ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಶೇ 32ರಷ್ಟು ಎಚ್ಎಸ್‌ಆರ್‌ಪಿ ಅಳವಡಿಕೆ

ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಕೆಗೆ ವಾಹನಗಳ ಮಾಲೀಕರ ನಿರಾಸಕ್ತಿ
Published 10 ಜೂನ್ 2024, 6:36 IST
Last Updated 10 ಜೂನ್ 2024, 6:36 IST
ಅಕ್ಷರ ಗಾತ್ರ

ಕಲಬುರಗಿ: ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ ) ಅಳವಡಿಸಿಕೊಳ್ಳಲು ವಾಹನಗಳ ಮಾಲೀಕರು ನಿರಾಸಕ್ತಿ ತೋರುತ್ತಿದ್ದಾರೆ. ಎರಡು ಬಾರಿ ಗಡುವು ವಿಸ್ತರಣೆ ಮತ್ತು ಒಮ್ಮೆ ಕೋರ್ಟ್‌ನಿಂದ ಹೆಚ್ಚುವರಿ ದಿನಗಳ ಕಾಲಾವಕಾಶ ಸಿಕ್ಕಿದ್ದರೂ ಜಿಲ್ಲೆಯಲ್ಲಿ ಹೊಸ ಫಲಕ ಅಳವಡಿಕೆ ಶೇ 32.85ರಷ್ಟು ತಲುಪಿದೆ.

ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯವು ಅಪರಾಧ ಪ್ರಮಾಣ ಕಡಿಮೆ ಮಾಡಲು, ವಾಹನಗಳನ್ನು ಸುಲಭದಲ್ಲಿ ಪತ್ತೆ ಹಚ್ಚಲು, ನಕಲಿ ನಂಬರ್‌ಗಳನ್ನು ತಡೆಗಟ್ಟಲು ಎಚ್‌ಎಸ್‌ಆರ್‌ಪಿ ಅಳವಡಿಸುವುದನ್ನು ಜಾರಿಗೆ ತಂದಿದೆ. ಇದಕ್ಕಾಗಿ 2018ರಲ್ಲಿ ಸಿಎಂವಿಆರ್‌ ಕಾಯ್ದೆಗೆ ತಿದ್ದುಪಡಿ ಮಾಡಿತ್ತು.

2019ರ ಏಪ್ರಿಲ್ 1ರಿಂದ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿತ್ತು. ಅದಕ್ಕಿಂತ ಮುಂಚಿತವಾಗಿ ನೋಂದಣಿಯಾಗಿದ್ದ ವಾಹನಗಳಿಗೂ ಎಚ್‌ಎಸ್‌ಆರ್‌ಪಿ ಅಳಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿತ್ತು.

ಸಾರಿಗೆ ಇಲಾಖೆ ನೀಡಿದ ಮಾಹಿತಿ ಅನ್ವಯ, ಜಿಲ್ಲೆಯಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕಾದ ವಾಹನಗಳ ಸಂಖ್ಯೆ 5.71 ಲಕ್ಷ ಇವೆ. ಅವುಗಳಲ್ಲಿ ಮೇ ತಿಂಗಳ ಅಂತ್ಯದವರೆಗೆ 1.87 ಲಕ್ಷ ವಾಹನಗಳಿಗಷ್ಟೇ ಹೊಸ ಫಲಕಗಳು ಅಳವಡಿಕೆಯಾಗಿವೆ. 3.83 ಲಕ್ಷ (ಶೇ 67.15ರಷ್ಟು) ವಾಹನಗಳಿಗೆ ಇನ್ನೂ ಅಳವಡಿಕೆಯಾಗಿಲ್ಲ.

5ರಿಂದ 20 ವರ್ಷಗಳ ಒಳಗಿನ 3.89 ಲಕ್ಷ ವಾಹನಗಳ ಪೈಕಿ 33,584 ವಾಹನಗಳಿಗೆ ಮಾತ್ರ ಹೊಸ ಫಲಕ ಜೋಡಣೆಯಾಗಿದೆ. 3.56 ಲಕ್ಷ ವಾಹನಗಳ ಮಾಲೀಕರು ಆಸಕ್ತಿ ತೋರುತ್ತಿಲ್ಲ. 2019ರ ನಂತರದ 1.81 ಲಕ್ಷ ವಾಹನಗಳ ಪೈಕಿ 1.54 ಲಕ್ಷ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಿಲಾಗಿದ್ದು, 27,577 ವಾಹನಗಳಷ್ಟೇ ಬಾಕಿ ಉಳಿದಿವೆ.

15 ವರ್ಷಗಳಿಗಿಂತ ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನೀಡುವುದಿಲ್ಲ ಎಂಬ ತಪ್ಪು ಕಲ್ಪನೆ ಕೆಲವು ಜನರಲ್ಲಿ ಮೂಡಿದೆ. ಹೀಗಾಗಿ, ಮಾಲೀಕರು ಮುಂದೆ ಬರುತ್ತಿಲ್ಲ. ಮತ್ತೆ ಕೆಲವು ವಾಹನಗಳಿಗೆ ಸರಿಯಾದ ದಾಖಲಾತಿಗಳು ಸಹ ಇಲ್ಲ. ಹೊಸ ಫಲಕ ಪಡೆಯಲು ವಾಹನಗಳು ಹಳೆಯದಾಗಿದ್ದರೂ ಸಮಸ್ಯೆ ಇಲ್ಲ. ಸಂಬಂಧಿತ ಆರ್‌ಟಿಒ ಕಚೇರಿಗೆ ಭೇಟಿ ನೀಡಿ, ಅರ್ಜಿಯನ್ನು ಕೊಟ್ಟು ವಿವರವನ್ನು ನೀಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎನ್ನುತ್ತಾರೆ ಸಾರಿಗೆ ಅಧಿಕಾರಿಗಳು.

ಎಚ್‌ಎಸ್‌ಆರ್‌ಪಿ
ಎಚ್‌ಎಸ್‌ಆರ್‌ಪಿ

ಪದೇ ಪದೇ ಗಡುವು ವಿಸ್ತರಣೆ: 2023ರ ನವೆಂಬರ್ 17ರ ಒಳಗೆ ಹೊಸ ನಾಮ ಫಲಕ ಅಳವಡಿಸುವಂತೆ ಆಗಸ್ಟ್‌ನಲ್ಲಿ ರಾಜ್ಯ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿತ್ತು. 2024ರ ಫೆಬ್ರುವರಿ 17 ಮತ್ತು ಮೇ 31ರವರೆಗೆ ಗಡುವು ವಿಸ್ತರಣೆಯಾಗಿತ್ತು.

ಅವಧಿ ವಿಸ್ತರಣೆಗೆ ಬಿಎನ್‌ಡಿ ಎನರ್ಜಿ ಕಂಪನಿಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಜೂನ್ 11ಕ್ಕೆ ವಿಚಾರಣೆ ನಿಗದಿಯಾಗಿದೆ. ಹೀಗಾಗಿ, ಜೂನ್‌ 12ರವರೆಗೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಸೂಚಿಸಿದೆ. ಹೆಚ್ಚುವರಿಯಾಗಿ 12 ದಿನ ಅವಕಾಶ ಸಿಕ್ಕರೂ ಪ್ರತಿಕ್ರಿಯೆ ನಿರಾಶಾದಾಯಕವಾಗಿದೆ.

ಭೀಮಣ್ಣಗೌಡ ಪಾಟೀಲ
ಭೀಮಣ್ಣಗೌಡ ಪಾಟೀಲ
ಫಲಕ ಜೋಡಣೆಗೆ ಹೆಚ್ಚುವರಿಯಾಗಿ ₹50 ವಸೂಲಿ!
ಆನ್‌ಲೈನ್‌ನಲ್ಲಿ ಅರ್ಜಿ ಹಾಕುವಾಗಲೇ ಫಲಕದ ತಯಾರಿಕೆ ಸಾರಿಗೆ ಸಂಸ್ಕರಣೆ ಸರ್ವೀಸ್ ಜೋಡಣೆ ಸೇರಿದಂತೆ ತೆರಿಗೆ ಶುಲ್ಕವೂ ಕಡಿತವಾಗುತ್ತದೆ. ಆದರೆ ಕೆಲವು ಶೋರೂಂಗಳು ಹೊಸ ಫಲಕದ ಅಪ್‌ಗ್ರೇಡ್‌ ಮತ್ತು ಜೋಡಣೆಯ ನೆಪ ಹೇಳಿ ₹50 ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿವೆ. ಇದಕ್ಕೆ ಯಾವುದೇ ರಸೀದಿ ಸಹ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ‘ಆನ್‌ಲೈನ್‌ನಲ್ಲಿ ನಮೂದಿಸಿದ್ದ ಶೋರೂಂಗೆ ತೆರಳಿ ನನ್ನ ಬೈಕ್‌ಗೆ ಹೊಸ ಫಲಕ ಜೋಡಣೆ ಮಾಡಿಸಿದ್ದೆ. ಫೋಟೋ ತೆಗೆದು ಕಳುಹಿಸಬೇಕಿದೆ ಎಂದು ಹೇಳಿ ₹50 ಪಡೆದರೂ ರಸೀದಿ ಕೊಡಲಿಲ್ಲ’ ಎಂದು ಪ್ರಕಾಶ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕೆಲವು ವೆಬ್‌ಸೈಟ್‌ಗಳಲ್ಲಿ ನೇರವಾಗಿ ಮನೆಗೆ ಕಳುಹಿಸುವ ಆಯ್ಕೆ ಇಲ್ಲ. ಶೋರೂಂಗೆ ಮಾತ್ರವೇ ಕಳುಹಿಸುತ್ತಿವೆ. ಅವುಗಳ ನಡುವೆ ಎಂತಹ ಒಪ‍್ಪಂದ ಆಗಿದೆಯೋ ಗೊತ್ತಿಲ್ಲ’ ಎಂದು ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಯೊಬ್ಬರು ಹೇಳಿದರು.

‘ಮುಂದೆ ಬಾರದ ಗ್ರಾಮೀಣರು’

‘ಎಚ್‌ಎಸ್‌ಆರ್‌ಪಿ ಬಗ್ಗೆ ವಾಹನಗಳ ಮಾಲೀಕರಿಗೆ ಅರಿವು ಇದ್ದರೂ ನೋಂದಣಿಗೆ ಮುಂದಾಗುತ್ತಿಲ್ಲ. ನಗರ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಆಗುತ್ತಿದೆ. ಆದರೆ ಗ್ರಾಮೀಣ ಭಾಗದವರು ಮುಂದೆ ಬರುತ್ತಿಲ್ಲ’ ಎಂದು ಉಪ ಸಾರಿಗೆ ಆಯುಕ್ತರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಅಧಿಕಾರಿ ಭೀಮಣ್ಣಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು. ‘ಅನಗತ್ಯವಾಗಿ ದಂಡ ಕಟ್ಟುವುದನ್ನು ತಪ್ಪಿಸಲು ನಿಗದಿತ ಅವಧಿಯೊಳಗೆ ಹೊಸ ಫಲಕ ಅಳವಡಿಸಿಕೊಳ್ಳಲು ವಾಹನಗಳ ಮಾಲೀಕರು ಮುಂದೆ ಬಂದು ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಬಗ್ಗೆ ಯಾರೂ ನಮ್ಮ ಗಮನಕ್ಕೆ ತಂದಿಲ್ಲ. ಒಂದು ವೇಳೆ ಹಣ ಕೊಟ್ಟರೆ ಅದಕ್ಕೆ ರಸೀದಿ ಪಡೆದು ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

ಹಳೆ ವಾಹನಗಳ ಎಚ್‌ಎಸ್‌ಆರ್‌ಪಿ ಅಳವಡಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT