ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಗೋಡೆಗಳಿಗೆ ಬಣ್ಣದ ಚಿತ್ತಾರ

ಚಿತ್ತಾಪುರ ತಾಲ್ಲೂಕಿನಲ್ಲಿ ಮಕ್ಕಳನ್ನು ಸೆಳೆಯಲು ಕ್ರಮ
Last Updated 18 ಡಿಸೆಂಬರ್ 2020, 2:03 IST
ಅಕ್ಷರ ಗಾತ್ರ

ಕಲಬುರ್ಗಿ: ಕೋವಿಡ್‌ ಲಾಕ್‌ಡೌನ್‌ ಬಹುತೇಕ ತೆರವುಗೊಂಡಿರುವುದರಿಂದ ಕಾಲೇಜುಗಳು ಆರಂಭಗೊಂಡಿದ್ದು, ಶಾಲೆ ಹಾಗೂ ಅಂಗನವಾಡಿಗಳನ್ನು ತೆರೆಯುವ ಚಿಂತನೆಯೂ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಮಕ್ಕಳನ್ನು ಅಂಗನವಾಡಿಗೆ ಸೆಳೆಯುವ ನಿಟ್ಟಿನಲ್ಲಿ ಚಿತ್ತಾಪುರ ತಾಲ್ಲೂಕಿನಲ್ಲಿ ಪ್ರತಿ ಗ್ರಾಮ ಪಂಚಾಯಿಗೆ ಒಂದರಂತೆ ಅಂಗನವಾಡಿ ಕೇಂದ್ರಗಳನ್ನು ಅಂದಗೊಳಿಸುವ ಕಾರ್ಯ ಸದ್ದಿಲ್ಲದೇ ನಡೆದಿದೆ.

ಖಾಸಗಿ ಮಾಂಟೆಸರಿ, ಬೇಬಿ ಸಿಟ್ಟಿಂಗ್‌ಗಳಿಗಿಂತ ಸರ್ಕಾರಿ ಅಂಗನವಾಡಿಗಳು ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನು ಸಾಧಿಸಲು ತಾಲ್ಲೂಕು ಪಂಚಾಯಿತಿಯು ತನ್ನ ವ್ಯಾಪ್ತಿಯ 27 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಕ್ಕಳಿಗೆ ಇಷ್ಟವಾಗುವ ಕಾರ್ಟೂನುಗಳು, ಎಸಿಬಿಡಿ ಅಕ್ಷರ ಮಾಲೆ, ತರಹೇವಾರಿ ಹಣ್ಣುಗಳ ಚಿತ್ರಗಳು, ಜಿಂಕೆ, ಮೊಲ, ಹುಲಿ, ಸಿಂಹದಂತಹ ವನ್ಯಪ್ರಾಣಿಗಳ ಚಿತ್ರಗಳನ್ನು ಅಂಗನವಾಡಿ ಕಟ್ಟಡಗಳ ಗೋಡೆ ಮೇಲೆ ಬರೆಸಲಾಗುತ್ತಿದೆ.

ಅಂಗನವಾಡಿ ಅಷ್ಟೇ ಅಲ್ಲದೇ ನೀರು ಪೂರೈಸುವ ಗುಮ್ಮಿಗಳ ಮೇಲೆಯೂ ನೀರು ಸಂರಕ್ಷಣೆಯ ಮಹತ್ವದ ಬಗ್ಗೆ ಬರೆಸಲಾಗುತ್ತಿದೆ. ಚಿತ್ತಾಪುರ ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈ ಗೋಡೆಗೆ ಚಿತ್ತಾರ ಬರೆಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದಕ್ಕೆ ತಗುಲುವ ಬಣ್ಣದ ಖರ್ಚು, ಕಲಾವಿದರ ಸಂಭಾವನೆಯನ್ನು ಆಯಾ ಗ್ರಾಮ ಪಂಚಾಯಿತಿಗಳ ನಿಧಿಯಿಂದಲೇ ಭರಿಸುವಂತೆ ಸೂಚಿಸಲಾಗಿದೆ ಎನ್ನುತ್ತಾರೆ ಚಿತ್ತಾಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಾನಪ್ಪ ಕಟ್ಟಿಮನಿ.

ಮಾಡಬೂಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹದನೂರು ತಾಂಡಾದಲ್ಲಿರುವ ಅಂಗನವಾಡಿ ಕೇಂದ್ರ ಹಾಗೂ ಅಳ್ಳೊಳ್ಳಿ ಗ್ರಾಮದ ಅಂಗನವಾಡಿಗಳಲ್ಲಿ ಚಿತ್ರ ಬರೆಸುವ ಕೆಲಸ ಪೂರ್ಣಗೊಂಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT