ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಕಪ್ ಚಹಾಕ್ಕಾಗಿ ಕಾದು ಕುಳಿತ ಕೇಂದ್ರ ಸಚಿವ ಗಡ್ಕರಿ!

Last Updated 25 ಏಪ್ರಿಲ್ 2022, 12:48 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಪ್ರಸಿದ್ಧ ಗಾಣಗಾಪುರದ ದತ್ತ ಮಂದಿರಕ್ಕೆ ಭೇಟಿ ನೀಡಿ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಲು ಬಂದಿದ್ದ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ವಿಮಾನ ನಿಲ್ದಾಣದಲ್ಲಿ ಒಂದು ಕಪ್ ಚಹಾಕ್ಕಾಗಿ ಕಾದು ಕುಳಿತುಕೊಳ್ಳಬೇಕಾಯಿತು.

ಹೆಲಿಕಾಪ್ಟರ್ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಗಡ್ಕರಿ ಅವರು ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ಕುಳಿತುಕೊಂಡು ಚಹಾ ನೀಡುವಂತೆ ‌ಸೂಚನೆ ನೀಡಿದರು.

ಶಿಷ್ಟಾಚಾರದ ಪ್ರಕಾರ ವಿಮಾನ ನಿಲ್ದಾಣದ ‌ಅಧಿಕಾರಿಗಳು ಚಹಾ, ಉಪಾಹಾರದ ವ್ಯವಸ್ಥೆ ಮಾಡಬೇಕಿತ್ತು. ‌ಆದರೆ, ಚಹಾ ತರಿಸಿರಲಿಲ್ಲ. ಅಲ್ಲದೇ, ಸಚಿವರು ಸೇವಿಸುವ ‌ಚಹಾ, ಉಪಾಹಾರವನ್ನು ಮುಂಚೆಯೇ ಆಹಾರ ಸುರಕ್ಷತಾ ಅಧಿಕಾರಿಗಳು ತಪಾಸಣೆ ಮಾಡಬೇಕಿತ್ತು. ಅವರಿಗೂ ವಿಮಾನದ ನಿಲ್ದಾಣದ ‌ಹೊಣೆ ಹೊತ್ತ ಕರ್ನಾಟಕ ಕೈಗಾರಿಕೆ ಭದ್ರತಾ ಕಡೆಯ ಪೊಲೀಸ್ ‌ಇನ್ ಸ್ಪೆಕ್ಟರ್ ನೂರ್ ಮರಡಿ ನಿಲ್ದಾಣದ ಒಳಗೆ ಅವಕಾಶ ನೀಡಿರಲಿಲ್ಲ.

ಏತನ್ಮಧ್ಯೆ ಚಹಾ ಬರುವುದು ತಡವಾಗುತ್ತದೆಯೇ ಎಂದು ಅವರನ್ನು ಸ್ವಾಗತಿಸಲು ಬಂದಿದ್ದ ವಿಧಾನಪರಿಷತ್ ‌ಸದಸ್ಯ ಬಿ.ಜಿ. ಪಾಟೀಲ ಅವರನ್ನು ಎರಡು ಬಾರಿ ಪ್ರಶ್ನಿಸಿದರು. ಪಾಟೀಲ ಅವರು ಹೊರಗಡೆ ಬಂದು ಚಹಾ ಸಿಗುತ್ತದೆಯೇ ಎಂದು ಅಧಿಕಾರಿಗಳಿಗೆ ಕೇಳಿದರು. ಇದರಿಂದ ಗಲಿಬಿಲಿಗೊಂಡ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ ರಾವ್ ಹೊರಗಿನ ಕ್ಯಾಂಟೀನ್‌ನಿಂದ ತರಿಸಬೇಕು ಎಂದರು.

ನಂತರ ವಿಮಾನ ನಿಲ್ದಾಣದ ಸಿಬ್ಬಂದಿ ಕ್ಯಾಂಟೀನ್‌ಗೆ ತೆರಳಿ ಚಹಾ ತಂದುಕೊಟ್ಟರು.

'ಕೇಂದ್ರ ಸಚಿವರಂತಹ ಗಣ್ಯ ವ್ಯಕ್ತಿಗಳು ಬಂದಾಗ ನಾವು ಆಹಾರ ತಪಾಸಣೆ ಮಾಡಿದ ಬಳಿಕ ಕೊಡಬೇಕು. ನೇರವಾಗಿ ಕೊಡುವಂತಿಲ್ಲ. ಆದರೆ ನಮಗೆ ಒಳಗೆ ಪ್ರವೇಶ ನೀಡದ್ದರಿಂದ ತಪಾಸಣೆ ಸಾಧ್ಯವಾಗಲಿಲ್ಲ' ‌ಎಂದು ಆಹಾರ ಸುರಕ್ಷತಾ ಅಧಿಕಾರಿ ತಿಳಿಸಿದರು.

ಸಂಸದ ಜಾಧವ್ ತರಾಟೆ: ನಂತರ ವಿಮಾನ ನಿಲ್ದಾಣಕ್ಕೆ ಬಂದ ಸಂಸದ ಉಮೇಶ ಜಾಧವ್, ಸಚಿವರು ಬಂದಾಗ ಶಿಷ್ಟಾಚಾರ ಉಲ್ಲಂಘನೆಯಾದ ಬಗ್ಗೆ ವಿಮಾನ ನಿಲ್ದಾಣ ‌ನಿರ್ದೇಶಕ ಜ್ಞಾನೇಶ್ವರ ರಾವ್ ಹಾಗೂ ಭದ್ರತಾ ಅಧಿಕಾರಿ‌ ನೂರ್ ಮರಡಿ ಅವರನ್ನು ತರಾಟೆಗೆ ತೆಗೆದುಕೊಂಡರು.

'ಸಕಾಲಕ್ಕೆ ಚಹಾವನ್ನೂ ಕೊಡದಿದ್ದರೆ ಕರ್ನಾಟಕದ ಬಗ್ಗೆ ಸಚಿವರು ಏನು ತಿಳಿದುಕೊಳ್ಳುತ್ತಾರೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸಿ' ಎಂದು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT