ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ ಆಟಗಾರರ ರಾಜ್ಯ ತಂಡದ ಕನಸು

ಕ್ರಿಕೆಟ್‌: ಸ್ಥಳೀಯ ಟೂರ್ನಿಗಳಲ್ಲಿ ಮಿಂಚುತ್ತಿರುವ ವೀರೇಶ, ಕಾಸೀಫ್, ಜಾವದ್‌
Published 6 ಜೂನ್ 2024, 5:07 IST
Last Updated 6 ಜೂನ್ 2024, 5:07 IST
ಅಕ್ಷರ ಗಾತ್ರ

ಕಲಬುರಗಿ: ಈಚೆಗೆ ಮುಗಿದ ಕೆಎಸ್‌ಸಿಎ ರಾಯಚೂರು ವಲಯ 16 ವರ್ಷದೊಳಗಿನವರ ಅಂತರ ಕ್ಲಬ್ ಕ್ರಿಕೆಟ್‌ ಟೂರ್ನಿಯ ಲೀಗ್‌ ಪಂದ್ಯಗಳಲ್ಲಿ ಕೆಸಿಸಿ ತಂಡ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಲು ಕಾರಣರಾದ ಪ್ರಮುಖರಲ್ಲಿ ವೀರೇಶ ರಾಯವಾಡೆ ಮತ್ತು ಕಾಸೀಫ್ ಅಲಿ ಮತ್ತು ಜಾವದ್‌ ಅಲಿ ಪ್ರಮುಖರು.

ಐದು ಪಂದ್ಯಗಳಿಂದ ಕಾಸೀಫ್ ಅಲಿ 293 ರನ್‌ ಮಾಡಿ ಮಿಂಚಿದರೆ, ಎಡಗೈ ಬ್ಯಾಟರ್‌, ಎಡಗೈ ಸ್ಪಿನ್ನರ್‌ ಆಗಿರುವ ವೀರೇಶ 285 ರನ್ ಗಳಿಸಿದರು. ಇಬ್ಬರೂ ಬೌಲಿಂಗ್‌ನಲ್ಲಿಯೂ ಮಿನುಗಿದರು. ಇವರಿಬ್ಬರಿಗೂ ರಾಜ್ಯ ಮತ್ತು ರಾಷ್ಟ್ರೀಯ ತಂಡಗಳಲ್ಲಿ ಆಡುವ ಮಹದಾಸೆ.

ಈ ಟೂರ್ನಿಯಲ್ಲಿ ಕಾಸೀಫ್ ಅಲಿ ಶ್ರೇಷ್ಠ ಬ್ಯಾಟರ್ ಎನಿಸಿದರೆ, ವೀರೇಶ ಅತ್ಯುತ್ತಮ ಆಲ್‌ರೌಂಡರ್ ಎನಿಸಿಕೊಂಡರು.

ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ತಂದೆ ಈಶ್ವರ ರಾಯವಾಡೆ ಮತ್ತು ತಾಯಿ ರೇಣುಕಾ ಅವರು ಮಗ ವೀರೇಶ ಕ್ರಿಕೆಟ್‌ ಆಸೆಗೆ ಪೋಷಣೆಯ ನೀರೆರೆಯುತ್ತಿದ್ದಾರೆ.

‘ಮೂರು ವರ್ಷಗಳಿಂದ ಕೆಸಿಸಿ ಕ್ಲಬ್‌ನಲ್ಲಿ ಆಡುತ್ತಿರುವೆ. 2022ರಲ್ಲಿ ಜಿಲ್ಲಾ ತಂಡದ ನಾಯಕನಾಗಿದ್ದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಡಬೇಕೆಂಬ ಆಸೆಯಿದೆ. ದೇಶಕ್ಕಾಗಿ ವಿಶ್ವಕಪ್‌ ಜಯಿಸಬೇಕೆಂಬ ಕನಸೂ ನನ್ನದು’ ಎಂದು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವೀರೇಶ ಮಂದಹಾಸ ಬೀರಿದರು.

‘ಸದ್ಯಕ್ಕೆ ರಾಯಚೂರು ವಲಯದ ಸೂಪರ್‌ ಲೀಗ್ ನಾಕೌಟ್‌ ಆಡಬೇಕು. ಬೆಂಗಳೂರಿನ ಜಸ್ಟ್‌ ಕ್ರಿಕೆಟ್‌ ಅಕಾಡೆಮಿಯಿಂದ ಆನ್‌ಲೈನ್ ಕ್ಲಾಸ್ ಕೇಳುತ್ತೇನೆ. ಭಾರತ ತಂಡದ ವಿರಾಟ್‌ ಕೊಹ್ಲಿ ನನ್ನ ನೆಚ್ಚಿನ ಆಟಗಾರ. ಅವರಂತೆ ಫಿಟ್‌ನೆಸ್‌ ಕಾಯ್ದುಕೊಳ್ಳಬೇಕು’ ಎಂದರು.

‘ತಂದೆ ತಾಯಿ ಬೆಂಬಲ ಚೆನ್ನಾಗಿದೆ. ಪಂದ್ಯಗಳಿದ್ದ ಸಂದರ್ಭದಲ್ಲಿ ಅವರೇ ಕ್ರೀಡಾಂಗಣಕ್ಕೆ ಬಿಟ್ಟು ಹೋಗುತ್ತಾರೆ. ಬೆಳಿಗ್ಗೆ 6–8 ಮತ್ತು ಸಂಜೆ 4–6ರವರೆಗೆ ನೂತನ ವಿದ್ಯಾಲಯ ಮೈದಾನದಲ್ಲಿರುವ ಕೆಸಿಸಿ ಕ್ಲಬ್‌ನಲ್ಲಿ ಅಭ್ಯಾಸ ಮಾಡುತ್ತೇನೆ. ಕೋಚ್‌ಗಳಾದ ವಿಜಯಕುಮಾರ ಮತ್ತು ಬಸವರಾಜ ಕೋಸಗಿ ಯಾವಾಗಲೂ ಬೆನ್ನೆಲುಬಾಗಿ ನಿಂತು ನೆರವಾಗುತ್ತಾರೆ’ ಎಂದು ವೀರೇಶ ಹೇಳಿದರು.

ಆಲ್‌ರೌಂಡರ್‌ ಆಗಿರುವ ಕಾಸೀಫ್‌ ಹೋದ ವರ್ಷ 14 ವರ್ಷದೊಳಗಿನವರ ರಾಜ್ಯ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದರು. 

‘ದಿನಕ್ಕೆ ಆರು ತಾಸು ಅಭ್ಯಾಸ ಮಾಡುತ್ತೇನೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಮುಖ ಟೂರ್ನಿಗಳಲ್ಲಿ ಮಿಂಚುವ ಆಸೆಯಿದೆ. ಕೆಸಿಸಿ ಕ್ಲಬ್‌ನಿಂದ ಉತ್ತಮ ತರಬೇತಿ ಸಿಗುತ್ತಿದೆ‌’ ಎನ್ನುತ್ತಾರೆ ಕಲಬುರಗಿಯವರೇ ಆದ ಕಾಸೀಫ್‌.

ಕೆಎಸ್‌ಸಿಎ ರಾಯಚೂರು ವಲಯ 16 ವರ್ಷದೊಳಗಿನವರ ಅಂತರ ಕ್ಲಬ್ ಕ್ರಿಕೆಟ್‌ ಲೀಗ್‌ ಟೂರ್ನಿಯಲ್ಲಿ ಶ್ರೇಷ್ಠ ಬೌಲಿಂಗ್‌ ಸಾಧನೆ ಮಾಡಿದ್ದು ಕೆಸಿಸಿ ತಂಡದವರೇ ಆದ ಜಾವದ್‌ ಅಲಿ. ಐದು ಪಂದ್ಯಗಳಿಂದ 19 ವಿಕೆಟ್‌ ಕಿತ್ತ ಜಾವದ್‌ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದ್ದರು.

‘ಜಾವದ್‌ ಅಲಿ ಪ್ರತಿಭಾನ್ವಿತ ಆಟಗಾರ. ರಾಜ್ಯ ತಂಡದಲ್ಲಿ ಆಡುವ ಅವಕಾಶ ಎರಡು ಬಾರಿ ಆತನಿಗೆ ತಪ್ಪಿದೆ. ನಿರಂತರ ಪ್ರಯತ್ನ ಸಾಗಿದೆ’ ಎಂದು ಕೆಸಿಸಿ ಕ್ಲಬ್‌ ಕೋಚ್‌ ವಿಜಯಕುಮಾರ್ ಹೇಳುತ್ತಾರೆ.

ಕ್ರಿಕೆಟ್‌ ಕುರಿತು ತೀವ್ರ ಆಸಕ್ತಿ ಮತ್ತು ಪ್ರತಿಭೆಯನ್ನು ಹೊಂದಿರುವ ಈ ಮೂವರು ಆಟಗಾರರು ರಾಜ್ಯ ತಂಡದ ಕದ ತಟ್ಟಲು ತುದಿಗಾಲ ಮೇಲೆ ನಿಂತಿದ್ದಾರೆ. ಇನ್ನಷ್ಟು ಪ್ರೋತ್ಸಾಹ ಸಿಕ್ಕರೆ ಅವರ ಕನಸುಗಳು ಕೈಗೂಡಬಹುದು.

ವಿಜಯಕುಮಾರ ಕೋಚ್‌
ವಿಜಯಕುಮಾರ ಕೋಚ್‌
ಕಾಸೀಫ್ ಅಲಿ
ಕಾಸೀಫ್ ಅಲಿ
ಜಾವದ್‌ ಅಲಿ
ಜಾವದ್‌ ಅಲಿ

ವೀರೇಶ ಹಾಗೂ ಕಾಸೀಫ್‌ ತಂಡದ ಪ್ರಮುಖ ಬ್ಯಾಟರ್‌ಗಳು. ಆರಂಭಿಕ ಆಟಗಾರರಾಗಿ ತಂಡಕ್ಕೆ ಆಧಾರವಾಗಿದ್ದಾರೆ. ಜಾವದ್‌ ಅಲಿ ಮಧ್ಯಮವೇಗಿಯಾಗಿದ್ದು ಮೂವರು ರಾಜ್ಯ ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

-ವಿಜಯಕುಮಾರ್ ಕೆಸಿಸಿ ತಂಡದ ಕೋಚ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT