ಕಲಬುರಗಿ: ಈ ಬಾರಿ ತೊಗರಿ ಕಣಜ ಕಲಬುರಗಿಯಲ್ಲಿ ನೆಟೆ ರೋಗ ಹಾಗೂ ಅತಿವೃಷ್ಟಿಯಿಂದಾಗಿ ಇಳುವರಿ ಕಡಿಮೆಯಾಗಿದ್ದರಿಂದ ತೊಗರಿ ಬೇಳೆ ಬೆಲೆ ದಿಢೀರ್ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ತಿಂಗಳ ಹಿಂದೆ ₹ 130ಕ್ಕೆ ಕೆ.ಜಿ.ಯಂತೆ ಮಾರಾಟವಾಗುತ್ತಿದ್ದ ತೊಗರಿ ಬೇಳೆ ಇತ್ತೀಚೆಗೆ ಕೆ.ಜಿ.ಗೆ ₹ 175ರಿಂದ ₹ 180ಕ್ಕೆ ಏರಿಕೆಯಾಗಿದೆ. ಐದು ಕೆ.ಜಿ. ಪ್ಯಾಕ್ ಮಾಡಿದ ತೊಗರಿ ಬೇಳೆ ಬೆಲೆ ₹ 892ಕ್ಕೆ ಸಿಗುತ್ತಿದೆ.
ಮಾರುಕಟ್ಟೆಗೆ ತೊಗರಿ ಆವಕ ಗಣನೀಯವಾಗಿ ಕಡಿಮೆಯಾಗಿದ್ದು, ದರವೂ ಪ್ರತಿ ಕ್ವಿಂಟಲ್‌ಗೆ ₹ 12 ಸಾವಿರಕ್ಕೆ ಏರಿಕೆಯಾಗಿದೆ. ಸಹಜವಾಗಿಯೇ ಬೇಳೆ ಉತ್ಪಾದನೆ ಮೇಲೆಯೂ ದರ ಏರಿಕೆ ಪರಿಣಾಮ ಬೀರಿದೆ. ಕಲಬುರಗಿಯಲ್ಲಿ 250ಕ್ಕೂ ಅಧಿಕ ದಾಲ್‌ಮಿಲ್‌ಗಳಿದ್ದು, ತೊಗರಿಯನ್ನು ಖರೀದಿಸಿ ಸಂಸ್ಕರಣೆ ಮಾಡಿ ತೊಗರಿ ಬೇಳೆಯನ್ನು ತಯಾರಿಸುತ್ತಾರೆ. ಇಲ್ಲಿನ ತೊಗರಿ ಬೇಳೆಯು ರಾಜ್ಯದ ಬೆಂಗಳೂರು, ಮಂಗಳೂರು ಅಷ್ಟೇ ಅಲ್ಲದೇ ದೂರದ ತಮಿಳುನಾಡು, ಗುಜರಾತ್‌ಗೂ ರವಾನೆಯಾಗುತ್ತದೆ.
‘ತಿಂಗಳ ಹಿಂದೆ ಪ್ರತಿ ಕೆ.ಜಿ.ಗೆ ₹ 130ರಂತೆ ತೊಗರಿ ಬೇಳೆ ಮಾರಾಟವಾಗುತ್ತಿತ್ತು. ಇದೀಗ ₹ 175ಕ್ಕೆ ಮಾರಾಟವಾಗುತ್ತಿದೆ. ಮುಂಚೆ ಒಮ್ಮೆಲೇ ಐದು ಕೆ.ಜಿ. ಒಯ್ಯುತ್ತಿದ್ದ ಗ್ರಾಹಕರು ಈಗ ಒಂದು ಅಥವಾ ಎರಡು ಕೆ.ಜಿ. ಮಾತ್ರ ಖರೀದಿ ಮಾಡುತ್ತಿದ್ದಾರೆ’ ಎಂದು ಕಲಬುರಗಿ ಕಿರಾಣಿ ಅಂಗಡಿಯೊಂದರ ಮಾಲೀಕ ಶ್ರವಣ್ ತಿಳಿಸಿದರು.
ಕಲಬುರಗಿಯ ನಾಡಾರ್ ದಾಲ್ ಮಿಲ್‌ನ ವಿಜಯನ್ ಮಾತನಾಡಿ, ‘ತೊಗರಿ ಉತ್ಪಾದನೆ ಕಡಿಮೆಯಾಗಿದ್ದರಿಂದ ಬೇಡಿಕೆಯಷ್ಟು ತೊಗರಿ ದೊರೆಯುತ್ತಿಲ್ಲ. ಹೀಗಾಗಿ, ತೊಗರಿ ಬೇಳೆಯ ದರವನ್ನು ಅನಿವಾರ್ಯವಾಗಿ ಹೆಚ್ಚಳ ಮಾಡಿದ್ದೇವೆ’ ಎಂದರು.
Cut-off box - null
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.