸ್ತೆ ನಿರ್ಮಿಸದೇ ವಾಹನ ಸವಾರರ ಗೋಳಾಟಕ್ಕೆ ಕಾರಣರಾಗಿದ್ದಾರೆ. ಮಣ್ಣಿನ ರಸ್ತೆ ಇದ್ದು ಕನಿಷ್ಠ ಸಮತಟ್ಟು ಸಹ ಮಾಡದೇ ನಿರ್ಲಕ್ಷ್ಯ ವಹಿಸಲಾಗಿದೆ. ರಸ್ತೆ ಮೇಲೆ ಚೀಪುಗಲ್ಲು ತಂದು ಸುರಿದು ಅದರಿಂದಲೇ ರಸ್ತೆ ಮಾಡಲಾಗಿದೆ. ತಗ್ಗು ದಿಣ್ಣೆಗಳಿಂದ ಕೂಡಿರುವ ರಸ್ತೆಯನ್ನು ಹಿಡಿಶಾಪ ಹಾಕುತ್ತಲೇ ದಾಟುವುದು ಅನಿವಾರ್ಯವಾಗಿದೆ. ಮಳೆ ಬಂದರೆ ಸಂಪೂರ್ಣ ಕೆಸರುಮಯವಾದರೆ ಬಿಸಿಲಿನಲ್ಲಿ ದೂಳು ತುಂಬಿಕೊಳ್ಳುತ್ತದೆ. ಇಲ್ಲಿ ಸ್ವಲ್ಪ ಮೈಮರೆತರೂ ಅಪಘಾತ ಖಚಿತ ಎನ್ನುವಂತಿದೆ.

ಕಾಮಗಾರಿ ನಡೆದಿದ್ದು ಪರ್ಯಾಯ ರಸ್ತೆ ಉತ್ತಮವಾಗಿರಿಸಲು ಹಾಗೂ ವಾಹನಗಳ ಓಡಾಟಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು
ರಾಮು, ಎಇಇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಕಳೆದ 8 ತಿಂಗಳಿನಿಂದ ಹದಗೆಟ್ಟ ರಸ್ತೆ ಮೇಲೆ ಓಡಾಡುತ್ತಿದ್ದು ಸಮಸ್ಯೆಯಾಗುತ್ತಿದೆ. ಗುಣಮಟ್ಟದ ತಾತ್ಕಾಲಿಕ ರಸ್ತೆ ನಿರ್ಮಿಸದೇ ಬೇಜವಾಬ್ದಾರಿ ತೋರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ರಾವೂರು ನಿವಾಸಿಗಳಾದ ಮಹೇಬೂಬ್ ಹಾಗೂ ರಾಘವೇಂದ್ರ ಹೂಗಾರ.

ಕಾಗಿಣಾ ಸೇತುವೆ ಕಾಮಗಾರಿ ಪಕ್ಕದ ರಸ್ತೆ ಹಾಳಾಗಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ
ಕಾಗಿಣಾ ಸೇತುವೆ ಕಾಮಗಾರಿ ಪಕ್ಕದ ರಸ್ತೆ ಹಾಳಾಗಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT