ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಜೀವನಕ್ಕೆ ಉಮೇಶ್‌ ಜಾಧವ್‌ ಯೋಗ್ಯನಲ್ಲ: ವಿಶ್ವನಾಥ ಪಾಟೀಲ ಹೆಬ್ಬಾಳ

Published 25 ಏಪ್ರಿಲ್ 2024, 14:11 IST
Last Updated 25 ಏಪ್ರಿಲ್ 2024, 14:11 IST
ಅಕ್ಷರ ಗಾತ್ರ

ಕಾಳಗಿ: ‘ಸಂಸದ ಡಾ.ಉಮೇಶ ಜಾಧವನನ್ನು ಬಿಜೆಪಿಗೆ ಕರೆತರಲು ಪ್ರಮುಖ ಪಾತ್ರ ವಹಿಸಿದ್ದೆ. ಆದರೆ ಅವನು ಸಾರ್ವಜನಿಕ‌ ಜೀವನದಲ್ಲಿ ಇರಲು ಯೋಗ್ಯ ವ್ಯಕ್ತಿ ಅಲ್ಲ. ಅವನ ಬಗ್ಗೆ ಜಾಸ್ತಿ ಮಾತನಾಡಿದರೆ ನನ್ನ ಗೌರವ ಕಡಿಮೆಯಾಗುತ್ತದೆ. ಪ್ರಜಾಪ್ರಭುತ್ವ ಬೇಕಿದ್ದರೆ ನೀವೆಲ್ಲ ಕಾಂಗ್ರೆಸ್‌ಗೆ ಮತ ನೀಡಿ, ಇಲ್ಲದಿದ್ದರೆ ಸರ್ವಾಧಿಕಾರದ ಸರ್ಕಾರ ಬರುತ್ತದೆ’ ಎಂದು ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಹೇಳಿದರು.

ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿ ಗುರುವಾರ ನಡೆದ ‌ಚುನಾವಣೆ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಮತಯಾಚಿಸಿ ಅವರು ಮಾತನಾಡುತ್ತಿದ್ದರು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ‘ಅಕ್ರಮ ಚಟುವಟಿಕೆಗಳಲ್ಲಿ ಆರೋಪಿಯಾಗಿದ್ದ ಕ್ರಿಮಿನಲ್‌ಗಳಿಗೆ ಮತ ಬಂದಿವೆ ಎಂದರೆ ಅಚ್ಚರಿಯಾಗುತ್ತದೆ‌. ನೀವೆಲ್ಲ ನನ್ನನ್ನು ಗೆಲ್ಲಿಸಿದ್ದೀರಿ. ಒಂದು ವೇಳೆ ಅಂತಹ ವ್ಯಕ್ತಿ ಗೆದ್ದಿದ್ದರೆ ಗ್ರಾಮೀಣ ಭಾಗದ ಜನರ, ಯುವಕರ ಹಾಗೂ ಮಹಿಳೆಯರ ಗತಿ ಏನಾಗುತ್ತಿತ್ತು’ ಎಂದು ಕಳವಳ ವ್ಯಕ್ತಪಡಿಸಿದರು.

‘ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ನಾವು ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಮನವಿ ಮಾಡುತ್ತಿದ್ದೇವೆ. ಜನರ ವಿರೋಧಿಗಳು ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಲು ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಮತ ಹಾಕಿ’ ಎಂದು ಮನವಿ ಮಾಡಿದರು.

ಜಿ.ಪಂ‌ ಮಾಜಿ ಅಧ್ಯಕ್ಷ ರಮೇಶ ಮರಗೋಳ ಮಾತನಾಡಿದರು. 

ವೇದಿಕೆಯ ಮೇಲೆ ಮುಖಂಡರಾದ ಭೀಮಣ್ಣ ಸಾಲಿ, ರಾಜೇಶ ಗುತ್ತೇದಾರ, ಸುನೀಲ ದೊಡ್ಡಮನಿ, ಡಾ.ಪ್ರಭುರಾಜ ಕಾಂತಾ, ಶಂಭುಲಿಂಗ ಗುಂಡಗುರ್ತಿ, ಜಯಪ್ರಕಾಶ ಕಮಕನೂರ, ನಬೀಸಾಬ್ ಕೋಡ್ಲಿ, ಪವನ ಪಾಟೀಲ ಉಪಸ್ಥಿತರಿದ್ದರು.

ವಿದೇಶದಲ್ಲಿ ‘ಚಿತ್ತಾಪುರದ ಅಪರಂಜಿ’: ಪ್ರಿಯಾಂಕ್

ಕಾಳಗಿ: ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ ‘ಚಿತ್ತಾಪುರದ ಅಪರಂಜಿ’ ಈಗ ನಾಪತ್ತೆಯಾಗಿ ವಿದೇಶದಲ್ಲಿ ನೆಲೆಸಿದ್ದಾನೆ. ದುಡ್ಡಿಗಾಗಿ ಅವನನ್ನು ಕಳೆದ‌ ವಿಧಾನಸಭಾ‌ ಚುನಾವಣೆಯಲ್ಲಿ ಚಿತ್ತಾಪುರಕ್ಕೆ ಅಭ್ಯರ್ಥಿಯನ್ನಾಗಿ ಮಾಡಿರುವುದಕ್ಕೆ ಬಿಜೆಪಿಯವರು ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

ಖರ್ಗೆ ಸಾಹೇಬರಿಗೆ ಮುಂದಿನ ಪ್ರಧಾನಿ ಆಗುವ ಅವಕಾಶ ಇದೆ. ನೀವು ರಾಧಾಕೃಷ್ಣ ಅವರಿಗೆ ಬೆಂಬಲಿಸಿದರೆ ಇದು ಸಾಧ್ಯ. ಮೋದಿ ಮತ್ತೊಮ್ಮೆ ಕಲಬುರಗಿಗೆ ಬರುತ್ತಿದ್ದಾರೆ. ಮೋದಿ ಅಲ್ಲ ಅವರ ಅಪ್ಪ ಬಂದರೂ ಈ ಸಲ ಕಲಬುರಗಿ ಫಲಿತಾಂಶ ಬದಲಾಯಿಸಲು ಸಾಧ್ಯವಿಲ್ಲ.
ತಿಪ್ಪಣ್ಣಪ್ಪ ಕಮಕನೂರ, ವಿಧಾನ ಪರಿಷತ್ ಸದಸ್ಯ

‘ಸಂಸದ ಡಾ.ಉಮೇಶ ಜಾಧವ ಜಿಲ್ಲೆಗೆ, ಚಿತ್ತಾಪುರಕ್ಕೆ ಹಾಗೂ ನಿಮ್ಮ ಗ್ರಾಮಕ್ಕೆ ಏನು ಮಾಡಿದ್ದಾರೆ? ಶ್ರೀಮಂತರೇ ಹೆಚ್ಚಾಗಿ ಓಡಾಡುವ ವಂದೇ ಭಾರತ ಟ್ರೇನ್ ಪ್ರಾರಂಭಿಸಿ ಅದನ್ನೇ ದೊಡ್ಡ ಸಾಧನೆ ಎನ್ನುವಂತೆ ಬಿಂಭಿಸುತ್ತಿದ್ದಾರೆ. ಒಂದು ವಾರದ ನಂತರ ಅದು ನಿಂತುಹೋಗಿದೆ ಎಂದು ಮಾಹಿತಿ‌ ಇದೆ’ ಎಂದರು.

ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಕೆಪಿಸಿಸಿ ಕಾರ್ಯದರ್ಶಿ ರಮೇಶ ಮರಗೋಳ ಮಾತನಾಡಿದರು. 

ಮುಖಂಡ ಭೀಮಣ್ಣ ಸಾಲಿ, ಶಂಭುಲಿಂಗ ಗುಂಡಗುರ್ತಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

‘ಮೋದಿ ಗೆದ್ದರೆ ಜಗತ್ತಿಗೆ ಮತ್ತೊಬ್ಬ ಹಿಟ್ಲರ್ ಕೊಟ್ಟಂತೆ’

ಚಿತ್ತಾಪುರ: ‘ಬಿಜೆಪಿ ಮತ್ತು ಆರ್‌ಎಸ್‌ಎಸ್ ಮಾತಿನ ಮೋಡಿಗೆ ಒಳಗಾಗಿ ಸರ್ವಾಧಿಕಾರಿಯಂತ್ತಿರುವ ನರೇಂದ್ರ ಮೋದಿಯನ್ನು ಮತ್ತೆ ಗೆಲ್ಲಿಸಿದರೆ ಭಾರತವು ಜಗತ್ತಿಗೆ ಮತ್ತೊಬ್ಬ ಹಿಟ್ಲರ್‌ನನ್ನು ಕೊಟ್ಟಂತ್ತಾಗುತ್ತದೆ’ ಎಂದು ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೇಳಿದರು. 

ಮತಕ್ಷೇತ್ರದ ಮುಗುಳನಾಗಾಂವ ಪೇಠಶಿರೂರ ಗ್ರಾಮಗಳಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರವಾಗಿ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಚಿವ ಪ್ರಿಯಾಂಕ್ ಖರ್ಗೆ ‘ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕೋಲಿ ಸಮಾಜವನ್ನು ಎಸ್.ಟಿ ಪಟ್ಟಿಗೆ ಸೇರಿಸುವ ಕಡತ ರಾಜ್ಯಕ್ಕೆ ವಾಪಾಸ್ ಕಳುಹಿಸಿದೆ. ಕೇಂದ್ರ ಕೇಳಿರುವ ಸ್ಪಷ್ಟೀಕರಣ ಕುರಿತು ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಚುನಾವಣೆ ನಂತರ ಮತ್ತೆ ಕಡತ ಕೇಂದ್ರಕ್ಕೆ ಕಳುಹಿಸಿ ಎಸ್.ಟಿ ಮಾಡಿಸುವ ಜವಾಬ್ದಾರಿ ನನ್ನ ಮೇಲಿದೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ಮರಗೋಳ ಮುಖಂಡರಾದ ಡಾ.ಪ್ರಭುರಾಜ ಕಾಂತಾ ಶಂಭುಲಿಂಗ ಗುಂಡಗುರ್ತಿ ಸುನಿಲ್ ದೊಡ್ಡಮನಿ ಜಯಪ್ರಕಾಶ ಕಮಕನೂರ ನಬಿಸಾಬ್ ಕೋಡ್ಲಾ ಪವನ್ ಪಾಟೀಲ್ ಶರಣಗೌಡ ಪೇಠಶಿರೂರ ನಾಮದೇವ ರಾಠೋಡ ಶಿವಯ್ಯ ಗುತ್ತೆದಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT