ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಪಾಲ ತೆಗನೂರು ಜನ ಜರ್ಜರಿತ

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಗುಲ್ಬರ್ಗ: ಈ ಗ್ರಾಮದಲ್ಲಿ ಕಾಲಿಟ್ಟರೆ ಸಾಕು ನೀರವ ಮೌನ, ದುಃಖ ಮಡುಗಟ್ಟಿದ ಮುಖಗಳು, ತಲೆ ಮೇಲೆ ಕೈ ಹೊತ್ತು ತಮ್ಮ ಮುರುಕು ಗುಡಿಸಲು, ಹರುಕು ಚಪ್ಪರದಲ್ಲಿ ಕುಳಿತ ಜನರೇ ಕಾಣಸಿಕ್ಕುತ್ತಾರೆ.

ಯಾಕೆ? ಏನಾಗಿದೆ? ಹೀಗೇಕೆ ಕುಳಿತಿದ್ದೀರಿ ಎಂದು ಪ್ರಶ್ನಿಸಿದರೆ ಸಾಕು, `ಅದೇನ್ ಹೇಳಬೇಕ್ರಿ ಎಪ್ಪಾ ನಿಮ್ಮುಂದ; ಬಂಗಾರದಂಥ ಮಗ, ಚಿನ್ನದಂಥ ಹುಡುಗಿ, ಮುತ್ತಿನಂಥ ಗಂಡ, ಮುದ್ದಿಸುವ ಅಪ್ಪ,ಅವ್ವ ತೀರಿ ಹೋಗ್ಯಾರ! ಮರಗಮ್ಮನಾವಳಿ ಬಂದಂಗ ಇದ್ದೋರೆಲ್ಲರೂ ಒಬ್ಬಬ್ಬರಾಗಿ ಸಾಯ್ಲಿಕತ್ಯಾರ. ಹಿಂದ್ಕ ಭೂಪಾಲ ಅರಸ ಆಳಿದ ಈ ಊರಿಗಿ ಅದೇನೋ ಡೆಂಗಿ ಮಾರಿ ಬಂದಾದಂಥ~ ಎಂದು ಒಂದೇ ಸಮ ಗೋಳಿಡುತ್ತಾರೆ.

ಸುಮಾರು 650 ಮನೆಗಳಿರುವ ಈ ಗ್ರಾಮದಲ್ಲಿ ಮೇಲಿಂದ ಮೇಲೆ ಸಾವು ಸಂಭವಿಸುತ್ತಿರುವುದರಿಂದ ಯಾರದೋ ಮಾತುಕೇಳಿ ಸುಮರು ಹತ್ತೆಂಟು ಮನೆಗಳ ಬಾಗಿಲು ಮುಚ್ಚಿ ಬಾರಿಮುಳ್ಳು ಹಚ್ಚಿರುವುದು ಕಂಡು ಬಂದಿತು.

ಇಲ್ಲಿ ಒಂದೆರಡು ಕಿ. ಮೀ. ಸಿಸಿ ರಸ್ತೆ ನಿರ್ಮಾಣವಾಗಿದ್ದರೂ ಉಳಿದೆಡೆಗಳಲ್ಲಿ ಎಲ್ಲಂದರಲ್ಲಿ ಪೊಗದಸ್ತಾಗಿ ಬೆಳೆದು ನಿಂತ ಕಾಂಗ್ರೆಸ್ ಹುಲ್ಲು (ಪಾರ್ಥೇನಿಯಂ ಸಸ್ಯ), ತಿಪ್ಪಿ, ಕಸದ ಕೊಂಪೆ, ಬಚ್ಚಲ ನೀರು, ಮಲೆತು ನಿಂತ ಮಳೆ ನೀರು ಮನೆಗಳನ್ನು ಸುತ್ತುವರಿದಿರುವುದು ಕಂಡು ಬಂದಿತು.

ಹೀಗಾಗಿ ಅಲ್ಲಿ ಹಂದಿ, ನಾಯಿಗಳ ದರ್ಬಾರ್ ಸಹಜವಾಗಿ ಕಾಣಬಹುದಿತ್ತು. ವೆಂಕಟಬೇನೂರ, ಇಟಗಾ ಅಹ್ಮದಾಬಾದ್, ಮಾಲಗತ್ತಿ ಗ್ರಾಮವನ್ನೊಳಗೊಂಡ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿರುವ ಈ ಗ್ರಾಮವನ್ನು ಐದು ಜನ ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿನಿಧಿಸುತ್ತಿದ್ದಾರೆ.

`ಎಲೆಕ್ಚನ್ ಟೈಮ್‌ನ್ಯಾಗ ಓಟು ಕೇಳಲು ಬಂದಿದ್ದ ರೇವುನಾಯಕ ಬೆಳಮಗಿ ಒಂದ್ ಸಲ ಭೇಟಿ ನೀಡಿದ್ದು ಬಿಟ್ಟರೆ ಇಲ್ಲಿವರೆಗೆ ನಾವು ಇದ್ದೀವೋ ಅಥವಾ ಸತ್ತೀವೋ ಎಂಬುದನ್ನು ನೋಡಲು ಬಂದಿಲ್ಲ. ಮೂಲಸೌಕರ್ಯ ಕಲ್ಪಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರನ್ನು ಕೇಳಿದರೆ ನಿಮ್ಮ ವಿರುದ್ಧವೇ ಕೇಸ್ ಹಾಕಲಾಗುವುದು ಎಂದು ಹೆದರಿಸುತ್ತಿದ್ದಾರೆ~ ಎಂದು ವಿವೇಕಾನಂದ ಯುಥ್ ಕಮಿಟಿ ಸದಸ್ಯರಾದ ದಯಾನಂದ, ಕಾಶಿನಾಥ ಮುದಡಗಿ  ಹಾಗೂ ದಲಿತ ಪ್ಯಾಂಥರ್‌ನ ಕಾಶೀನಾಥ ದೀವಂಟಗಿ ತಿಳಿಸಿದರು.

ಒಂದುವರೆ ತಿಂಗಳಲ್ಲಿ ಸಾವನ್ನಪ್ಪಿದವರಿವರು: ರೇಖಾ ಜಗದೇವಪ್ಪ (16), ಆದಮ್ಮ ಶಿವಶರಣಪ್ಪ ಹೂಗಾರ (55), ಸಿದ್ರಾಮಪ್ಪ ಮಾಲಿ ಪಾಟೀಲ (45), ನೀಲಮ್ಮ ಮಲ್ಲಪ್ಪ ಬುರ್ಲಿ (58), ವಿಠಲ್ ಭೀಮಶ್ಯಾ (40), ಜಗಪ್ಪ ಧೂಳಪ್ಪ ಬುರ್ಲಿ (32), ಸಾಬವ್ವ ಶರಣಪ್ಪ ಜಮಾದರ (52), ರಾಘವೇಂದ್ರ ರುಕ್ಮಯ್ಯ ಗುತ್ತೇದಾರ (15), ರೇವಣಪ್ಪ ಮಲ್ಲಪ್ಪ ಹೂಗಾರ (55), ಅಮೃತ ಮಲ್ಲಪ್ಪ ಗಂವ್ಹಾರ (48), ಭೀಮಬಾಯಿ ಶರಣಪ್ಪ ರಾವೂರ (16), ರುಕ್ಕಪ್ಪ ಮಲ್ಲಪ್ಪ (59),  ರುದ್ರಪ್ಪ ಶಿವಪ್ಪ ಪಾಡೇಗಾರ (45), ಜಗದೇವಪ್ಪ ಬಾಬುರಾವ ಕಟ್ಟಿಮನಿ (23), ಉಷಮ್ಮ ಭೀಮಶ್ಯಾ ದೊಡ್ಡಮನಿ (42), ಸುರೇಶ ತಳವಾರ ಅವರ 2 ತಿಂಗಳ ಮಗು, ಪೀರವ್ವ  ಮಾಣಿಕಪ್ಪ ಹೊಳಕುಂದ (56), ಭೀಮಶ್ಯಾ  ಗಂವ್ಹಾರ (52).

ಜ್ವರದಿಂದ ಬಳಲುತ್ತಿರುವವರು: ಮಲ್ಲಿಕಾರ್ಜುನ ಮಡಿವಾಳ, ಪಾರ್ವತಿಬಾಯಿ ಹೊಸಮನಿ, ರತ್ನಮ್ಮ ಜಗನ್ನಾಥ, ಭಾರತಿಬಾಯಿ ಇಟಗಾ, ವಿಶ್ವನಾಥ ಹೊಸಗೌಡ, ಶಾರಾದಾಬಾಯಿ ಚಂದ್ರಶ್ಯಾ, ಹನುಮಂತ ಬಡಿಗೇರ, ಭಾಗ್ಯಶ್ರೀ ಬಡಿಗೇರ, ದೇವಿಂದ್ರ ವಿಠಲ್, ಸುಶಿಲಾಬಾಯಿ ಇಟಗಾ.

ಗುಲ್ಬರ್ಗ ನಗರದಿಂದ ಕೇವಲ 8 ಕಿ.ಮೀ. ದೂರವಿರುವ ಭೂಪಾಲ ತೆಗನೂರು ಗ್ರಾಮದಲ್ಲಿ ಸುಮಾರು ಒಂದುವರೆ ತಿಂಗಳಲ್ಲಿ ಸಂಶಯಾಸ್ಪದ ಡೆಂಗೆಯಿಂದ 14 ಜನ ಸಾವನ್ನಪ್ಪಿರುವುದರಿಂದ ಗ್ರಾಮಸ್ಥರು ಭಯದ ವಾತಾವರಣದಲ್ಲಿ ಬದುಕು ಸಾಗಿಸುವಂತಾಗಿದೆ. ಸಂಬಂಧಿಸಿದವರು ಈ ಬಗ್ಗೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಸಾವೆಲ್ಲವೂ ಡೆಂಗೆಯಿಂದಲ್ಲ!

ಭೂಪಾಲ ತೆಗನೂರ ಗ್ರಾಮದಲ್ಲಿ ಸಾವನ್ನಪ್ಪಿದ 14 ಜನರಲ್ಲಿ 12 ಜನ ವಿವಿಧ ಕಾಯಿಲೆ ಕಾರಣದಿಂದ ಸಾವನ್ನಪ್ಪಿದ್ದಾರೆ. ರೇಖಾ ಜಗದೇವಪ್ಪ ಹಾಗೂ ಉಷಮ್ಮ ಭೀಮಶ್ಯಾ ದೊಡ್ಡಮನಿ ಸಂಶಯಾಸ್ಪದ ಡೆಂಗೆಯಿಂದ ಸಾವನ್ನಪ್ಪಿರಬಹುದು. ಈಗಾಗಲೇ ಆ ಗ್ರಾಮಕ್ಕೆ ಮಾತ್ರೆ ಸರಬರಾಜು ಮಾಡಲಾಗಿದ್ದು, ರಕ್ತ ಪರೀಕ್ಷೆ ಕೂಡ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT