ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಯುದ್ಧಕ್ಕಿಂತ ಭೀಕರ ಪರಿಸ್ಥಿತಿ

ವೈಶಾಖ ಬುದ್ಧ ಪೂರ್ಣಿಮೆ ಸಮಾರಂಭದಲ್ಲಿ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಆತಂಕ
Last Updated 20 ಜೂನ್ 2018, 9:27 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಗತ್ತಿನ ಕೆಲವು ದೇಶಗಳು ಯುದ್ಧದ ಮನಸ್ಥಿತಿಯಲ್ಲಿವೆ. ಆದರೆ ನಮ್ಮ ದೇಶದಲ್ಲಿ ಯುದ್ಧಕ್ಕಿಂತ ಭೀಕರ ಪರಿಸ್ಥಿತಿ ಇದೆ’ ಎಂದು ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಗುಲಬರ್ಗಾ  ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ 2562ನೇ ವೈಶಾಖ ಬುದ್ಧ ಪೂರ್ಣಿಮೆ ಆಚರಣೆ, ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇರಾನ್, ಇರಾಕ್, ದಕ್ಷಿಣ ಕೋರಿಯಾ, ಉತ್ತರ ಕೋರಿಯಾಗಳು ಯುದ್ಧದ ಮನಸ್ಥಿತಿಯಲ್ಲಿವೆ. ಆದರೆ ಭಾರತದಲ್ಲಿ ಆಂತರಿಕವಾಗಿ ಮನಸ್ಸುಗಳಲ್ಲಿ ಯುದ್ಧ ನಡೆದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ, ಮಹಾರಾಷ್ಟ್ರದಲ್ಲಿ ಬಾವಿಗೆ ಇಳಿದರು ಎಂಬ ಕಾರಣಕ್ಕೆ ದಲಿತ ಬಾಲಕರಿಬ್ಬರನ್ನು ಬೆತ್ತಲೆಗೊಳಿಸಿ ಥಳಿಸಿರುವುದು ಯುದ್ಧಕ್ಕಿಂತ ಭೀಕರ ಸ್ಥಿತಿಗಳಾಗಿವೆ. ನಮ್ಮ ದೇಶದಲ್ಲಿ ಧರ್ಮಗಳಿವೆ, ಆದರೆ ಧಾರ್ಮಿಕತೆ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಯುದ್ಧ ಬೇಡ; ಬುದ್ಧ ಬೇಕು ಎಂದು ಜಗತ್ತು ಬಯಸುತ್ತಿದೆ. ಬುದ್ಧನಿಗೆ ಆತ್ಮ, ದೇವರು ಇಲ್ಲ. ಬುದ್ಧನಿಗೆ ದೇವಸ್ಥಾನ ಬೇಕಿಲ್ಲ. ಆದರೆ ಇಂದು ದೇವರು, ದೇವಸ್ಥಾನ, ಆತ್ಮಗಳಿಗಾಗಿ ಹೊಡೆದಾಟ ನಡೆದಿದೆ. ಈ ಕಾರಣಕ್ಕಾಗಿಯೇ ಬುದ್ಧನ ತತ್ವಗಳು ಬೇಕಾಗಿವೆ. ದಯೆ, ಕರುಣೆ, ಪ್ರೀತಿ, ಬುದ್ಧನ ಅಷ್ಟಾಂಗ ಮಾರ್ಗಗಳನ್ನು ಅನುಸರಿಸಿದರೆ ದೇವರ ಹುಡುಕಾಟದ ಅವಶ್ಯತೆ ಇಲ್ಲ. ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಉದಯ ಮತ್ತು ಕ್ಷಯದ ಮಧ್ಯೆ ಬದುಕುವುದೇ ನಿಜವಾದ ಬದುಕು ಎಂಬುದು ಬುದ್ಧನ ಸಂದೇಶವಾಗಿದೆ’ ಎಂದರು.

‘ಬೌದ್ಧ ಧರ್ಮದಲ್ಲಿ ಮೌಢ್ಯಕ್ಕೆ ಜಾಗವಿಲ್ಲ. ದುಃಖವನ್ನು ತಿಳಿದುಕೊಂಡಾಗ ಸುಖದಿಂದ ಬದುಕಲು ಸಾಧ್ಯ. ಸಚ್ಚಾರಿತ್ರ್ಯ, ಸನ್ನಡತೆ ಬಹಳ ಮುಖ್ಯ. ಇನ್ನೊಬ್ಬರ ಏಳಿಗೆಯನ್ನು ಪ್ರೀತಿಸಬೇಕು. ಎಲ್ಲ ಧರ್ಮದವರನ್ನು ಮನುಷ್ಯರಂತೆ ಕಾಣಬೇಕು. ಆದರೆ ರಾಷ್ಟ್ರೀಯ ಪಕ್ಷವೊಂದು ಮುಸ್ಲಿಮರನ್ನು ದ್ವೇಷಿಸುತ್ತಿದೆ. ಇದು ಅತ್ಯಂತ ಕನಿಷ್ಠ ಕೆಲಸ’ ಎಂದು ಪರೋಕ್ಷವಾಗಿ ಬಿಜೆಪಿ ನಡೆಯನ್ನು ಟೀಕಿಸಿದರು.

ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ‘ಈ ಸಂಸ್ಥೆಯು 2011ರಲ್ಲಿ ಆರಂಭವಾಗಿದ್ದು, ₹1 ಕೋಟಿ ಅನುದಾನ ಲಭ್ಯವಿದೆ. ನಮ್ಮ ಸಂಸ್ಥೆಯಿಂದ ಡಿಸೆಂಬರ್‌ ಒಳಗೆ ಅಂತರರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗುವುದು’ ಎಂದು ತಿಳಿಸಿದರು.

ಕುಲಪತಿ ಪ್ರೊ.ಎಸ್.ಆರ್.ನಿರಂಜನ ಮಾತನಾಡಿ, ‘ಈ ಸಂಸ್ಥೆ ಸ್ವಾಯತ್ತ ಸಂಸ್ಥೆಯಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಸ್ವಂತ ಕಟ್ಟಡಕ್ಕಾಗಿ ಜಾಗವನ್ನು ಮೀಸಲಿಡಲಾಗಿದೆ. ನಾನು ಕುಲಪತಿಯಾಗಿ ಮೂರು ವರ್ಷ ಪೂರ್ಣಗೊಂಡಿದ್ದು, ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಖುಷಿ ಇದೆ’ ಎಂದರು.

ಸಿಂಡಿಕೇಟ್ ಸದಸ್ಯ ವಿಜಯಭಾಸ್ಕರ್ ಇದ್ದರು.

ಇಂದಿನ ವಿದ್ಯಾರ್ಥಿಗಳಿಗೆ ಗಾಂಧಿ, ಬುದ್ಧನ ಬಗ್ಗೆ ತಿಳಿಸಿ ಕೊಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಹೋಗಲಾಡಿಸಲು ಅಧ್ಯಯನ ಪೀಠಗಳು ಕ್ರಿಯಾಶೀಲವಾಗಬೇಕು
– ಪ್ರೊ. ಎಸ್.ಆರ್.ನಿರಂಜನ , ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT