ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸೈಬರ್‌ ಅಪರಾಧ ಊಹೆಗೂ ನಿಲುಕದ ವಂಚನೆ’

ಸಾಮಾಜಿಕ ಜಾಲತಾಣಗಳಲ್ಲೂ ‘ಗೋಪ್ಯತೆ’ ಕಾಯ್ದುಕೊಳ್ಳುವುದು ಅಗತ್ಯ: ಅಂಬರೀಷ್‌ ಪಾಟೀಲ
Published 9 ಮಾರ್ಚ್ 2024, 4:59 IST
Last Updated 9 ಮಾರ್ಚ್ 2024, 4:59 IST
ಅಕ್ಷರ ಗಾತ್ರ

ಕಲಬುರಗಿ: ‘ಎಲೆಕ್ಟ್ರಾನಿಕ್‌ ಸಾಧನಗಳ ಬಳಕೆ ಹೆಚ್ಚಿದಂತೆ ಸೈಬರ್‌ ಕ್ರೈಂ ಪ್ರಕರಣಗಳೂ ಹೆಚ್ಚುತ್ತಿವೆ. ಬರೀ ಒಟಿಪಿ ಹೇಳಿದರೆ ಮಾತ್ರವೇ, ವಂಚನೆ ನಡೆಯುತ್ತೆ ಎಂದೇನಿಲ್ಲ. ಜನರ ಊಹೆಗೂ ಮೀರಿ ವಂಚನೆಗಳು ನಡೆಯಬಲ್ಲವು’ ಎಂದು ನಗರ ಪೊಲೀಸ್‌ ಕಮಿಷನರೇಟ್‌ನ ಸೈಬರ್‌ ಕ್ರೈಂ ವಿಭಾಗದ ಸಿಬ್ಬಂದಿ ಅಂಬರೀಷ್‌ ಪಾಟೀಲ ಎಚ್ಚರಿಸಿದರು.

ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಾಮಾಜಿಕ ಜಾಲತಾಣಗಳಲ್ಲಿ ಪರಿಣತಿ: ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆ ಮಾರ್ಗದರ್ಶಿ’ ವಿಷಯ ಕುರಿತು ಅವರು ಮಾತನಾಡಿದರು.

‘ಬರೀ ಮೊಬೈಲ್‌ ಸಂಖ್ಯೆ ಸಿಕ್ಕರೆ ಸಾಕು, ವಂಚಕರು ಆ ವ್ಯಕ್ತಿಗಳ ಮೇಲೆ ನಿಗಾ ಇಡಬಲ್ಲರು. ಅವರ ಚುಟುವಟಿಕೆಗಳನ್ನು ಆಧರಿಸಿ ವಂಚನೆಗೆ ಸಂಚು ರೂಪಿಸಬಲ್ಲರು. ಹೀಗಾಗಿ ಎಲ್ಲಿಯೇ ಮೊಬೈಲ್‌ ಕೊಡಬೇಕಾದರೂ ಎಚ್ಚರವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಸೈಬರ್‌ ಅಪರಾಧಗಳಲ್ಲಿ ಆರ್ಥಿಕ ವಂಚನೆ ಹಾಗೂ ಆರ್ಥಿಕೇತರ ವಂಚನೆಗಳೆಂಬ ವಿಧಗಳಿವೆ. ಇತ್ತೀಚೆಗೆ ಆರ್ಥಿಕೇತರ ಅಪರಾಧಗಳು ಹೆಚ್ಚು ವರದಿಯಾಗುತ್ತಿವೆ. ಅಂದರೆ, ಸಾಮಾಜಿಕ ಜಾಲತಾಣಗಳು, ಹ್ಯಾ‌ಕಿಂಗ್‌, ಆನ್‌ಲೈನ್‌ ದೌರ್ಜನ್ಯ, ಸೈಬರ್‌ ಸ್ಟಾಲ್ಕಿಂಗ್‌ (ಆನ್‌ಲೈನ್‌ನಲ್ಲಿ ಹಿಂಬಾಲಿಸುವಿಕೆ), ಗುರುತು ಕಳವು (ಒಬ್ಬರ ದಾಖಲೆ ಬಳಸಿ, ಅವರ ಹೆಸರಲ್ಲಿ ವಂಚಿಸುವುದು) ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ’ ಎಂದು ವಿವರಿಸಿದರು.

‘ಮೊಬೈಲ್‌ ಫೋನ್‌ ಜನರ ಬದುಕಿನ ಭಾಗವೇ ಆಗಿದೆ. ಸಾಮಾಜಿಕ ಜಾಲತಾಣಗಳೂ ಅಷ್ಟೇ. ಆದರೆ, ಅವುಗಳ ಸುರಕ್ಷಿತ ಬಳಕೆಗೆ ಅಗತ್ಯ. ಅಗತ್ಯಕ್ಕೆ ತಕ್ಕಷ್ಟೇ ಮೊಬೈಲ್‌ ಬಳಕೆ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಗೋಪ್ಯತೆ ಕಾಯ್ದುಕೊಳ್ಳುವುದು. ಟು–ಸ್ಟೆಪ್‌ ವೆರಿಫಿಕೇಷನ್‌ ಪಾಸ್‌ವರ್ಡ್‌ ನೀತಿ ಪಾಲನೆ, ಆಮಿಷಗಳಿಗೆ ಒಳಗಾಗಿ ಲಿಂಕ್‌ ಮೇಲೆ ಕ್ಲಿಕ್ಕಿಸದಿರುವುದು, ಒಟಿಪಿ ಹಂಚಿಕೊಳ್ಳದಿರುವುದು, ಅನುಮಾನಾಸ್ಪದ ಕ್ಯುಆರ್‌ ಸ್ಕ್ಯಾನ್‌ ಮಾಡದಿರುವುದೆಲ್ಲ ವಂಚನೆಯ ಸಾಧ್ಯತೆಯಿಂದ ಸುರಕ್ಷಿತವಾಗಿರುವ ಮಾರ್ಗ’ ಎಂದು ಅಂಬರೀಷ್‌ ಹೇಳಿದರು.

ದೂರು ನೀಡಲು ವಿಳಂಬ ಬೇಡ:

‘ಅಪಘಾತವಾದ ಕೂಡಲೇ ಹೇಗೆ 108ಗೆ ಕರೆ ಮಾಡಲಾಗುತ್ತದೆಯೋ ಹಾಗೇ ವಂಚನೆ ನಡೆದಾಕ್ಷಣವೇ ಪೊಲೀಸರಿಗೆ ದೂರು ನೀಡಬೇಕು. ನೇರವಾಗಿ ದೂರು ನೀಡಲು ಸಾಧ್ಯವಾಗದಿದ್ದರೆ, 1930ಗೆ ಕರೆ ಮಾಡಿ ದೂರು ನೀಡಬಹುದು. ಆಗ ವಂಚಕರ ಪತ್ತೆ, ಹಣ ಮರಳಿಸಿಗುವ ಸಾಧ್ಯತೆ ಹೆಚ್ಚು. ಮೊಬೈಲ್‌ ಕಳೆದರೂ ತಕ್ಷಣವೇ ಡ್ಯುಪ್ಲಿಕೇಟ್‌ ಸಿಮ್‌ ಖರೀದಿಸುವ ಮೂಲಕ ವಂಚನೆಯಿಂದ ಪಾರಾಗಬಹುದು’ ಎಂದು ಅವರು ವಿವರಿಸಿದರು.

‘ಆಹಾರ ಕಲಬೆರಕೆ ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮಗಳು’ ಕುರಿತು ಆಹಾರ ಸುರಕ್ಷತಾ ಅಧಿಕಾರಿ ಆಂಜನೇಯ ಅವರು ಉಪನ್ಯಾಸ ನೀಡಿದರು. ಜಿಲ್ಲಾ ವಿಜ್ಞಾನ ಕೇಂದ್ರದ ಜಿಲ್ಲಾ ವಿಜ್ಞಾನ ಅಧಿಕಾರಿ ಕೆ.ಎಂ.ಸುನೀಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಶಾಲಾ–ಕಾಲೇಜುಗಳ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಉಪನ್ಯಾಸಗಳ ಪ್ರಯೋಜನ ಪಡೆದರು. ಜಿಲ್ಲಾ ವಿಜ್ಞಾನ ಕೇಂದ್ರದ ಶೈಕ್ಷಣಿಕ ಸಹಾಯಕ ಎನ್‌.ಪೊನ್ನರಸನ್‌‌ ನಿರೂಪಿಸಿ, ವಂದಿಸಿದರು.

‘ಉತ್ತಮ ಆರೋಗ್ಯಕ್ಕೆ ತ್ರಿಸೂತ್ರ...

’ ‘ಮಹಿಳೆಯರು ತಮ್ಮ ಆರೋಗ್ಯದೊಂದಿಗೆ ಕುಟುಂಬದ ಇತರ ಸದಸ್ಯರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಿದ್ದರು. ಆದರೆ ಆಧುನಿಕತೆಗೆ ಮರಳಾಗಿ ಈಗ ತಲೆನೋವಿಗೂ ಮಾತ್ರೆಯ ಮೊರೆ ಹೋಗುತ್ತಿದ್ದಾರೆ’ ಎಂದು ಹಿಂಗುಲಾಂಬಿಕಾ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ದ್ರವ್ಯಗುಣ ಶಾಸ್ತ್ರ ವಿಭಾಗದ ಪ್ರೊ.ನಿರ್ಮಲಾ ಕೆಳಮನಿ ಬೇಸರಿಸಿದರು. ‘ಮಹಿಳೆಯರ ಆರೋಗ್ಯ: ಸವಾಲುಗಳ ಎದುರಿಸುವಿಕೆ ಸಬಲೀಕರಣ ಸಾಧಿಸುವಿಕೆ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು. ‘ಶುಂಠಿ ಕಷಾಯ ಕುಡಿದರೆ ಸಾಕು ತಲೆನೋವು ಪರಿಹಾರವಾಗುತ್ತದೆ ಎಂಬುದನ್ನು ಮರೆತಿದ್ದರಿಂದ ನಮ್ಮ ಆರೋಗ್ಯ ಶರೀರ ಜೀವನವನ್ನೇ ವೈದ್ಯರ ಕೈಗೆ ಕೊಟ್ಟಿದ್ದೇವೆ. ಆರೋಗ್ಯ ಹಾಗೂ ಹಣವನ್ನೂ ಕಳೆದುಕೊಳ್ಳುತ್ತಿದ್ದೇವೆ. ಯಾವುದೇ ಉಳಿಕೆಯೇ ನಿಜವಾದ ಗಳಿಕೆ ಎಂಬುದನ್ನು ಅರಿಯಬೇಕಿದೆ. ಉತ್ತಮ ಆರೋಗ್ಯಕ್ಕಾಗಿ ಮೂರು ಸೂತ್ರಗಳನ್ನು ಪಾಲಿಸಬೇಕಿದೆ’ ಎಂದರು. ‘ಹಸಿದಾಗ ಉಣ್ಣಬೇಕು. ಬಾಯಾರಿದಾಗ ನೀರು ಕುಡಿಯಬೇಕು. ನಿದ್ರೆ ಬಂದಾಗ ಮಲಗಬೇಕು. ಈ ಸರಳ ಸೂತ್ರ ಉತ್ತಮ ಆರೋಗ್ಯದ ಗುಟ್ಟು. ನಿತ್ಯ ಎರಡು ಊಟ ಮಾಡಬೇಕು. ನೀರಡಿಕೆಯಾದಾಗ ನೀರು ಕುಡಿಯಬೇಕು. ಕನಿಷ್ಠ ಆರು ಗಂಟೆ ನಿದ್ರಿಸಬೇಕು ಎಂದು ಆಯುರ್ವೇದ ಸಂಹಿತೆಗಳು ಹೇಳುತ್ತವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT