ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಬೇಡ್ಕರ್ ಆಶಯಗಳಿಗಾಗಿ ವಿಎಚ್‌ಪಿ ಶ್ರಮ: ಮನೋಹರ ಮಠದ್

Published : 28 ಆಗಸ್ಟ್ 2024, 6:22 IST
Last Updated : 28 ಆಗಸ್ಟ್ 2024, 6:22 IST
ಫಾಲೋ ಮಾಡಿ
Comments

ಕಲಬುರಗಿ: ‘ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ದೇಶದಲ್ಲಿ ಅಸ್ಪೃಶ್ಯತೆ ತೊಲಗಿಸಿ, ಸಮಾನತೆ ತರಲು ವಿಶ್ವ ಹಿಂದೂ ಪರಿಷತ್ ಅಭಿಯಾನ ಮಾಡಿ, ಮನೆ ಮನೆಗೆ ಪಾದಯಾತ್ರೆಯೂ ನಡೆಸಿದೆ’ ಎಂದು ರಾಜ್ಯ ದೇವಾಲಯ ಸಂವರ್ಧನ ಸಮಿತಿ ಸಂಯೋಜಕ ಮನೋಹರ ಮಠದ್ ಹೇಳಿದರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮಹಾನಗರ ಘಟಕವು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಪರಿಷತ್‌ನ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕ್ರಿಶ್ಚಿಯನ್ನರು ಹಾಗೂ ಮುಸ್ಲಿಮರು ದಲಿತರಿಗೆ ಆಮಿಷಯೊಡ್ಡಿ ಮತಾಂತರಕ್ಕೆ ಯತ್ನಿಸಿದ್ದರು. ಆಗ, ಅಂಬೇಡ್ಕರ್ ಅವರು ‘ವಿದೇಶದಲ್ಲಿ ಜನಿಸಿದ್ದ ಮತಕ್ಕೆ ಮತಾಂತರವಾದರೆ ನನ್ನನ್ನು ನಾನು ಮಾರಿಕೊಂಡಂತೆ’ ಎಂದಿದ್ದರು. ಹೀಗಾಗಿ, ಅವರು ಬೌದ್ಧ ಧರ್ಮವನ್ನು ಆಯ್ಕೆ ಮಾಡಿಕೊಂಡರು’ ಎಂದರು.

‘ಪ್ರತಿಯೊಬ್ಬ ಹಿಂದೂ ದೇಶ, ಧರ್ಮ ಮತ್ತು ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಬೇಕು. ಯುವಕರಿಗೆ ಸನಾತನ ಹಿಂದೂ ಸಂಸ್ಕೃತಿ, ಪರಂಪರೆ, ಜೀವನ ಪದ್ಧತಿ ಪರಿಚಯಿಸಲು 1968ರಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿದೆ. ದೇಶ ಮತ್ತು ಧರ್ಮದ ಕಾರ್ಯದಲ್ಲಿ ತೊಡಗಿದೆ. ರಾಮ ಮಂದಿರ, ಅಮರನಾಥ ಭೂಮಿ, ರಾಮಸೇತುವೆ ರಕ್ಷಣೆ, ಕಾಶಿ ಮಂದಿರ, ಅಸಮಾನತೆ ತೊಡೆದು ಹಾಕಲು ಹೋರಾಟ ಮಾಡಿದೆ. ಹಿಂದೂಗಳಲ್ಲಿ ಯಾರೂ ಕೀಳಲ್ಲ, ಜಾತಿ ಭೇದವಿಲ್ಲ ಎಂಬ ಸಮಾನತೆಗಾಗಿಯೂ ಶ್ರಮಿಸುತ್ತಿದೆ’ ಎಂದರು.

ಶ್ರೀರಾಮಸೇನೆ ಗೌರವಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘ಸದಾಶಿವಾನಂದ ಸ್ವಾಮೀಜಿಗಳ ವಚನ ದರ್ಶನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಪಾಲ್ಗೊಂಡಿದ್ದರು. ಅದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿ ದಾಂಧಲೆಯೂ ನಡೆಸಿದ್ದರು’ ಎಂದರು.

‘ಲಿಂಗಾಯತರನ್ನು ಹಿಂದೂ ಧರ್ಮದಿಂದ, ಹಿಂದೂ ಧರ್ಮವನ್ನು ಲಿಂಗಾಯತರಿಂದ ಬೇರ್ಪಡಿಸಲು ಅಪಪ್ರಚಾರ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳ ಬಗ್ಗೆ ಸಚಿವರೊಬ್ಬರು ದೂಷಿಸುವ ಕೆಲಸ ಮಾಡುತ್ತಿದ್ದು, ಹಿಂದೂ ಸಮಾಜ ಮುಂದೆ ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೀರಭದ್ರ ಶಿವಾಚಾರ್ಯರು, ಸಂತೋಷ ಮಹಾರಾಜರು, ಗಜಾನನ ಬಾಬಾ ಮಹಾರಾಜರು, ರಾಜಶೇಖರ ಶಿವಾಚಾರ್ಯರು, ಚರಲಿಂಗ ಸ್ವಾಮೀಜಿ, ಅಭಿನವ ಪರ್ವತೇಶ್ವರ ಸ್ವಾಮಿಜಿ, ಅಭಿನವ ಶಿವಾಚಾರ್ಯರು, ಸಿದ್ಧಗಂಗಾ ಶಿವಾಚಾರ್ಯರು, ಗುರುಮೂರ್ತಿ ಶಿವಾಚಾರ್ಯರು, ದೊಡ್ಡೇಂದ್ರ ಸ್ವಾಮೀಜಿ, ಪರಿಷತ್‌ನ ಪ್ರಾಂತ ಅಧ್ಯಜ್ಷ ಲಿಂಗರಾಜಪ್ಪ ಅಪ್ಪ, ವಿಭಾಗ ಪ್ರಚಾರಕ ವಿಜಯ ಮಹಾಂತೇಶ, ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುರೇಶ ಹೇರೂರ, ಪ್ರಮುಖರಾದ ರಾಜು ನವಲದಿ, ಡಿ. ಅಶ್ವಿನ್‌ಕುಮಾರ, ಪ್ರಶಾಂತ ಗುಡ್ಡಾ, ಶಾಸಕ ಬಸವರಾಜ ಮತ್ತಿಮಡು, ಮಾರ್ತಾಂಡ ಶಾಸ್ತ್ರಿ, ಸುಮಂಗಲಾ ಚಕ್ರವರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT