ಬುಧವಾರ, ಅಕ್ಟೋಬರ್ 28, 2020
23 °C
‘ಜಾಗತಿಕ ಔಷಧ ತಜ್ಞರ ದಿನಾಚರಣೆ’ಯಲ್ಲಿ ಡಾ.ಕಿಶೋರಸಿಂಗ್ ಛತ್ರಪತಿ ಸಲಹೆ

ಸಮಾಜದ ಸ್ವಾಸ್ಥ್ಯ ಕಾಪಾಡಲು ಶ್ರಮಿಸಿ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ವೈದ್ಯರು ರೋಗಿಗೆ ಬರೆದುಕೊಟ್ಟ ಔಷಧಯನ್ನು ನೀಡುವುದಷ್ಟೇ ಔಷಧತಜ್ಞರ ಕೆಲಸವಲ್ಲ. ಅದರಾಚೆಗಿನ ಎಲ್ಲ ಜವಾಬ್ದಾರಿಗಳನ್ನೂ ಎಚ್ಚರಿಕೆಯಿಂದ ಪಾಲಿಸಬೇಕು’ ಎಂದು ಹೈದರಾಬಾದ್‌ ಕರ್ನಾಟಕ ಫಾರ್ಮಸಿ ಎಕ್ಸ್‌ಲೆನ್ಸಿ ಅಕಾಡೆಮಿ ಹಾಗೂ ಆರ್‌.ಎಂ.ಇ.ಎಸ್. ಸೊಸೈಟಿ ಅಧ್ಯಕ್ಷ ಡಾ.ಕಿಶೋರಸಿಂಗ್ ಛತ್ರಪತಿ ಸಲಹೆ ನೀಡಿದರು.

ಹೈದರಾಬಾದ್‌ ಕರ್ನಾಟಕ ಫಾರ್ಮಸಿ ಎಕ್ಸ್‌ಲೆನ್ಸಿ ಅಕಾಡೆಮಿ ಹಾಗೂ ರಾಜೀವ ಮೆಮೋರಿಯಲ್ ಎಜುಕೇಶನ್ ಸೊಸೈಟಿ ಆಶ್ರಯದಲ್ಲಿ ಇಲ್ಲಿನ ಆರ್‌.ಎಂ.ಇ.ಎಸ್‌. ಔಷಧ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಜಾಗತಿಕ ಔಷಧ ತಜ್ಞರ ದಿನಾಚರಣೆ’ಯಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.

‘ಬಹುಪಾಲು ಔಷಧ ತಜ್ಞರು ಔಷಧ ನೀಡುವುದಕ್ಕಷ್ಟೇ ತಮ್ಮ ಜ್ಞಾನ ಸಾಕು ಎನ್ನುವ ಭಾವನೆ ಹೊಂದಿರುತ್ತಾರೆ. ಆದರೆ, ಅದು ತಪ್ಪು. ಸಮಾಜದ ಆರೋಗ್ಯದ ಬಗ್ಗೆಯೂ ತಜ್ಞರಿಗೆ ಕಾಳಜಿ ಇರಬೇಕು. ಔಷಧಿಗಳ ಸಂಶೋಧನೆಯಿಂದ ಪ್ರಾರಂಭವಾಗಿ ಔಷಧಿ ಉತ್ಪಾದನೆ, ಪರೀಕ್ಷೆ, ಫ್ರೀ ಫಾರ್ಮುಲೇಶನ್ ಸ್ಟಡೀಸ್‌, ಕ್ಲಿನಿಕಲ್ ಸ್ಟಡೀಸ್, ಫ್ರೀ ಕ್ಲಿನಿಕಲ್ ಸ್ಟಡೀಸ್, ಪೋಸ್ಟ್ ಮಾರ್ಕೆಟಿಂಗ್ ಸ್ಟಡೀಸ್, ಫಾರ್ಮಕೊ ವಿಜಿಲೆನ್ಸ್... ಹೀಗೆ ಹಲವಾರು ವಿಭಾಗಗಳಲ್ಲಿ ತಮ್ಮನ್ನು ತಾವೇ ನಿಶ್ವಾರ್ಥ ಸೇವೆ ಸಲ್ಲಿಸುವಲ್ಲಿಯೂ ತಜ್ಞರು ಹಿಂದೆ ಬಿದ್ದಿಲ್ಲ’ ಎಂದರು.

‘ಮುಖ್ಯವಾಗಿ ಇವತ್ತಿನ ಕೋವಿಡ್-19 ಸಮಯದಲ್ಲಿ ಔಷಧ ತಜ್ಞರು ಹಾಗೂ ಫಾರ್ಮಸಿ ಅಧಿಕಾರಿಗಳ ಜವಾಬ್ದಾರಿ ತುಂಬಾ ಪ್ರಮುಖವಾಗಿದೆ. ಅವರಿಗಿರುವ ರಿಸ್ಕ್ ಕೂಡ ತುಂಬಾ ಹೆಚ್ಚಿಗಿದೆ. ಸಮಾಜದ ಸ್ವಾಸ್ಥ್ಯಕ್ಕೆ ಹಗಲಿರುಳು ದುಡಿಯುತ್ತ ಈ ಕೊರೊನಾ ಯೋಧರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದರು.

‘ವೈದ್ಯರು ರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡಿದರೆ, ಔಷಧ ತಜ್ಞರು ಔಷಧಗಳಿಗೆ ಜೀವ ಕೊಡುವ ಕಾರ್ಯ ಮಾಡುತ್ತಾರೆ. ಕೇಂದ್ರ ಕೋವಿಡ್-19 ಲಸಿಕೆಯನ್ನು ಸರಿಯಾದ ಮಾರ್ಗಗಳ ಮೂಲಕ ಜನರಿಗೆ ತಲುಪಿಸುವ ನೀತಿ, ನಿಯಮಗಳನ್ನು ರೂಪಿಸಬೇಕು ಮತ್ತು ಆರೋಗ್ಯ ತಕ್ಷಣೆಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ವೃತ್ತಿ ನಿರತ ಕಾರ್ಯಕರ್ತರಿಗೆ (ಔಷಧ ತಜ್ಞರು) ಮೊದಲು ಆದ್ಯತೆ ಸಿಗಬೇಕು’ ಎಂದೂ ಅವರು ಹೇಳಿದರು.

‘ಆತ್ಮ ನಿರ್ಭರ ಭಾರತ’ ಅಭಿಯಾನದ ಅಂಗವಾಗಿ ಪರಿಣಾಮಕಾರಿಯಾದ ಲಸಿಕೆಯನ್ನು ಕಂಡು ಹಿಡಿಯಲು ಪ್ರಯತ್ನಗಳು ನಡೆದಿವೆ. ಔಷಧ ತಜ್ಞರ ಅವಿರತ ಪರಿಶ್ರಮದಿಂದ ಈಗ ಕೋವಿಡ್-19ನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗಿದೆ’ ಎಂದು ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಅಶೋಕ ಕುಮಾರ ಮಾಲ್ಪಾನಿ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಪ್ರೊ.ಸಿದ್ದಣ್ಣ ದುರ್ಗದ, ಪ್ರೊ.ಹರಿಪ್ರಸನ್ ಆರ್‌.ಸಿ., ಪ್ರೊ.ವಿಶ್ವನಾಥ ಜೀವಣಗಿ, ಬೋಧಕ, ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.