ಶುಕ್ರವಾರ, ಡಿಸೆಂಬರ್ 4, 2020
20 °C
ಚಿತ್ತಾಪುರ: ನಿಜಾಮರ ಕಾಲದ ಶಾಲಾ ಕಟ್ಟಡ ತೆರವು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

ಹರಾಜು ಮಾಡದೆ ಹಳೆ ಕಬ್ಬಿಣ ಮಾರಾಟ

ಮಲ್ಲಿಕಾರ್ಜುನ ಎಚ್.ಎಂ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ಶಿಥಿಲಗೊಂಡಿದ್ದ ಸರ್ಕಾರಿ ಶಾಲಾ ಕಟ್ಟಡ ತೆರವು ಮಾಡಿದ ನಂತರ  ಅದರ ಕಬ್ಬಿಣ ಕಳ್ಳತನ ಆಗುವ ಆತಂಕದಿಂದ ಹರಾಜು ಮಾಡದೆ ನಿಯಮ ಮೀರಿ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ

ಪಟ್ಟಣದ ಉಪ ನೋಂದಣಾಧಿಕಾರಿ ಕಚೇರಿ ಮುಂದೆ ನಿಜಾಮನ ಕಾಲದ, 90 ವರ್ಷಗಳಿಗಿಂತ ಹೆಚ್ಚು ಹಳೆಯ ಕಟ್ಟಡದಲ್ಲಿ 1964ರಿಂದ ಸರ್ಕಾರಿ ಹಿರಿಯ ಪ್ರಾಥಮಿಕ (ಅಡತ್ ಬಜಾರ) ಶಾಲೆ ನಡೆಯುತ್ತಿದೆ. ಕಟ್ಟಡವು ಸಂಪೂರ್ಣ ಶಿಥಿಲಗೊಂಡಿತ್ತು. ಮಳೆ ಬಂದಾಗ ಇಡೀ ಕಟ್ಟಡ ಸೋರಿಕೆಯಾಗಿ ತರಗತಿ ನಡೆಸಲು ಸಮಸ್ಯೆ ಆಗುತ್ತಿತ್ತು. ಹೀಗಾಗಿ ಕಟ್ಟಡವನ್ನು ತೆರವು ಮಾಡಿಸಿ ಹೊಸ ಕಟ್ಟಡ ಕಟ್ಟಿಸಿ ಎಂದು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮುಖ್ಯ ಶಿಕ್ಷಕರು ಕಳೆದ 15 ವರ್ಷಗಳಿಂದ ಶಿಥಿಲಗೊಂಡ ಕಟ್ಟಡದ ಚಿತ್ರ ಸಹಿತ ಶಿಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಸ್ತುತ ಶಾಸಕ ಪ್ರಿಯಾಂಕ್ ಖರ್ಗೆ ಅವರು ನಬಾರ್ಡ್ ಯೋಜನೆಯಡಿ ₹40 ಲಕ್ಷ ಅನುದಾನ ಒದಗಿಸಿದ್ದರಿಂದ ಶಾಲೆಗೆ ಹೊಸ ಕಟ್ಟಡದ ಭಾಗ್ಯ ಲಭಿಸಿದೆ. ಹೊಸ ಕಟ್ಟಡ ನಿರ್ಮಾಣಕ್ಕಾಗಿ 4 ಹಳೆ ಕೋಣೆಗಳನ್ನು ತೆರವು ಮಾಡಲಾಗಿದೆ. ಹಳೆಕಟ್ಟಡಕ್ಕೆ ರೈಲ್ವೆ ಹಳಿಯಂತಹ ದಪ್ಪ ಕಬ್ಬಿಣ ಮತ್ತು ಸಾಗವಾನಿ ಕಟ್ಟಿಗೆ ಅಳವಡಿಸಲಾಗಿತ್ತು. ಕಟ್ಟಡ ನೆಲಸಮ ಮಾಡಿದ್ದರಿಂದ ಹಳೆ ಕಬ್ಬಿಣ ಮತ್ತು ಕಟ್ಟಿಗೆ ಮಾರಾಟ ಮಾಡಲು ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ ಹರಾಜು ಪ್ರಕ್ರಿಯೆ ನಡೆಸಬೇಕು. ಯಾರು ಹೆಚ್ಚು ಬೆಲೆ ಕೂಗುತ್ತಾರೊ ಅವರಿಗೆ ಮಾರಾಟ ಮಾಡಿ ಬಂದ ಹಣವು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕಟ್ಟಡವನ್ನು ನೆಲಸಮ ಮಾಡಿದ್ದರಿಂದ ಕಬ್ಬಿಣ ಮತ್ತು ಕಟ್ಟಿಗೆಯ ಸಾಮಗ್ರಿಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಹಾಗೆಯೇ ಬಿಟ್ಟರೆ ಕಳ್ಳತನ ಆಗುವ ಸಂಭವವಿದೆ ಎಂದು ಸ್ಥಳೀಯರು ಹೇಳಿದರು. ಸಿ.ಆರ್.ಸಿ ಅವರಿಗೆ ಮೌಖಿಕ ಮಾಹಿತಿ ನೀಡಿ ಹಳೆ ಕಬ್ಬಿಣವನ್ನು ಒಂದು ಕೆ.ಜಿ ಗೆ ₹15 ಬೆಲೆಗೆ ಮಾರಾಟ ಮಾಡಲಾಗಿದೆ. 14.60 ಕ್ವಿಂಟಲ್ ಕಬ್ಬಿಣ ಮಾರಾಟದಿಂದ ₹21,900 ಬಂದಿದೆ ಎಂದು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಮಹಾದೇವಿ  ತಿಳಿಸಿದರು.

ಪಟ್ಟಣದಲ್ಲಿ ಹಳೆ ಶಾಲಾ ಕಟ್ಟಡ ತೆರವುಗೊಳಿಸುತ್ತಿರುವ ವಿಷಯ ಗೊತ್ತಿದ್ದರೂ ಶಿಕ್ಷಣ ಇಲಾಖೆಯ ಯಾವ ಅಧಿಕಾರಿ ಗಮನ ಹರಿಸದೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಶತಮಾನದಷ್ಟು ಹಳೆ ಕಟ್ಟಡಕ್ಕೆ ಕಬ್ಬಿಣ ಮತ್ತು ಉತ್ತಮ ಗುಣಮಟ್ಟದ ಸಾಗವಾನಿ ಕಟ್ಟಿಗೆ ಅಳವಡಿಸಿದ್ದು ಗೊತ್ತಿದ್ದರೂ ಅಧಿಕಾರಿಗಳು ಅವುಗಳ ಮಾರಾಟಕ್ಕೆ ಹರಾಜು ಪ್ರಕ್ರಿಯೆ ನಡೆಸಲು ಶಾಲೆಯ ಮುಖ್ಯ ಶಿಕ್ಷಕಿಗೆ ಮಾರ್ಗದರ್ಶನ ಮಾಡದೆ ನಿರ್ಲಕ್ಷಿಸಿ ಕಡೆಗಣಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಕಬ್ಬಿಣ ಮಾರಾಟದ ಹಣ ಶಾಲೆಯ ಖಾತೆಗೆ ಜಮಾ ಮಾಡಲು ಹೇಳಲಾಗಿದೆ. ಎರಡು ಕೋಣೆಗಳನ್ನು ಅರ್ಧ ಒಡೆದು ಬಿಡಲಾಗಿದೆ. ಪೂರ್ಣ ತೆರವು ಮಾಡಲು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗೆ ಮನವಿ ಮಾಡಲಾಗುತ್ತದೆ ಎಂದು
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಮು ಹರವಾಳ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.