ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನರೇಗಾ: ಅರ್ಜಿ ಸಲ್ಲಿಸಿದ ಎಲ್ಲರಿಗೂ ಕೆಲಸ ನೀಡಿ’

Last Updated 17 ಆಗಸ್ಟ್ 2021, 14:34 IST
ಅಕ್ಷರ ಗಾತ್ರ

ಕಲಬುರ್ಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ತಕ್ಷಣ ಕೂಲಿ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಕೃಷಿ ಕೂಲಿಕಾರರ ಸಂಘಟನೆ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

‘ಬಡ ಕೂಲಿಕಾರರಿಗೆಂದು ಜಾರಿಗೆ ತರಲಾದ ನರೇಗಾ ಯೋಜನೆಯಿಂದ ಹಲವು ಜನರು ವಂಚಿತರಾಗುತ್ತಿದ್ದಾರೆ. ಪ್ರತಿ ವರ್ಷ ಕೂಲಿಕಾರರ ವಲಸೆ ತಪ್ಪಿಸಲಾಗುತ್ತಿಲ್ಲ. ಇದಕ್ಕೆ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕೀಯ ಪುಢಾರಿಗಳ ಒಲ್ಲದ ಮನಸ್ಸೇ ಕಾರಣವಾಗಿದೆ. ಕೆಲ ಪಂಚಾಯಿತಿಗಳಲ್ಲಿ ಕೆಲಸ ಚಾಲ್ತಿಯಲ್ಲಿದ್ದರೂ ನಿಜವಾದ ಕೂಲಿಕಾರರ ಹೆಸರಿನಲ್ಲಿ ಎನ್‌ಎಂಆರ್‌ ತೆಗೆಯದೇ ಕೆಲಸ ಮಾಡದವರ ಹೆಸರಿನಲ್ಲಿ ಬೋಗಸ್ ಹೆಸರುಗಳನ್ನು ಸೇರಿಸಿ ಹಾಜರಾಗಿ ಹಾಕಿ ಹಣ ಎತ್ತಿ ಹಾಕುವ ಕೆಲಸ ನಡೆದಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಭ್ರಷ್ಟಾಚಾರವನ್ನು ತಡೆಗಟ್ಟುವ ಮೂಲಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನೆಯ ಸಮರ್ಪಕ ಜಾರಿಗೆ ಮುಂದಾಗಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಮಲಾಪುರ ತಾಲ್ಲೂಕಿನ ಶ್ರೀಚಂದ ಗ್ರಾಮ ಪಂಚಾಯಿತಿಯ ಹೊಡಲ್, ಕೊಟ್ಟರಗಾ, ಅಪಚಂದ ಗ್ರಾಮಗಳಲ್ಲಿ 300ಕ್ಕೂ ಹೆಚ್ಚು ಜನರು, ಮಹಾಗಾಂವ ಹಾಗೂ ಮಹಾಗಾಂವ ವಾಡಿಯಲ್ಲಿ 200ಕ್ಕೂ ಹೆಚ್ಚು ಜನರು, ವಿ.ಕೆ. ಸಲಗರ ಗ್ರಾಮದಲ್ಲಿ 300ಕ್ಕೂ ಹೆಚ್ಚು ಕೂಲಿಕಾರರು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ 4 ತಿಂಗಳಾದರೂ ಇನ್ನೂ ಕೆಲಸ ಕೊಟ್ಟಿಲ್ಲ. ಕೂಡಲೇ ಅರ್ಜಿ ಸಲ್ಲಿಸಿದ ಎಲ್ಲರಿಗೂ ನರೇಗಾದಡಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ಕೆಲಸ ಕೊಡಲು ಆಗದಿದ್ದರೆ ನಿರುದ್ಯೋಗ ಭತ್ಯೆ ನೀಡಬೇಕು. ಕಳೆದ ವರ್ಷ ಅಪಚಂದ ಗ್ರಾಮಸ್ಥರು ಬಂಡಿಂಗ್ ಮಾಡಿದ 2 ವಾರಗಳ ಕೂಲಿ ಹಾಗೇ ಉಳಿದಿದ್ದು, ಅದನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಜಯಶ್ರೀ ಕಟ್ಟಿಮನಿ, ಜಿಲ್ಲಾ ಮುಖಂಡ ಮೋಹನ ಕಟ್ಟಿಮನಿ, ಕಮಲಾಪುರ ಘಟಕದ ಅಧ್ಯಕ್ಷ ಮಲ್ಲಪ್ಪ ಪೂಜಾರಿ ಹೊಡಲ್, ಶೋಭಾ ಹಸನಪೇಟ, ಮಾಲನಬಿ, ಅನ್ನಪೂರ್ಣ ಮುರಡಿ, ಸಾವಿತ್ರಿಬಾಯಿ, ಹಣಮಂತ, ಪೂಜಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT