ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಡಿ: ದಶಕ ಕಳೆದರೂ ಮಗಿಯದ ಅಂಬೇಡ್ಕರ್ ಭವನದ ಕಾಮಗಾರಿ

ಸಿದ್ದರಾಜ ಎಸ್ ಮಲ್ಕಂಡಿ
Published 1 ಮಾರ್ಚ್ 2024, 5:11 IST
Last Updated 1 ಮಾರ್ಚ್ 2024, 5:11 IST
ಅಕ್ಷರ ಗಾತ್ರ

ವಾಡಿ: ನಗರದಲ್ಲಿ ಡಾ.ಅಂಬೇಡ್ಕರ್ ಭವನ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿ ಆರಂಭಿಸಿ 10 ವರ್ಷ ಕಳೆದರೂ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ದಶಕದಿಂದ ಕುಂಟುತ್ತಾ, ತೆವಳುತ್ತಾ ಸಾಗುತ್ತಿದ್ದು, ನಿರ್ದಿಷ್ಟ ಉದ್ದೇಶ ಈಡೇರದ ಕಾರಣ ಸ್ಥಳೀಯರಿಂದ ಅಸಮಾಧಾನ ವ್ಯಕ್ತವಾಗಿದೆ.

ವಾರ್ಡ್‌ ನ.14ರಲ್ಲಿ ಭವನ ನಿರ್ಮಾಣ ಮಾಡಲಾಗುತ್ತಿದ್ದರೆ, ವಾರ್ಡ್‌ ನಂಬರ್‌ 6ರಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಎರಡೂ ಕಾಮಗಾರಿಗಳು ಆಮೆಗತಿಯಲ್ಲಿವೆ.

ಭವನಗಳ ಕೊರತೆಯಿಂದ ಪರಿಶಿಷ್ಟ ಸಮುದಾಯದವರು ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗಾಗಿ ದುಬಾರಿ ಬೆಲೆಯ ಕಲ್ಯಾಣ ಮಂಟಪಕ್ಕೆ ಮೊರೆ ಹೋಗುವುದು ಅನಿವಾರ್ಯವಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲೇಬೇಕು ಎಂದು ಪರಿಶಿಷ್ಟ ಸಮುದಾಯವು ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಇದಕ್ಕಾಗಿ 41 ದಿನಗಳ ನಿರಂತರ ಧರಣಿ ನಡೆಸಿತ್ತು. ಕೊನೆಗೆ ಸ್ಥಳ ಮಂಜೂರಾಗಿ ಭವನ ಕಾಮಗಾರಿಗೆ ₹50 ಲಕ್ಷ ಅನುದಾನ ಬಿಡುಗಡೆಗೊಂಡು ಚಾಲನೆ ನೀಡಲಾಯಿತು.

ಪಟ್ಟಣದ ಹೃದಯ ಭಾಗ ಕಾಕಾ ಚೌಕ್ ವೃತ್ತದಲ್ಲಿ ₹6 ಕೋಟಿ ವೆಚ್ಚದ 10 ಸಾವಿರ ಅಡಿ ಸುತ್ತಳತೆಯ ಮೂರು ಅಂತಸ್ತಿನ ಬೃಹತ್ ಕಟ್ಟಡ ನಿರ್ಮಾಣ ಕಾಮಗಾರಿ 2014ರಲ್ಲಿ ಆರಂಭಿಸಲಾಗಿದೆ. ಅಂದಿನ ಕೇಂದ್ರ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಭವನ ಕಾಮಗಾರಿಗೆ ಅಡಿಗಲ್ಲು ಹಾಕಿದ್ದರು. ಸಮಾಜ ಕಲ್ಯಾಣ ಇಲಾಖೆ ಅಧೀನದ ಕಾಮಗಾರಿಯನ್ನು ಭೂಸೇನಾ ನಿಗಮ ನಿರ್ಮಾಣ ಜವಾಬ್ದಾರಿ ಹೊತ್ತಿದೆ. ಆದರೆ, ಕಾಮಗಾರಿ ಮಾತ್ರ ಮುಗಿಯುತ್ತಿಲ್ಲ. ಕಾಮಗಾರಿ ವಿಳಂಬಕ್ಕೆ ಅನುದಾನ ಕೊರತೆ ಎನ್ನಲಾಗುತ್ತಿದೆ.

ಮೂರು ಅಂತಸ್ತಿನ ಕಟ್ಟಡಗಳ ಪೈಕಿ ಎರಡು ಅಂತಸ್ತು ಮಾತ್ರ ಕೆಲಸ ಮುಗಿದಿದೆ. ಆದರೆ, ಇನ್ನುಳಿದ ಕಾಮಗಾರಿ ಆರಂಭವಾಗಿ ಮುಗಿಯುವುದು ಯಾವಾಗ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ವಾಡಿ ಹೋಬಳಿ ಮಟ್ಟದ ಭವನ ಕಾಮಗಾರಿ ಇದಾಗಿದ್ದು ಕಾಮಗಾರಿ ವಿಳಂಬದಿಂದಾಗಿ ₹50 ಲಕ್ಷ ಯೋಜನೆ ವೆಚ್ಚದ ಬದಲು ಈಗ ₹6 ಕೋಟಿಗೆ ಏರಿಕೆಯಾಗಿದೆ.

ಭವನ ಕಾಮಗಾರಿ ನೆನೆಗುದಿಗೆ ಬಿದ್ದಿದ್ದರಿಂದ ಸುತ್ತಲಿನ ಪ್ರದೇಶ ಕೊಳಚೆ ತಾಣವಾಗಿದ್ದು, ಹಾವು ಚೇಳುಗಳ ಆವಾಸ ಸ್ಥಾನವಾಗಿದೆ.

ವಾರ್ಡ್ ನಂ 6ರಲ್ಲಿಯೂ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸುತ್ತಿದ್ದು 8 ವರ್ಷಗಳಾದರೂ ಕೇವಲ ಪಿಲ್ಲರ್ ಹಾಕುವುದಕ್ಕೆ ಮಾತ್ರ ಸೀಮಿತವಾಗಿದೆ. ₹82ಲಕ್ಷ ವೆಚ್ಚದ ಕಾಮಗಾರಿ ಇದಾಗಿದ್ದು ₹31 ಲಕ್ಷ ಹಣ ಈಗಾಗಲೇ ಗುತ್ತಿಗೆದಾರರಿಗೆ ನೀಡಲಾಗಿದೆ. ಇನ್ನುಳಿದ ಕಾಮಗಾರಿಗೆ ಅನುದಾನದ ಕೊರತೆ ಎದುರಾಗಿದೆ. ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಹಲವು ಹೋರಾಟಗಳು ನಡೆದಿವೆ. ಆದರೂ ನಿರ್ಲಕ್ಷ್ಯ ವಹಿಸುತ್ತಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

’ಪರಿಶಿಷ್ಟ ಸಮುದಾಯದ ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಅನುಕೂಲವಾಗಲಿ ಎಂದು ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೆಚ್ಚುವರಿ ಅನುದಾನ ನೀಡಿದ್ದರು. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ಎರಡೂ ಸಮುದಾಯ ಭವನಗಳು ಮುಗಿಯುತ್ತಿಲ್ಲ’ ಎಂದು ಡಾ.ಬಿ ಆರ್ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಸಂದೀಪ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಾ.ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ನೀಡಿದ ದಮನಿತರ ಶೋಷಿತರ ಕಾರ್ಮಿಕರ ಸ್ತ್ರೀಯರ ಪರವಾದ ಗಟ್ಟಿ ಧ್ವನಿ ನೀಡಿದ ಮಹಾನ್ ನಾಯಕ. ಇಂತಹ ಮಹಾನ್ ನಾಯಕನ ಭವನ ನಿರ್ಮಾಣ ನನೆಗುದಿಗೆ ಬಿದ್ದಿರುವುದು ನೋವಿನ ಸಂಗತಿ
ರವಿ ಸಿಂಗೆ
ವಾರ್ಡ್ ನಂ 6ರಲ್ಲಿ ನಿರ್ಮಿಸುತ್ತಿರುವ ಅಂಬೇಡ್ಕರ್ ಸಮುದಾಯ ಭವನಕ್ಕೆ ₹31 ಲಕ್ಷ ನೀಡಲಾಗಿದೆ. ಇನ್ನುಳಿದ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ
ಸಿ. ಫಕೃದ್ಧೀನ್ ಸಾಬ್ ಮುಖ್ಯಾಧಿಕಾರಿ ಪುರಸಭೆ ವಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT