ಬುಧವಾರ, ಜೂನ್ 29, 2022
24 °C
ನಗರದಲ್ಲಿರುವ ಅಂಗವಿಕಲರಿಗೆ ಕೋವಿಶಿಲ್ಡ್‌ ಚುಚ್ಚುಮದ್ದು ಹಾಕಲು ಚಾಲನೆ ನೀಡಿದ ಜಿಲ್ಲಾಧಿಕಾರಿ

ಲಸಿಕೆ ಪಡೆದು ಸುರಕ್ಷಿತವಾಗಿರಿ: ಜ್ಯೋತ್ಸ್ನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕೋವಿಡ್‌ ಚುಚ್ಚುಮದ್ದು ಪಡೆಯಲು ಗ್ರಾಮೀಣ ಭಾಗದ ಬಹಳಷ್ಟು ಜನ ಇನ್ನೂ ಮುಂದೆ ಬರುತ್ತಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ನಗರ ಪ್ರದೇಶದಲ್ಲಿ ಯುವ ಸಮುದಾಯ ಹೆಚ್ಚು ಆಸಕ್ತಿ ತೋರಿಸಿ ಸರದಿಯಲ್ಲಿ ನಿಂತು ಲಸಿಕೆ ಪಡೆಯುತ್ತಿದೆ. ಹಳ್ಳಿಗಳ ಜನರೂ ಇದರ ಬಗ್ಗೆ ಹೆಚ್ಚಿನ ಅರಿವು ಹೊಂದಬೇಕಾಗಿದೆ’ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಹೇಳಿದರು.

ಮಹಾನಗರ ಪಾಲಿಕೆಯ ಟೌನ್‌ಹಾಲ್ ಬಳಿಯ ಇಂದಿರಾ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಆಯೋಜಿಸಿದ ಅಂಗವಿಕಲರಿಗೆ ವಿಶೇಷ ಅಭಿಯಾನದ ಮೂಲಕ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಇಂದಿನ ಅಭಿಯಾನದಲ್ಲಿ ಸಾಕಷ್ಟು ಜನ ಅಂಗವಿಕಲರು ಉತ್ಸಾಹದಿಂದ ಭಾಗವಹಿಸಿದ್ದು ಒಳ್ಳೆಯ ಬೆಳವಣಿಗೆ. ಇದು ಬೇರೆಯವರಿಗೂ ಸ್ಫೂರ್ತಿ ಆಗಲಿ.

ನಗರದಲ್ಲಿ 18 ವರ್ಷ ಮೇಲ್ಪಟ್ಟ ಸುಮಾರು 600 ಅಂಗವಿಕಲರಿಗೆ ಶುಕ್ರವಾರ ಮೊದಲ ಡೋಸ್ ಕೋವಿಶಿಲ್ಡ್ ಲಸಿಕೆ ನೀಡಲಾಗುತ್ತಿದೆ. ವಿವಿಧ ಸ್ಥಳದಿಂದ ಇಲ್ಲಿಗೆ ಕರೆತರಲು ದಿವ್ಯಾಂಗರಿಗೆ 2 ಬಸ್ ಹಾಗೂ 2 ಬುಲೆರೊ ವಾಹನಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ‘ದೈಹಿಕ ಹಾಗೂ ಮಾನಸಿಕ ದಿವ್ಯಾಂಗರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಇವರ ಮೂಲಕ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಸ್ವಯಂ ಪ್ರೇರಣೆಯಿಂದ ಅಂಗವಿಕಲರು ಲಸಿಕೆ ಪಡೆಯುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ’ ಎಂದರು.

‘ಸಾರ್ವಜನಿಕರು ಯಾವುದೇ ರೀತಿಯ ಭಯ ಅಥವಾ ಗೊಂದಲಕ್ಕೆ ಒಳಗಾಗದೆ ನಿರ್ಭೀತಿಯಿಂದ ಕೋವಿಡ್ ಲಸಿಕೆ ತೆಗೆದುಕೊಳ್ಳಬೇಕು. ಈ ಮೂಲಕ ಕೋವಿಡ್ ಮುಕ್ತ ಕಲಬುರ್ಗಿ ಮಾಡಲು ಸಹಕರಿಸಬೇಕು’ ಎಂದೂ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಶಶೀಲ್‌ ಜಿ.‌ ನಮೋಶಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಪ್ರಭುಲಿಂಗ ಮಾನಕರ್, ಹಿರಿಯ ನಾಗರಿಕರ ಸಬಲೀಕರಣ‌ ಮತ್ತು ವಿಕಲಚೇತನರ ಕಲ್ಯಾಣ ಇಲಾಖೆಯ ಜಿಲ್ಲಾ ಕಲ್ಯಾಣಾಧಿಕಾರಿ ಸಾಧಿಕ್ ಹುಸೇನ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ಮಹಾನಗರ ಪಾಲಿಕೆಯ ಅರೋಗ್ಯಾಧಿಕಾರಿ ಡಾ.ವಿನೋದಕುಮಾರ ಹಾಗೂ ವಿಕಲಚೇತನ ಲಸಿಕಾ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ಶರಣಮ್ಮ ಸೇರಿದಂತೆ ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

ಇದೇ ವೇಳೆ ಸಂಗೀತ ವಾದ್ಯಗೋಷ್ಠಿ ಕಲಾವಿದರ ತಂಡದಿಂದ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು