ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: 2 ಬಾರಿ ಭೂಕಂಪ, 4 ಬಾರಿ ಸದ್ದು

Last Updated 10 ಅಕ್ಟೋಬರ್ 2021, 4:51 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಗಡಿಕೇಶ್ವಾರ ಸುತ್ತಲಿನ ಹಳ್ಳಿಗಳಲ್ಲಿ 24 ಗಂಟೆಗಳಲ್ಲೇ ಎರಡು ಬಾರಿ ಭೂಕಂಪದ ಅನುಭವವಾಗಿದೆ. ಶುಕ್ರವಾರ ತಡರಾತ್ರಿ 12.44ಕ್ಕೆ ಹಾಗೂ ಶನಿವಾರ ನಸುಕಿನ 5.37ಕ್ಕೆ ಭೂಮಿ ನಡುಗಿದೆ.

ಶುಕ್ರವಾರ ರಾತ್ರಿ 8.14ರ ವೇಳೆ ಭೂಮಿಯಿಂದ ಸ್ಫೋಟಕ ಸದ್ದು ಕೇಳಿಸಿತು. ಜತೆಗೆ ಧಾರಾಕಾರ ಮಳೆಯೂ ಶುರುವಾಯಿತು. ಹೀಗೆ ಭೂಮಿಯಿಂದ ಶಬ್ದ ಬಂದಾಗಲೆಲ್ಲ ಭೂಕಂಪವಾಗುವ ಸಾಧ್ಯತೆ ಎಂದು ಜನ ಮನೆಯಿಂದ ಹೊರಹೋಗುವುದು ರೂಢಿಯಾಗಿದೆ. ಆದರೆ, ಶುಕ್ರವಾ ರಾತ್ರಿ ಧಾರಾಕಾರ ಮಳೆ ಸುರಿಯುತ್ತಿದ್ದ ಕಾರಣ ಸುರಕ್ಷಿತ ಸ್ಥಳಕ್ಕೆ ತೆರಳಲಾಗದೇ ತ್ರಿಶಂಕು ಸ್ಥಿತಿ ಎದುರಿಸಿದರು.

ಮನೆಯ ಒಳಗಡೆ ಭೂಕಂಪದ ಭೀತಿ ಎದುರಾದರೆ, ಹೊರಗಡೆ ಸುರಿಯುತ್ತಿದ್ದ ಮಳೆಯ ಕಾಟ. ಇವೆರಡರ ಮಧ್ಯೆ ವಿದ್ಯುತ್ ಕೈಕೊಟ್ಟಿದ್ದರಿಂದ ಜನ ಜೀವ ಕೈಯಲ್ಲಿ ಹಿಡಿದುಕೊಂಡೇ ರಾತ್ರಿ ಕಳೆದರು. ನಸುಕಿನಲ್ಲಿ ಭೂಕಂಪ ಸಂಭವಿಸಿದ್ದರಿಂದ ಹೌಹಾರಿದ ಜನ ನಿದ್ದೆಯಿಂದಲೇ ಎದ್ದು ಓಡಿ ಮನೆಯ ಹೊರಗಡೆ ಬಂದರು.

‘ಪ‍್ರಜಾವಾಣಿ’ ಜತೆಗೆ ತಮ್ಮ ಅನುಭವ ಹಂಚಿಕೊಂಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ ಚಕ್ರವರ್ತಿ, ‘ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ. ಅಧಿಕಾರಿಗಳು, ವಿಜ್ಞಾನಿಗಳು ಬಂದು ನೀವು ಊರು ತೊರೆಯಿರಿ ಎಂದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ. ನಮಗೆ ಪರಿಹಾರಕ್ಕಿಂತ ಜೀವ ಮುಖ್ಯ. ಆದರೆ, ಸರ್ಕಾರ ಯಾವುದೇ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ’ ಅವರು ತಿಳಿಸಿದರು.

ಗ್ರಾಮ ತೊರೆಯುತ್ತಿರುವ ಜನ: ಭೂಕಂಪಕ್ಕೆ ಹೆದರಿ ನನ್ನ ಪತ್ನಿಯನ್ನು ಮಕ್ಕಳ ಸಮೇತ ತವರಿಗೆ ಕಳುಹಿಸಿದ್ದೆ. ವಿಜಯದಶಮಿ ಹಬ್ಬದ ಅಂಗವಾಗಿ ಘಟಸ್ಥಾಪನೆ ಮಾಡುವುದಕ್ಕಾಗಿ ಕರೆದು ಕೊಂಡು ಬಂದಿದ್ದೇವೆ. ಹಬ್ಬ ಮುಗಿದ ಮೇಲೆ ವಾಪಸ್ ಕಳುಹಿಸುತ್ತೇನೆ ಎಂದು ವೀರೇಶ ರೆಮ್ಮಣಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಭೂಕಂಪದ ತಜ್ಞರು ಬಂದು ಜನರ ಆತಂಕ ನಿವಾರಿಸಬೇಕು. ಇಲ್ಲವಾದರೆ ಪರ್ಯಾಯ ಕ್ರಮ ಕೈಗೊಳ್ಳಬೇಕು ಎಂದು ಮಂಗಳಮೂರ್ತಿ ಹಾಗೂ ಮಾಳಪ್ಪ ಅಪ್ಪೋಜಿ ಅವರು ಆಗ್ರಹಿಸಿದರು.

ಎಲ್ಲೆಲ್ಲಿ, ಯಾವಾಗ ಕಂಪನ?
ಶನಿವಾರ ಬೆಳಿಗ್ಗೆ 5.37ಕ್ಕೆ ಗಡಿಕೇಶ್ವಾರ, ಹಲಚೇರಾ, ತೇಗಲತಿಪ್ಪಿ, ಕುಪನೂರ, ಕೊರವಿ, ದಸ್ತಾಪುರ, ಬೆನಕನಳ್ಳಿ, ಮತ್ತು ಭಂಟನಳ್ಳಿ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದು ಗಡಿಕೇಶ್ವಾರ ಸಮೀಪವೇ ಬರುವ ಕೊರವಿ ಕೇಂದ್ರ ಬಿಂದುವಾಗಿದ್ದ ಭೂಕಂಪವಾಗಿದ್ದು ಭೂಕಂಪದ ತೀವ್ರತೆ 3.6 ಎಂದು ಮೂಲಗಳು ಖಚಿತ ಪಡಿಸಿವೆ.

ಮಧ್ಯಾಹ್ನ 1.55ಕ್ಕೆ ಹಾಗೂ 2 ಗಂಟೆ 5 ನಿಮಿಷಕ್ಕೆ ಮತ್ತೆ ಎರಡು ಬಾರಿ ಭೂಮಿಯಿಂದ ‘ಧನ್‌ಧನ್’ ಎನ್ನುವ ಸದ್ದು ಕೇಳಿಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT