ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಕೇಳುವವರಿಲ್ಲ ಮಹಾತ್ಮ ಗಾಂಧಿ ಕುಷ್ಠ ರೋಗಿಗಳ ಕಾಲೊನಿ ನಿವಾಸಿಗಳ ಗೋಳು

ಉದ್ಯೋಗ ಕೇಂದ್ರಕ್ಕೆ ಹೆಚ್ಚಿದ ಬೇಡಿಕೆ
Last Updated 6 ಅಕ್ಟೋಬರ್ 2020, 8:09 IST
ಅಕ್ಷರ ಗಾತ್ರ
ADVERTISEMENT
""
""

ಕಲಬುರ್ಗಿ: ಸುತ್ತಲೂ ಮರಗಿಡಗಳ ಹಸಿರಿನ ಸೊಬಗು, ಕಿವಿಗೆ ಇಂಪು ನೀಡುವ ಹಕ್ಕಿಗಳ ಕಲರವ, ಮನಸ್ಸಿಗೆ ಮುದ ನೀಡುವ ಪುಟ್ಟ ಉದ್ಯಾನ, ಪ್ರಶಾಂತತೆಯಿಂದ ಕೂಡಿರುವ ಸ್ವಚ್ಛ ವಾತಾವರಣ...

ನಗರದ ಮಹಾತ್ಮ ಗಾಂಧಿ ಕುಷ್ಠರೋಗಿಗಳ ಕಾಲೊನಿ ಪ್ರವೇಶಿಸುತ್ತಿದ್ದಂತೆಯೆ ಕಂಡು ಬರುವ ದೃಶ್ಯಗಳಿವು.

ಸುಮಾರು 260 ಜನರು ವಾಸ ಮಾಡುವ ಈ ಕಾಲೊನಿಯಲ್ಲಿ ಸಿಸಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಹಲವು ಸೌಲಭ್ಯಗಳು ಉತ್ತಮವಾಗಿವೆ. ನಿವಾಸಿಗಳೆಲ್ಲ ಒಟ್ಟುಗೂಡಿ ಪ್ರತಿದಿನ ಕಸಗೂಡಿಸಿ ಕಾಲೊನಿಯನ್ನು ಸ್ವಚ್ಛವಾಗಿಟ್ಟುಕೊಂಡಿದ್ದಾರೆ. 1999ರಲ್ಲಿ ಬೆಂಕಿ ಅವಘಡಕ್ಕೆ ಇಲ್ಲಿನ ಗುಡಿಸಲುಗಳು ಆಹುತಿಯಾದಾಗಎಚ್ಚೆತ್ತ ಪಾಲಿಕೆ ಕುಷ್ಠರೋಗಿಗಳ ಕುಟುಂಬಗಳಿಗೆ ಮನೆ ನಿರ್ಮಿಸಿ, ಕಾಲೊನಿ ಅಭಿವೃದ್ಧಿಗೆ ಒತ್ತು ನೀಡಿ ಹಲವು ಸೌಲಭ್ಯಗಳನ್ನು ಒದಗಿಸಿದೆ.

ವಾರ್ಡ್‌ ನಂ.22ರಲ್ಲಿ ಬರುವ ಈ ಕಾಲೊನಿಯಲ್ಲಿ ಸುಮಾರು 80 ಮನೆಗಳಿವೆ. ಆದರೆ ಇಲ್ಲಿನ ಅರ್ಧದಷ್ಟು ಮನೆಗಳಿಗೆ ಶೌಚಾಲಯಗಳಿಲ್ಲ. ಹೀಗಾಗಿ ಇಲ್ಲಿನ ಜನರಿಗೆ ಬಹಿರ್ದೆಸೆ ತಪ್ಪಿಲ್ಲ. ಅಲ್ಲದೆ ಸುಮಾರು 80 ಜನರಿಗೆ ಮನೆ ಇಲ್ಲ. ಅವರೆಲ್ಲರೂ ತಾತ್ಕಾಲಿಕವಾಗಿ ಇನ್ನೊಬ್ಬರ ಮನೆಯಲ್ಲಿಯೆ ಆಶ್ರಯ ಪಡೆದಿದ್ದಾರೆ. ಶೀಘ್ರ ಮನೆ ನಿರ್ಮಿಸಿಕೊಡುವಂತೆ ಜಿಲ್ಲಾಧಿಕಾರಿ, ಸಂಸದರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಕಾಲೊನಿಯಲ್ಲಿ ಸುಸಜ್ಜಿತ ಅಂಗನವಾಡಿ ಕೇಂದ್ರವಿದೆ. ಸುಮಾರು 70 ಮಕ್ಕಳಿದ್ದು, ಪ್ರಾಥಮಿಕ ಶಿಕ್ಷಣಕ್ಕೆ ಹತ್ತಿರದ ಕಾಲೊನಿಗಳಿಗೆ ಹೋಗುತ್ತಾರೆ. ಇದೇ ಕಾಲೊನಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಆರಂಭಿಸಿದರೆ ಇಲ್ಲಿನ ಮಕ್ಕಳಿಗೆ ಅನುಕೂಲವಾಗಲಿದೆ. ಅಲ್ಲದೆ ಬಡಾವಣೆ ಜನರಿಗಾಗಿ ಸಭೆ, ಸಮಾರಂಭಗಳನ್ನು ನಡೆಸಲು ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸುತ್ತಾರೆ ನಿವಾಸಿಗಳು.

1998ರಿಂದ ಇಲ್ಲಿಯೆ ನೆಲೆಸಿರುವ ಮಹಾತ್ಮ ಗಾಂಧಿ ಕುಷ್ಠರೋಗಿಗಳ ಸೇವಾ ಸಂಘದ ಅಧ್ಯಕ್ಷ ಹನಮಂತ ದೇವನೂರ ಅವರು ಇಲ್ಲಿನ ಕುಷ್ಠರೋಗಿಗಳ ಆರೈಕೆಯಲ್ಲಿ ನಿರತರಾಗಿದ್ದಾರೆ. ಹಲವು ದಾನಿಗಳು ಮತ್ತು ಸಂಘ ಸಂಸ್ಥೆಗಳ ಸಹಾಯದಿಂದ ಇಲ್ಲಿನ 12 ಯುವಕರಿಗೆ ಆಟೊ ಮತ್ತು 9 ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಲಾಗಿದೆ. ಕೆಲವರಿಗೆ ಗೂಡಂಗಡಿ ಹಾಕಿಕೊಡಲಾಗಿದೆ. ಆದರೆ ಉಳಿದ ಜನರಿಗೆ ಸ್ಥಿರವಾದ ಉದ್ಯೋಗವಿಲ್ಲ. ಹೀಗಾಗಿ ಸರ್ಕಾರ ಕೂಡಲೇ ಕಾಲೊನಿಯಲ್ಲಿ ಉದ್ಯೋಗ ಕೇಂದ್ರ ಸ್ಥಾಪಿಸಿ, ತರಬೇತಿ ಮತ್ತು ಹಣಕಾಸಿನ ಸೌಲಭ್ಯ ನೀಡಿದರೆ ಇಲ್ಲಿನ ನಿವಾಸಿಗಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

‘ಪಡಿತರ ಚೀಟಿ, ಪಿಂಚಣಿ ಬಂದಿಲ್ಲ’

6 ತಿಂಗಳುಗಳಿಂದ ಪಡಿತರ ಬರದೆ ಇದ್ದುದ್ದರಿಂದ ಪರದಾಡುವಂತಾಗಿದೆ. ಅದರಲ್ಲೂ ಲಾಕ್‌ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಆರ್ಥಿಕವಾಗಿ ತೀವ್ರ ಸಂಕಷ್ಟ ಅನುಭವಿಸಿ ಊಟವಿಲ್ಲದೆ ಪರದಾಡುವಂತಾಯಿತು.ಲಾಕ್‌ಡೌನ್ ಆರಂಭದಲ್ಲಿ ಕೆಲ ಜನಪ್ರತಿನಿಧಿಗಳು ಒಂದಿಷ್ಟು ಆಹಾರ ಸಾಮಗ್ರಿ ನೀಡಿ, ಫೋಟೊ ತೆಗೆಸಿಕೊಂಡು ಹೋಗಿದ್ದು ಬಿಟ್ಟರೆ ಯಾವ ಸಹಾಯವನ್ನು ಮಾಡಲಿಲ್ಲ ಎಂದು ಕಾಲೊನಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಪಡಿತರ ಚೀಟಿ ಮತ್ತು ಪಿಂಚಣಿ ನವೀಕರಣಕ್ಕೆ ಹೋದಾಗ ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡಲು ಅಧಿಕಾರಿಗಳು ಹೇಳುತ್ತಾರೆ. ಆದರೆ ದಾಖಲೆ ಪಡೆಯಲು ಥಂಬ್ ನೀಡಲು ಸಾಧ್ಯವಾಗುತ್ತಿಲ್ಲ. ಇದರಂದಾಗಿ ಐದಾರು ತಿಂಗಳಿಂದ ಪಿಂಚಣಿ, ಪಡಿತರ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಪ್ರತಿ 6 ತಿಂಗಳಿಗೊಮ್ಮೆ ಕುಷ್ಠರೋಗಿಗಳಿಗೆ ನೀಡುತ್ತಿದ್ದ ಕಿಟ್‌ಗಳನ್ನು ಒಂದು ವರ್ಷವಾದರೂ ನೀಡಿಲ್ಲ ಎಂದು ಅವರು ದೂರಿದರು.

**********

ಹನಮಂತ ದೇವನೂರ

ಒಂದು ವರ್ಷದಿಂದ ಕಾಲೊನಿಯಲ್ಲಿರುವ ರೋಗಿಗಳಿಗೆ ಎಂಸಿಆರ್ ಚಪ್ಪಲಿ, ಡ್ರೆಸಿಂಗ್ ಕಿಟ್ ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು
- ಹನಮಂತ ದೇವನೂರ, ಅಧ್ಯಕ್ಷ, ಮಹಾತ್ಮ ಗಾಂಧೀಜಿ ಕುಷ್ಠರೋಗಿಗಳ ಸೇವಾ ಕೇಂದ್ರ

ಸಿದ್ದಲಿಂಗಪ್ಪ ಬಿರಾದಾರ

ಅಧಿಕಾರಿಗಳು ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಲು ಹೇಳುತ್ತಿದ್ದಾರೆ. ಆದರೆ ಅದಕ್ಕೆ ಥಂಬ್ ಕೊಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ 6 ತಿಂಗಳಿಂದ ಪಡಿತರ ನಿಂತಿದೆ
-ಸಿದ್ದಲಿಂಗಪ್ಪ ಬಿರಾದಾರ,ನಿವಾಸಿ

***

ಶಂಕರ್ ಸಿಂಗ್

ನನ್ನ ಆಡಳಿತ ಅವಧಿಯಲ್ಲಿ ಕಾಲೊನಿಯಲ್ಲಿ ಸಿಸಿ ರಸ್ತೆ, ಶೌಚಾಲಯ, ಮನೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ನಡೆದಿವೆ. ಕಾಲೊನಿ ನಿವಾಸಿಗಳ ಸಮಸ್ಯೆಗಳಿಗೆ ಪಾಲಿಕೆ ಅಧಿಕಾರಿಗಳು ಸ್ಪಂದಿಸಬೇಕು
-ಶಂಕರ್ ಸಿಂಗ್, ಪಾಲಿಕೆ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT