ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಸರ್ಕಾರಿ ಶಾಲೆಗೆ 1 ಎಕರೆ ಜಮೀನು ನೀಡಿದ‌ ಅಬ್ದುಲ್ ಲತೀಫ್

‘ಪ್ರಜಾವಾಣಿ’ ವರದಿ ಪರಿಣಾಮ
Published 11 ಆಗಸ್ಟ್ 2023, 14:32 IST
Last Updated 11 ಆಗಸ್ಟ್ 2023, 14:32 IST
ಅಕ್ಷರ ಗಾತ್ರ

ಕಲಬುರಗಿ: ತಾಲ್ಲೂಕಿನ ಫಿರೋಜಾಬಾದ್‌ ಸರ್ಕಾರಿ ಕನ್ನಡ ಮತ್ತು ಉರ್ದು ಮಾಧ್ಯಮ ಪ್ರೌಢಶಾಲೆಗೆ ಗ್ರಾಮದ ಅಬ್ದುಲ್ ಲತೀಫ್ ಶೇಖ್ ಮೆಹಬೂಬ್ ಜಾಗೀರದಾರ್ ಅವರು ಲಕ್ಷಾಂತರ ರೂಪಾಯಿ ಬೆಲೆಬಾಳುವ ಒಂದು ಎಕರೆ ಜಮೀನು ನೀಡಿದ್ದಾರೆ.

‘ಪ್ರಜಾವಾಣಿ’ಯ ಆಗಸ್ಟ್‌ 3ರ ಸಂಚಿಕೆಯಲ್ಲಿ ‘ಆರೋಗ್ಯ ಕೇಂದ್ರವೇ ಇವರ ಶಾಲೆ!’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ಸ್ವಂತ ಕಟ್ಟಡ ಇಲ್ಲದೆ ಕಳೆದ ಎಂಟು ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಇಕ್ಕಟ್ಟಾದ ಕೋಣೆಗಳಲ್ಲಿ ಶಾಲಾ ತರಗತಿಗಳು ನಡೆಯುತ್ತಿವೆ.

ಈ ವರದಿ ಬಳಿಕ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಅವರು ಡಿಡಿಪಿಐಗೆ ಕರೆಮಾಡಿ, ‘ಫಿರೋಜಾಬಾದ್‌ ಗ್ರಾಮದಲ್ಲಿ ಶಾಲಾ ಮಕ್ಕಳ ಪೋಷಕರ, ಗ್ರಾಮದ ಮುಖಂಡರ ಸಭೆ ನಡೆಸಬೇಕು. ಗ್ರಾಮದಲ್ಲಿ ಸರ್ಕಾರಿ ಜಾಗ ಇರುವ ಮಾಹಿತಿ ಕಲೆ ಹಾಕಬೇಕು. ಯಾರಾದರೂ ದಾನಿಗಳು ಮುಂದೆ ಬಂದರೆ ಅವರಿಂದ ಜಾಗ ಪಡೆಯುವ ಕುರಿತು ಚರ್ಚಿಸಿ ಒಪ್ಪಿಗೆ ಪಡೆಯಬೇಕು’ ಎಂದು ಸೂಚಿಸಿದ್ದರು.

ಆ ಬಳಿಕ ಕಲಬುರಗಿ ದಕ್ಷಿಣ ವಲಯದ ಬಿಇಒ ಶಂಕ್ರಮ್ಮ ಢವಳಗಿ ಅವರು ಗ್ರಾಮದಲ್ಲಿ ಸಭೆ ನಡೆಸಿದ್ದರು. ಜಮೀನು ದಾನ ಮಾಡಲು ಮುಂದೆ ಬಂದ ಅಬ್ದುಲ್ ಲತೀಫ್ ಅವರನ್ನು ಭೇಟಿಯಾಗಿ ಕುಟುಂಬ‌ದ ಎಲ್ಲಾ ಸದಸ್ಯರ ಸಹಮತ ಪಡೆದು ದಾನದ ಒಪ್ಪಿಗೆ ಪತ್ರ ಬರೆದುಕೊಡುವಂತೆ ಕೋರಿದರು.

ಅಬ್ದುಲ್ ಲತೀಫ್ ಅವರು ಕುಟುಂಬಸ್ಥರ ಸಹಮತದೊಂದಿಗೆ ಕಲಬುರಗಿ–ವಿಜಯಪುರ ರಸ್ತೆ ಸಮೀಪದ ಒಂದು ಎಕರೆ ಜಮೀನನ್ನು ನೀಡುವ ದಾನ ಪತ್ರವನ್ನು ಬರೆದು ಶಾಲೆಯ ಮುಖ್ಯ ಶಿಕ್ಷಕರಿಗೆ ಕೊಟ್ಟಿದ್ದಾರೆ.

‘ಪ್ರಜಾವಾಣಿ’ ಜತೆಗೆ ಮಾತನಾಡಿದ ಅಬ್ದುಲ್ ಲತೀಫ್, ‘ಈ ಹಿಂದೆಯೂ ಶಾಲೆಗೆ ಜಾಗ ಕೊಡಲು ಮುಂದಾಗಿದ್ದೆ. ಕೆಲವರು ಆಕ್ಷೇಪ ಎತ್ತಿದ್ದರು. ಆ.9ರಂದು ಬಿಇಒ ಕರೆದಿದ್ದ ಸಭೆಯಲ್ಲಿ ಯಾರಾದರೂ ಜಾಗ ಕೊಟ್ಟರೆ, ಕಟ್ಟಡ ನಿರ್ಮಾಣಕ್ಕೆ ₹ 1 ಲಕ್ಷ ಕೊಡುವುದಾಗಿ ಹೇಳಿದ್ದೆ. ಯಾರೂ ಮುಂದೆ ಬರಲಿಲ್ಲ. ಕೊನೆಗೆ ಒಂದು ಎಕರೆ ಭೂಮಿಯನ್ನು ನಾನೇ ದಾನವಾಗಿ ಬರೆದುಕೊಟ್ಟಿದ್ದೇನೆ’ ಎಂದು ತಿಳಿಸಿದರು.

‘ಜಮೀನು ದಾನ ಕೊಡಲು ಮಕ್ಕಳು ಆಕ್ಷೇಪ ಎತ್ತಿಲ್ಲ. ಹಿರಿಯರ ಆಸ್ತಿಯನ್ನು ಕಾಪಾಡಿಕೊಂಡು ಬಂದು ಶಾಲಾ ಕಟ್ಟಡದಂತಹ ಪುಣ್ಯದ ಕೆಲಸಕ್ಕೆ ನೀಡಿದ ಸಂತೋಷವಿದೆ. ನಮ್ಮ ಅಣ್ಣ ಸಹ ಜಾಗ ಖರೀದಿ ಮಾಡಿ ಉರ್ದು ಶಾಲೆಗೆ ದಾನವಾಗಿ ಕೊಟ್ಟಿದ್ದರು’ ಎಂದರು.

ಪ್ರಜಾವಾಣಿಯಲ್ಲಿ ಪ್ರಕಟಗೊಂಡ ವಿಶೇಷ ವರದಿ
ಪ್ರಜಾವಾಣಿಯಲ್ಲಿ ಪ್ರಕಟಗೊಂಡ ವಿಶೇಷ ವರದಿ
ಶಾಲೆ ನಿರ್ಮಾಣ ದೇವಸ್ಥಾನ ಕಟ್ಟಿಸಿದಂತೆ. ಕಲಿಕೆಗಾಗಿ ಭೂಮಿ ಕೊಡುವುದು ಮಾನವ ಧರ್ಮ. ಬುದ್ಧಿ ಜೀವಿಗಳಿಗೆ ಇದರ ಮಹತ್ವದ ಗೊತ್ತಾಗುತ್ತದೆ.
- ಅಬ್ದುಲ್ ಲತೀಫ್ ಶೇಖ್ ಮೆಹಬೂಬ್ ಜಾಗೀರದಾರ್ ಶಾಲೆಗೆ ಭೂಮಿ ನೀಡಿದ ದಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT