ಸೋಮವಾರ, ಫೆಬ್ರವರಿ 17, 2020
27 °C
ಪುರಸಭೆ ಚುನಾಯಿತ ಸದಸ್ಯರಿಗೆ ಸಿಕ್ಕಿಲ್ಲ ಅಧಿಕಾರ; ಅಧಿಕಾರಿಗಳದ್ದೇ ದರ್ಬಾರ್‌

ಅಭಿವೃದ್ಧಿಯಾಗದ ಅಫಜಲಪುರ; ಮೂಲಸೌಲಭ್ಯಕ್ಕೆ ಪರದಾಟ

ಶಿವಾನಂದ ಹಸರಗುಂಡಗಿ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ಪಟ್ಟಣವು ತಾಲ್ಲೂಕು ಕೇಂದ್ರವಾಗಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಒಂದೆಡೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದೇ ಇರುವುದರಿಂದ ಸಮಸ್ಯೆಗಳು ಪರಿಹಾರ ಆಗಿಲ್ಲ. ಇನ್ನೊಂದೆಡೆ ಒದಗಿಸಿದ ಮೂಲಸೌಲಭ್ಯಗಳನ್ನು ಸರಿಯಾಗಿ ನಿರ್ವಹಣೆಯಾಗದೇ ಜನರಿಗೆ ಪರದಾಟ ತಪ್ಪುತ್ತಿಲ್ಲ.

ಪಟ್ಟಣದಲ್ಲಿ ಅಂದಾಜು 30 ಸಾವಿರ ಜನಸಂಖ್ಯೆ ಇದ್ದು, ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅಫಜಲಪುರ ಪುರಸಭೆಯು ಒಟ್ಟು 23 ವಾರ್ಡುಗಳು ಹೊಂದಿದೆ. ಪಟ್ಟಣಕ್ಕೆ ಹೊಂದಿಕೊಂಡು ಎರಡು ತಾಂಡಾಗಳಿದ್ದು ಅವು ಕೂಡ ಮೂಲಸೌಲಭ್ಯಗಳಿಂದ ವಂಚಿತವಾಗಿವೆ.

ಪುರಸಭೆಯಲ್ಲಿ ಅಧಿಕಾರಿಗಳದ್ದೇ ದರ್ಬಾರ್‌ ನಡೆಯುತ್ತಿದೆ. ಪುರಸಭೆಗೆ ಚುನಾವಣೆ ನಡೆದು ಎರಡು ವರ್ಷ ಕಳೆದರೂ ಅಧ್ಯಕ್ಷ– ಉಪಾಧ್ಯಕ್ಷ ಹುದ್ದೆಯ ಮೀಸಲಾತಿ ವಿವಾದದಿಂದಾಗಿ ಆಡಳಿತ ಮಂಡಳಿ ರಚನೆ ಆಗಿಲ್ಲ. ಹೀಗಾಗಿ ನಿವಾಸಿಗಳ ಕುಂದು ಕೊರತೆ ನಿವಾರಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಸೊಳ್ಳೆ ಕಾಟ: ಪಟ್ಟಣದ ಬಸವೇಶ್ವರ ನಗರ, ಇಂದಿರಾನಗರ, ಚೌದ್ರಿ ಗಲ್ಲಿ, ಭೋವಿ ಗಲ್ಲಿ, ನೀಚೆ ಗಲ್ಲಿ, ಎಂ.ಜೆ.ನಗರ, ಅಮೋಘಸಿದ್ಧ ದೇವಸ್ಥಾನ, ಆಶ್ರಯ ಕಾಲನಿಗಳಲ್ಲಿ ಚರಂಡಿ ನೀರು ತುಂಬಿಕೊಂಡಿದೆ. ಅದರಲ್ಲಿಯೇ ಹಂದಿಗಳು ವಾಸ ಮಾಡುತ್ತಿವೆ. ಸೊಳ್ಳೆಗಳ ಕಾಟವಂತೂ ಹೇಳತೀರದಾಗಿದೆ. ಪಟ್ಟಣದಾದ್ಯಂತ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಜನರಿಗೆ ಕಾಯಿಲೆ ಹರಡುವ ಭೀತಿ ಉಂಟಾಗಿದೆ.

ಚರಂಡಿ ಅವ್ಯವಸ್ಥೆ: ಪಟ್ಟಣದಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿದ್ದರಿಂದ ಯಾವ ವಾರ್ಡಿನಲ್ಲಿಯೂ ಚರಂಡಿ ನೀರು ಸರಾಗವಾಗಿ  ಹರಿದು ಹೋಗುತ್ತಿಲ್ಲ. ಮಳೆ ಬಂದರೆ ಮಾತ್ರ ಚರಂಡಿ ನೀರು ಹೊರಗೆ ಬಂದು ರಸ್ತೆಯಲ್ಲಿ ಹರಿಯುತ್ತದೆ. ಕೆಲ ವಾರ್ಡುಗಳಲ್ಲಿ ಚರಂಡಿ ನೀರು  ಮನೆಯೊಳಕ್ಕೆ ಸೇರಿಕೊಳ್ಳುತ್ತದೆ ಎಂದು ಪುರಸಭೆಯ ಸದಸ್ಯರಾದ ಶಿವ ಪದಕಿ, ಶಿವಾನಂದ ಸಲಗರ ಹೇಳುತ್ತಾರೆ.

ಹಂದಿಗಳ ಹಾವಳಿ

ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿ ಕೆಳಗಡೆ ಹಂದಿಗಳು ವಾಸ ಮಾಡಿಕೊಂಡಿವೆ. ವಾರ್ಡ್  ಸಂಖ್ಯೆ- 4 ರಲ್ಲಿರುವ ಉರ್ದು ಶಾಲೆಯ ಹಿಂಭಾಗದಲ್ಲಿ ಜನರು ತ್ಯಾಜ್ಯ ವಸ್ತುಗಳನ್ನು ಬಿಸಾಡುತ್ತಿರುವುದರಿಂದ ಅದು ಹಾಳು ಕೊಂಪೆಯಾಗಿದೆ. ಅಲ್ಲಿ ಒಂದು ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಇನ್ನೊಂದು ಶೌಚಾಲಯ ಬೆಳಿಗ್ಗೆ 11 ಗಂಟೆವರೆಗೆ ಮಾತ್ರ ತೆರೆದಿರುತ್ತದೆ ಮತ್ತೆ ಸಂಜೆ 5 ಗಂಟೆಗೆ ತೆರೆಯುತ್ತದೆ. ಉಳಿದ ಅವಧಿಯಲ್ಲಿ ಮಹಿಳೆಯರರು ಬಹಿರ್ದೆಸೆಗಾಗಿ ಗಿಡಗಂಟಿಗಳ ಮೊರೆ ಹೋಗುವ ಪರಿಸ್ಥಿತಿ ಇದೆ.

ಬೆಳಗದ ಬೀದಿ ದೀಪ

ಪಟ್ಟಣದ ಅಂಬೇಡ್ಕರ್ ವೃತ್ತ ಮತ್ತು ವಿವಿಧ ವಾರ್ಡುಗಳ ಪ್ರಮುಖ ಸ್ಥಳಗಳಲ್ಲಿ ಸೇರಿ ಒಟ್ಟು 8-10 ಹೈಮಾಸ್ಟ್‌ ವಿದ್ಯುತ್ ದೀಪಗಳು ನಿರ್ವಹಣೆ ಇಲ್ಲದ ಹಾಳಾಗಿವೆ. ರಾತ್ರಿ ವೇಳೆಯಲ್ಲಿ ಜನರು ಸಂಚರಿಸುವುದು ಕಷ್ಟವಾಗುತ್ತಿದೆ. ಕೆಲವೆಡೆ ಬೀದಿ ದೀಪಗಳು ಹಾಳಾಗಿದ್ದರೆ ಇನ್ನು ಕೆಲವೆಡೆ  ಹಗಲಿನಲ್ಲಿಯೇ ವಿದ್ಯುತ್ ದೀಪಗಳು ಉರಿಯುತ್ತಿರುತ್ತವೆ. ಈ ಕುರಿತು ಪುರಸಭೆಯವರಿಗೆ ದೂರು ನೀಡಿದರೆ ಹಾರಿಕೆ ಉತ್ತರ ಹೇಳಿ ಜಾರಿಕೊಳ್ಳುತ್ತಾರೆ ಎಂದು ಪಟ್ಟಣದ ನಾಗರಿಕರಾದ ರಮೇಶ್ ಪಾಟೀಲ್ ಹಾವಳಗಿ, ಅಂಬಾರಾಯ ಚಾಂದಕೋಟೆ , ಭಾಷಾ ಚೌಧರಿ , ಬಸಣ್ಣ ಗುಣಾರಿ, ಆಕಾಶ ಲೋಖಂಡೆ ಹೇಳುತ್ತಾರೆ.

ಶೌಚಾಲಯಗಳಿಗೆ ಬೀಗ

ಪಟ್ಟಣದಲ್ಲಿ 16 ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಅವುಗಳಲ್ಲಿ ಅರ್ಧದಷ್ಟು ನಿಷ್ಕ್ರಿಯವಾಗಿವೆ. ವಾರ್ಡ್ ನಂಬರ್ 14, 15, 16, 21 ರಲ್ಲಿ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಕೆಲವೊಂದು ಕಡೆ ಸಣ್ಣ ಪುಟ್ಟ ದುರಸ್ತಿ ಮಾಡಬೇಕು, ಇನ್ನು ಕೆಲವು ಕಡೆ ಶೌಚಾಲಯಗಳಿಗೆ ನೀರಿನ ಸಮಸ್ಯೆ ಇದೆ.

ತಹಶೀಲ್ದಾರ್ ಕಚೇರಿಗೆ ದಿನಾಲೂ ಕನಿಷ್ಠ 1 ಸಾವಿರ ಜನ ಬಂದು ಹೋಗುತ್ತಾರೆ. ಅಲ್ಲಿ ಅವರಿಗೆ ಕೂರಲು ಆಸನವಾಗಲೀ ಕುಡಿಯುವ ನೀರಿನ ವ್ಯವಸ್ಥೆಯಾಗಲೀ ಇಲ್ಲ. ಅಲ್ಲಿನ ಮೂತ್ರಾಲಯವೂ ಹಾಳಾಗಿದ್ದು, ಜನರು, ವಿಶೇಷವಾಗಿ ಮಹಿಳೆಯರು ಸಮಸ್ಯೆ ಎದುರಿಸುತ್ತಿದ್ದಾರೆ.

ಹಾಗೆಯೇ ಪಟ್ಟಣದಲ್ಲಿನ ಪಿಕಾರ್ಡ್ ಬ್ಯಾಂಕ್‌ನಲ್ಲಿ ಮೂಲ ಸೌಲಭ್ಯದ ಕೊರತೆ ಇದೆ. ಪಟ್ಟಣದಲ್ಲಿರುವ 10ಕ್ಕೂ ಹೆಚ್ಚು ಎಟಿಎಂ ಯಂತ್ರಗಲ್ಲಿ ಕೆಲವು ಕೆಟ್ಟು ನಿಂತಿವೆ. ಇನ್ನು ಕೆಲ ಎಟಿಎಂಗಳಲ್ಲಿ ಹಣ ಇರುವುದಿಲ್ಲ. ರೈತರು ಪಹಣಿ ಪತ್ರವನ್ನು ಪಡೆದುಕೊಳ್ಳಲು ಒಂದೇ ಕೇಂದ್ರ ಇದ್ದು ರೈತರ ಪಹಣಿ ಪತ್ರ ಪಡೆಯಲು ದಿನಗಟ್ಟಲೆ ಸರತಿಯಲ್ಲಿ ನಿಂತರೂ ಪಹಣಿ ದೊರೆಯುತ್ತಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು