ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | 'ಜಲ ಸಂಗ್ರಹವೊಂದೇ ನೀರಿನ ಸಮಸ್ಯೆಗೆ ಪರಿಹಾರ'

ಗುವಿವಿ ಪರಿಸರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಪ್ರಕಾಶ ಕರಿಯಜ್ಜನವರ ಅಭಿಮತ
Published 25 ಮಾರ್ಚ್ 2024, 6:47 IST
Last Updated 25 ಮಾರ್ಚ್ 2024, 6:47 IST
ಅಕ್ಷರ ಗಾತ್ರ

ಕಲಬುರಗಿ: ‘ಮಳೆಗಾಲದಲ್ಲಿ ಜಿಲ್ಲೆಯ ನದಿಗಳಲ್ಲಿ ಪ್ರವಾಹ ಬಂದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ. ಅದನ್ನು ಯೋಜನೆ ರೂಪಿಸಿ ಸಂಗ್ರಹ ಮಾಡಿದರೆ ಮಾತ್ರ ನೀರಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಪರಿಸರ ವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ. ಪ್ರಕಾಶ ಕರಿಯಜ್ಜನವರ ಹೇಳಿದರು.

ನಗರದ ಹಿಂದಿ ಪ್ರಚಾರ ಸಭಾ ಆವರಣದಲ್ಲಿರುವ ಜಿಲ್ಲಾ ಹಿರಿಯ ನಾಗರಿಕರ ಸಂಘದ ಕಚೇರಿಯಲ್ಲಿ ಭಾನುವಾರ ಪರಿಸರಕ್ಕಾಗಿ ನಾವು– ಕಲಬುರಗಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂತರ್ಜಲ ಮಟ್ಟ ಹೆಚ್ಚಿಸುವುದು ಅನಿವಾರ್ಯವಾಗಿದೆ. ಕಲಬುರಗಿ ಜನಸಂಖ್ಯೆಗೆ ಅನುಗುಣವಾಗಿ 100 ಕೆರೆಗಳಾದರೂ ಬೇಕು. ಎಲ್ಲೆಲ್ಲಿ ಅವಕಾಶ ಇದೆಯೋ ಅಲ್ಲಲ್ಲಿ ಚಿಕ್ಕಚಿಕ್ಕ ಕೆರೆಗಳನ್ನು ನಿರ್ಮಿಸಲು ಮುಂದಾಗಬೇಕು. ಮನೆಗಳಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಹಿಂದೆ 100 ಮನೆಗಳಿರುವ ಊರಿಗೊಂದು ಕೆರೆ ಇರುತ್ತಿತ್ತು. ಇಂದು ಲಕ್ಷ ಮನೆಗಳಿರುವ ಊರುಗಳಿದ್ದರೂ ಕೆರೆಗಳಿಲ್ಲ. ಕಲಬುರಗಿಯಲ್ಲೇ 8 ಕೆರೆಗಳಿದ್ದವು. ಈಗ ಅಪ್ಪನ ಕೆರೆ ಮಾತ್ರ ಉಳಿದಿದ್ದು, ಅದನ್ನು ಸಂರಕ್ಷಿಸಲು ಆಗುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘25 ವರ್ಷಗಳ ಹಿಂದೆ ಭೂಮಿಯ 30ರಿಂದ 50 ಅಡಿ ಆಳದಲ್ಲಿ ನೀರು ಸಿಗುತ್ತಿತ್ತು. ಈಗ 600ಕ್ಕೂ ಹೆಚ್ಚು ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಅಂತರ್ಜಲ ಮಟ್ಟ ಕುಸಿದಂತೆ ನೀರಲ್ಲಿ ಫ್ಲೋರೈಡ್‌ ಅಂಶ ಹೆಚ್ಚಾಗುತ್ತಿದೆ. ರಾಯಚೂರು, ಯಾದಗಿರಿ ಮತ್ತು ಕಲಬುರಗಿಯಲ್ಲಿ ನೀರಿನ ಮಾದರಿ ಪರೀಕ್ಷಿಸಿದಾಗ ಹೆಚ್ಚಿನ ಫ್ಲೋರೈಡ್‌ ಅಂಶ ಕಂಡುಬಂದಿದೆ. ಒಂದು ಲೀಟರ್‌ ನೀರಿನಲ್ಲಿ ಫ್ಲೋರೈಡ್‌ ಅಂಶ 1 ಎಂ.ಜಿ.ಗಿಂತ ಕಡಿಮೆ ಇರಬೇಕು. ಆದರೆ, ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನಲ್ಲಿ 9 ಎಂ.ಜಿ ಪತ್ತೆಯಾಗಿದೆ. ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದರು.

ಜಿಲ್ಲಾ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಪ್ರತಾಪಸಿಂಗ್ ತಿವಾರಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷ ಎಸ್‌.ಎಸ್‌.ಹೀರಾಪೂರ, ನಿವೃತ್ತ ಪ್ರಾಧ್ಯಾಪಕ ಅಶೋಕ ಜೀವಣಗಿ ಉಪಸ್ಥಿತರಿದ್ದರು.

ಶೀಲಾ ತಿವಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ಗುರೂಜಿ ಸ್ವಾಗತಿಸಿದರು. ನಾಗೇಂದ್ರಪ್ಪ ಬುಳ್ಳಾ ನಿರೂಪಿಸಿದರು. ಶ್ಯಾಮರಾವ ಕುಲಕರ್ಣಿ ವಂದಿಸಿದರು. ಕಾರ್ಯಕ್ರಮದ ಮಧ್ಯೆ ಅತಿಥಿಗಳೊಂದಿಗೆ ಜಲ ಸಂರಕ್ಷಣೆ ಕುರಿತು ಸಂವಾದ ನಡೆಯಿತು.

ಜಿಲ್ಲಾ ಹಿರಿಯ ನಾಗರಿಕರ ಸಂಘ, ಸಾರ್ವಜನಿಕ ಹಿತ ರಕ್ಷಣಾ ವೇದಿಕೆ, ಸಾರ್ಥಕ ವೇದಿಕೆ, ಕರ್ನಾಟಕ ಹಿಂದಿ ಪ್ರಚಾರ ಸಭಾ, ರಾಷ್ಟ್ರೀಯ ಮಾನವ ಅಭಿವೃದ್ಧಿ ಫೌಂಡೇಶನ್, ಫೇವಾರ್ಡ್-ಕ, ಅರುಣೋದಯ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ, ನಾಲ್ಕು ಚಕ್ರ ಸಂಘಟನೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT