ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರೊನಾ ನಿವಾರಿಸು ವರಮಹಾಲಕ್ಷ್ಮಿ’

ಜಿಲ್ಲೆಯಾದ್ಯಂತೆ ಸಂಭ್ರಮದ ಹಬ್ಬ, ಅಲಂಕಾರ ಮಾಡಿ ಖುಷಿಪಟ್ಟ ವನಿತೆಯರು, ಸೋಂಕು ನಿವಾರಣೆಗೆ ಕೋರಿಕೆ
Last Updated 31 ಜುಲೈ 2020, 15:12 IST
ಅಕ್ಷರ ಗಾತ್ರ

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶುಕ್ರವಾರ ವರ ಮಹಾಲಕ್ಷ್ಮಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ವಿಶೇಷವಾಗಿ ಈ ಬಾರಿ ಕೊರೊನಾ ಉಪಟಳ ಹೆಚ್ಚಾದ ಕಾರಣ, ಬಹುಪಾಲು ಜನ ಈ ಸೋಂಕಿನಿಂದ ಊರಿಗೆ ಮುಕ್ತಿಕೊಡುಎಂದುಬೇಡಿಕೊಂಡರು.

ಮನೆಯ ಸದಸ್ಯರು, ಸ್ನೇಹಿತರು, ಬಂಧುಗಳು, ಸಹೋದ್ಯೋಗಿಗಳು ಹೀಗೆ, ಆಪ್ತರೆಲ್ಲ ಒಂದೆಡೆ ಸೇರಿಕೊಂಡು ಪೂಜೆ ನೆರವೇರಿಸಿ ಖುಷಿಪಟ್ಟರು. ಮಕ್ಕಳು, ಮಹಿಳೆಯರು ಹೊಸ ಬಟ್ಟೆ ಉಟ್ಟು ಸಂಭ್ರಮಿಸಿದರು.

ಮಾರುಕಟ್ಟೆಗಳಲ್ಲಿ ಓಡಾಡಿ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು. ದೇವತೆಯ ಉಡಿ ತುಂಬುವ ಸಾಮಗ್ರಿಗಳು, ಆಲಂಕಾರಿಕ ವಸ್ತುಗಳು, ಸಿಹಿಭೋಜನಕ್ಕೆ ಬೇಕಾದ ದಿನಸಿಗಳ ಖರೀದಿ ಶುಕ್ರವಾರವೂ ಭರದಿಂದ ಸಾಗಿತು.

ಗುರುವಾರ ರಾತ್ರಿಯೇ ಸಿದ್ಧತೆ ಮಾಡಿಕೊಂಡಿದ್ದ ವನಿತೆಯರು, ಶುಕ್ರವಾರ ನಸುಕಿನಲ್ಲಿ ಎದ್ದು ಹಬ್ಬದ ತಯಾರಿ ನಡೆಸಿದರು. ಮನೆಯನ್ನು ಸ್ವಚ್ಛಗೊಳಿಸಿ, ಅಂಗಳದ ಮುಂದೆ ರಂಗವಲ್ಲಿ ಹಾಕಿದರು. ಮುಂಬಾಗಿಲು, ಹೊಸ್ತಿಲು ಹಾಗೂ ತುಳಸಿಕಟ್ಟೆಗಳಿಗೆ ಅರಿಸಿನ– ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದರು.

ಸೋಲಾ ಸಿಂಗಾರ: ವರಮಹಾಲಕ್ಷ್ಮಿಗೆ ‘ಸೋಲಾ ಸಿಂಗಾರ’ ಅಲಂಕಾರ ಮಾಡುವುದು ಕಲ್ಯಾಣ ಕರ್ನಾಟಕ ಭಾಗದ ವಿಶೇಷತೆ. ಲಕ್ಷ್ಮಿಗೆ ಇದು ಅತ್ಯಂತ ಪ್ರಿಯವಾದ ಅಲಂಕಾರ ಎಂಬ ಕಾರಣಕ್ಕೆ ಗೃಹಿಣಿಯರು ತಮ್ಮ ಒಡವೆ, ವಸ್ತ್ರ, ಆಭರಣ, ಮಡಿಗಳನ್ನು ಸೇರಿಸಿ ದೇವಿ ಅಲಂಕರಿಸಿದರು. ಗಂಧ, ಕುಂಕುಮ, ಎಲೆ– ಅಡಕಿ, ಕಾರೀಕ್‌, ಬದಾಮಿ, ಅರಸಿನಬೇರು, ಹಣ್ಣು ಹೀಗೆ ಹಲವು ಮಂಗಳದ್ರವಗಳನ್ನು ಸೇರಿಸಿ ಉಡಿ ತುಂಬಿದರು. ಆರತಿ ಮಾಡಿದ ಮೇಲೆ ಪಂಚಾಮೃತ ನೈವೇದ್ಯ ನೀಡಿದರು.‌

ಸಹಕುಟುಂಬ ಭೂರಿ ಭೋಜನ: ಕುಟುಂಬದ ಸದಸ್ಯರೆಲ್ಲ ಬೆಳಿಗ್ಗೆ ಪೂಜಾ ಕಾರ್ಯ ಮುಗಿಸಿದ ಜನ, ಮಧ್ಯಾಹ್ನಕ್ಕೆ ಸಿಹಿ ಖಾದ್ಯಗಳ ಭರ್ಜರಿ ಭೋಜನ ಸವಿದರು.

ದೇವಿಗೆ ಅತ್ಯಂತ ಪ್ರಿಯವಾದ ಹೋಳಿಗೆ, ಹೂರಣ ಕಡಬು, ಶಿರಾ, ಹಾಲು– ತುಪ್ಪ, ಎಣ್ಣೆಗಾಯಿ ಪಲ್ಯ, ಬದನೆಕಾಯಿ, ಬದನೆಕಾಯಿ, ಕೋಸಂಬರಿ, ಭಜ್ಜಿ, ಹಪ್ಪಳ, ಅನ್ನ– ಸಾರು... ಒಂದೇ ಎರಡೇ! ಬಗೆಬಗೆಯ ಖಾದ್ಯಗಳನ್ನು ಮಾಡಿ ಸವಿದರು.

ಮುತ್ತೈದೆಯರ ಆಶೀರ್ವಾದ: ಮನೆಯ ಅಕ್ಕಪಕ್ಕದ ಮಹಿಳೆಯರು, ಗೆಳತಿಯರನ್ನು ಆಹ್ವಾನಿಸಿ ‘ಮುತ್ತೇದೆ ಉಡಿ ತುಂಬುವ’ ಶಾಸ್ತ್ರವನ್ನೂ ಮಾಡಲಾಯಿತು. ಸೀರೆ, ಕುಪ್ಪಸ, ಹಸಿರು ಬಳೆ, ಪಂಚಪಳಾರ, ತೆಂಗಿನಕಾಯಿ, ಹಣ್ಣು, ಎಲೆ– ಅಡಿಕೆ, ಕೊಬ್ಬರಿ, ಅರಿಸಿನ, ಕುಂಕುಮ ನೀಡಿ ಉಡಿ ತುಂಬಿದರು. ಚೆಂಡು ಹೂವು, ಮಲ್ಲಿಗೆ ಹೂವಿನ ದಂಡೆಗಳನ್ನು ಮಾಡಿ ಮುಡಿಸಿ, ಆರತಿ ಬೆಳಗಿದರು.

ಬಾಂಧವ್ಯ, ಚೈತನ್ಯದ ಬಾಗಿನ
ಕೋವಿಡ್ ಕಾರಣದಿಂದ ಭಯದಲ್ಲಿದ್ದ ನಮಗೆಲ್ಲ ವರ ಮಹಾಲಕ್ಷ್ಮಿ ಹಬ್ಬ ಹೊಸ ಚೈತನ್ಯ ನೀಡಿದೆ. ಅಂತರ ಕಾಪಾಡುವ ಸಲುವಾಗಿ ಬಹಳಷ್ಟು ಮಂದಿಯನ್ನು ನೋಡಿರಲಿಲ್ಲ. ಹಬ್ಬದ ಮೂಲಕ ಒಂದಾಗಿದ್ದೇವೆ. ಮನೆ ಮನೆಗೆ ಹೋಗಿ ಬಾಗಿನ ಕೊಡುವುದರಿಂದ ಬಾಂಧವ್ಯ ಇನ್ನಷ್ಟು ಬೆಸೆಯುತ್ತದೆ. ಪೂಜಾದಿಗಳಿಂದ ನಮ್ಮ ಆತ್ಮವಿಶ್ವಾಸ, ಭದ್ರತೆಯ ಭಾವ ವೃದ್ಧಿಸುತ್ತದೆ‘ ಎನ್ನುವುದು ಪೂಜಾ ಅವರ ಅನಿಸಿಕೆ.

ದೇವಸ್ಥಾನಗಳಲ್ಲೂ ಪೂಜೆ
ವರ ಮಹಾಲಕ್ಷ್ಮಿ ಹಬ್ಬಕ್ಕಾಗಿ ನಗರದ ಪ್ರಮುಖ ದೇವಸ್ಥಾನಗಳಲ್ಲೂ ವಿಶೇಷ ಪೂಜೆ, ಅಲಂಕಾರ ಮಾಡಲಾಯಿತು.

ಇಲ್ಲಿನ ಶರಣಬಸವೇಶ್ವರ ದೇವಸ್ಥಾನ, ರಾಮಮಂದಿರ, ಅಂಬಾಭವಾನಿ, ರೇಣುಕಾ ಯಲ್ಲಮ್ಮ, ಮಹಾಲಕ್ಷ್ಮಿ, ಅಷ್ಟವಿನಾಯಕ ಮಂದಿರ, ವೈಷ್ಣೋದೇವಿ, ರಾಘವೇಂದ್ರ ರಾಯರ ಮಠ ಮುಂತಾದ ದೇವಸ್ಥಾನಗಳಲ್ಲಿ ಕುಟುಂಬ ಸಮೇತ ಎಲ್ಲರೂ ಪೂಜೆ ಸಲ್ಲಿಸಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT