ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌ ಕ್ರೀಡಾಂಗಣಕ್ಕೆ ನಿರ್ವಹಣೆ ಬರ

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಗುಲ್ಬರ್ಗ:  ಕೆಟ್ಟು ನಿಂತ ವಿದ್ಯುತ್‌ ಸ್ವಿಚ್‌ ಬೋರ್ಡ್‌ಗಳು, ಅಲ್ಲಲ್ಲಿ ಪಕ್ಷಿಗಳ ಹಿಕ್ಕೆ, ಮಳೆ ಬಂದು ನಿಂತ ಮೇಲೂ ಸೋರುವ ಕೋಣೆಗಳು, ತುಕ್ಕು ಹಿಡಿದ ಬಾಗಿಲು–ಕಿಟಕಿ ಮತ್ತು ಉಪಕರಣಗಳು, ನೀರಿಲ್ಲದ ಶೌಚಾಲಯಗಳು, ಜೇಡರ ಬಲೆ...
–ಇದು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ನಿರ್ಮಿಸಲಾದ ನಗರದ ಚಂದ್ರಶೇಖರ ಪಾಟೀಲ ಬ್ಯಾಡ್ಮಿಂಟನ್‌ ಒಳಾಂಗಣ ಕ್ರೀಡಾಂಗಣದ ದೃಶ್ಯ!

ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದ ಜಿಲ್ಲಾ ಬ್ಯಾಡ್ಮಿಂಟನ್‌ ಒಳಾಂಗಣ ಕ್ರೀಡಾಂಗಣಕ್ಕೆ ಈಗ ನಿರ್ವಹಣೆ ಬರ ಎದುರಾಗಿದೆ. ಕಾರಣ ಇಲ್ಲಿನ ಅತ್ಯಂತ ಬೆಲೆ ಬಾಳುವ ಉಪಕರಣಗಳು ಹಾಳಾ­ಗುತ್ತಿವೆ. 2005ರಲ್ಲಿ ಜಿಲ್ಲಾಧಿಕಾರಿ­ಯಾಗಿದ್ದ ಲಕ್ಷ್ಮೀನಾ­ರಾಯಣ ಅವರ ಸ್ವಹಿತಾಸಕ್ತಿಯಿಂದ ಈ ಕ್ರೀಡಾಂಗಣ­ದಲ್ಲಿ 6 ಬ್ಯಾಡ್ಮಿಂಟನ್‌ ಅಂಕಣಗಳಿಗೆ ಸಾಗವಾನಿ ಕಟ್ಟಿಗೆಯ ನೆಲಹಾಸನ್ನು ಹಾಕಿಸಿದ್ದರು. ಅದರ ಮೇಲೆ ಈಗ ಧೂಳು ಕುಳಿತು, ಹಾಳಾಗುತ್ತಿದೆ. 2008ರಲ್ಲಿ ಆಯೋಜಿಸಿದ್ದ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಸಂದರ್ಭದಲ್ಲಿ ಅಂದಿನ ಜಿಲ್ಲಾಧಿಕಾರಿ ಪಂಕಜ್‌ಕುಮಾರ್‌ ಪಾಂಡೆ ಅವರು ವಿದ್ಯುತ್‌ ವ್ಯವಸ್ಥೆ ಕಲ್ಪಿಸಿದ್ದರು. ಈಗ ಅವುಗಳಲ್ಲಿಯೂ ಕೂಡ ಕೆಲವು ಹಾಳಾಗಿವೆ. ಅಲ್ಲದೇ ಅವುಗಳ ಮೇಲೆ ಜೇಡಗಳು ಬಲೆ ಹೆಣೆದಿವೆ.

ನಗರದ ವಿವಿಧ ಶಾಲೆಗಳ ಮಕ್ಕಳು ಸಂಜೆ 4.30 ಗಂಟೆ ನಂತರ ಬ್ಯಾಡ್ಮಿಂಟನ್‌ ಅಭ್ಯಾಸ ಮಾಡಲು ಬರುತ್ತಾರೆ. ಆದರೆ, ಅದೇ ವೇಳೆ ವಿದ್ಯುತ್‌ ವ್ಯತ್ಯಯವಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಜನರೇಟರ್‌ ವ್ಯವಸ್ಥೆ ಇಲ್ಲ. ಪ್ರತಿ ಬಾರಿ ಮಳೆ ಬಂದಾಗ ಒಳಾಂಗಣ ಕ್ರೀಡಾಂಗಣ ಸೋರುತ್ತದೆ. ಛಾವಣಿಗೆ ಹಾಕಲಾದ ಟಿನ್‌ಶೀಟ್‌­ಗಳಲ್ಲಿ ಬಿದ್ದಿರುವ ರಂಧ್ರಗಳಿಂದ ನೀರು ಜಿನುಗುತ್ತದೆ. ಆ ನೀರು ನೆಲಹಾಸು ಮೇಲೆ ಬಿದ್ದು, ಕಟ್ಟಿಗೆ ಉಬ್ಬುತ್ತದೆ. ಅಲ್ಲದೇ ನೆಲಹಾಸಿನ ಮೇಲಿನ ದೂಳಿ­ನಿಂದಾಗಿ ಮಕ್ಕಳು ಆಟ ಆಡುವಾಗ ಕಾಲು ಜಾರಿ ಬಿದ್ದ ಉದಾಹರಣೆಗಳೂ ಇವೆ. ಶೌಚಾಲಯಗಳಿದ್ದರೂ ನೀರಿನ ವ್ಯವಸ್ಥೆ ಇಲ್ಲದ ಕಾರಣ ಹದಗೆಟ್ಟಿವೆ. ಛಾವಣಿ ಮೇಲೆ ಮಳೆ ನೀರು ನಿಂತು ಸೋರುತ್ತಿವೆ. ಕ್ರೀಡಾಪಟುಗಳು ಉಳಿದುಕೊಳ್ಳುವ ಕೋಣೆಗಳೂ ಇದಕ್ಕೆ ಹೊರತಾಗಿಲ್ಲ.

‘ಗುಲ್ಬರ್ಗವು ವಿಭಾಗೀಯ ಕೇಂದ್ರ­ವಾಗಿದೆ. ಕಾರಣ ಜಿಲ್ಲಾ, ವಿಭಾಗ, ರಾಜ್ಯ ಮಟ್ಟದ ಕ್ರೀಡಾಕೂಟಗಳು ಇಲ್ಲಿ ನಡೆಯುತ್ತವೆ. ಆದರೆ, ನಿರ್ವಹಣೆ ಶೂನ್ಯವಾಗಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ಗಳನ್ನು ಆಯೋಜಿಸಬೇಕು ಎಂದರೆ ಇಲ್ಲಿನ ಅವ್ಯವಸ್ಥೆಯಿಂದಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಂಸ್ಥೆಗಳು ಒಪ್ಪಿಗೆ ನೀಡುತ್ತಿಲ್ಲ’ ಎಂದು ಜಿಲ್ಲಾ ಬ್ಯಾಡ್ಮಿಂಟನ್‌ ಅಸೊಸಿಯೇಷನ್ ಕಾರ್ಯದರ್ಶಿ ಯೋಗೇಶ ಪಾಟೀಲ ಬೇಸರ ವ್ಯಕ್ತಪಡಿಸುತ್ತಾರೆ.

ಈಚೆಗೆ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ರಾಜ್ಯಮಟ್ಟದ ಹಾಗೂ ದಸರಾ ವಿಭಾಗದ ಮಟ್ಟದ ಬ್ಯಾಡ್ಮಿಂಟನ್‌ ಕ್ರೀಡಾಪಟುಗಳು ಇಲ್ಲಿನ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT