ಶುಕ್ರವಾರ, ಮಾರ್ಚ್ 31, 2023
33 °C
ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತರಲ್ಲಿ ಅಮಿತೋತ್ಸಾಹ

ಹುಬ್ಬಳ್ಳಿ| ಕಾಂಗ್ರೆಸ್‌ ಕ್ಷೇತ್ರ ವಶಕ್ಕೆ ಮತ್ತೆ ರೋಡ್‌ ಶೋ: ಕಾರ್ಯಕರ್ತರ ಉತ್ಸಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುವಜನೋತ್ಸವ ಮೇಳವನ್ನು ಉದ್ಘಾಟಿಸಲು ಬಂದು, 8 ಕಿ.ಮೀ ರೋಡ್‌ ಶೋ ನಡೆಸಿದ್ದು ಮರೆಯುವ ಮುನ್ನವೇ ಗೃಹ ಸಚಿವ ಅಮಿತ್‌ ಶಾ ಸಹ ಹುಬ್ಬಳ್ಳಿಗೆ ಭೇಟಿ ನೀಡಿ ರೋಡ್‌ ಶೋ ನಡೆಸಿದರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಅಮೃತ ಮಹೋತ್ಸವ ಹಾಗೂ ಧಾರವಾಡದಲ್ಲಿ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಭೂಮಿ ಪೂಜೆಯ ನೆಪದಲ್ಲಿ ಬಂದವರು, ಕಿತ್ತೂರು ಕರ್ನಾಟಕದಲ್ಲಿ ಕಾಂಗ್ರೆಸ್‌ ಹಿಡಿತದಲ್ಲಿರುವ ಕ್ಷೇತ್ರದಲ್ಲಿ ರೋಡ್‌ಶೋ ಮಾಡಿದರು. ಧಾರವಾಡ ಜಿಲ್ಲೆಯ ಕುಂದಗೋಳ, ಬೆಳಗಾವಿಯ ಎಂ.ಕೆ.ಹುಬ್ಬಳ್ಳಿಯ ರಸ್ತೆಯಲ್ಲಿ ಕಾರ್ಯಕರ್ತರಿಗೆ ಕೈಬೀಸುತ್ತ ಸಾಗಿದ ಅಮಿತ್‌ ಶಾ ವಾಹನ, ಈ ಭಾಗದ ಕಾರ್ಯಕರ್ತರಲ್ಲಿ ಅಮಿತೋತ್ಸಾಹ ತುಂಬಿತು.

‘ದೇಶಕ್ಕಾಗಿ ಎರಡೂ ಕೈ ಎತ್ತಿ, ದೇಶದ ಪ್ರಗತಿಗಾಗಿ ಮುಷ್ಟಿ ಕಟ್ಟಿ, ಬೋಲೊ ಭಾರತ ಮಾತಾ ಕಿ ಜೈ’ ಎಂದು ಅಮಿತ್‌ ಶಾ ಘೋಷಣೆ ಕೂಗಿದಾಗ ಸಾವಿರಾರು ಜನ ಧ್ವನಿಗೂಡಿ ಸಿದರು. ವೇದಿಕೆಯ ಮುಂದೆ ಸೇರಿದ್ದ ಸಹಸ್ರಾರು ವಿದ್ಯಾರ್ಥಿಗಳ ನಡುವೆ ಇದ್ದ ಕಾರ್ಯಕರ್ತರು ಆಗಾಗ ಜೈ ಶ್ರೀರಾಮ್‌, ಮೋದಿ, ಮೋದಿ ಎಂದೆಲ್ಲ ಕೂಗಿದರು. 

₹25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಒಳಾಂಗಣ ಕ್ರೀಡಾಂಗಣದ ವಿಶೇಷಗಳನ್ನು ಪ್ರಸ್ತಾಪಿಸಿದ ಅವರು,
ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಂತೆ ಆಗಿದ್ದು, ಮೋದಿ ಅವರ ದೂರದೃಷ್ಟಿ ಯಿಂದ ಎಂದು ಕೊಂಡಾಡಿದರು. ಸ್ಟಾರ್ಟ್‌ ಅಪ್‌ಗಳು, ಪೇಟೆಂಟ್‌ಗೆ ಅರ್ಜಿ ಸಲ್ಲಿಸುವಲ್ಲಿ, ನೋಂದಣಿಯಾಗು ವಲ್ಲಿ ಭಾರತವು ಏರುಗತಿಯಲ್ಲಿ ಸಾಗಿದೆ. ಖೇಲೊ ಇಂಡಿಯಾ, ಫಿಟ್‌ ಇಂಡಿಯಾ, ಮೇಕ್‌ಇನ್ ಇಂಡಿಯಾ ಅಭಿಯಾನಗಳ ಫಲಾನುಭವಿಗಳ ಸಂಖ್ಯೆಗಳನ್ನು ಹೇಳುತ್ತ, ಭಾರತವು ಪ್ರಗತಿ ಪಥದಲ್ಲಿದೆ ಎಂಬುದನ್ನು ಪ್ರತಿಪಾದಿಸಿದರು.

ಕುಂದಗೋಳದ ರೋಡ್‌ ಶೋನಲ್ಲಿ ಕಾರ್ಯಕರ್ತರೆಲ್ಲ ಮನಬಂದಂತೆ ನರ್ತಿಸುತ್ತ ಮುಂದೆ ಸಾಗಿದರು. ರಸ್ತೆಯ ಎರಡೂ ಬದಿಗಳಲ್ಲಿ ನೆರೆದ ಜನರು ಅಮಿತ್‌ ಶಾ ಕಡೆಗೆ ಕೈ ಬೀಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ತೆರೆದ ವಾಹನದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಸಿ.ಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌, ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಶಾಸಕರಾದ ಬಿ.ಎಸ್‌. ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಜೊತೆಗೂಡಿ, ಸುಮಾರು ಒಂದೂವರೆ ಕಿ.ಮೀ ರೋಡ್‌ಶೋನಲ್ಲಿ ಪಾಲ್ಗೊಂಡರು.

ಸಮಾರಂಭದಲ್ಲಿ ಹ್ಯಾಪ್ಪಿ ಬರ್ತ್‌ಡೇ ಹಾಡು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ ತಕ್ಷಣ, ನೆರೆದ ಜನರಿಂದ ಗುಂಪುಗಾನದಲ್ಲಿ ಹ್ಯಾಪ್ಪಿ ಬರ್ತ್‌ಡೇ ಟು ಯು ಹಾಡುಹಾಡಿದರು. ಸಿ.ಎಂ ಬಸವರಾಜ ಬೊಮ್ಮಾಯಿ ಮಾತನಾಡಲು ಆರಂಭಿ ಸುತ್ತಿದ್ದಂತೆಯೇ ಮತ್ತೊಮ್ಮೆ ಈ ಹಾಡು ಸಭೆಯಲ್ಲಿ ಅನುರಣಿಸಿತು. ಪಾರ್ಟಿ.. ಪಾರ್ಟಿ ಎಂದು ಹಲವಾರು ಸಲ ಕೂಗಿದಾಗ, ಬೊಮ್ಮಾಯಿ ಅವರು ಪಾರ್ಟಿ ಕೊಡುವ ಭರವಸೆ ನೀಡಿದರು.

ಬೆಳಿಗ್ಗೆ ಆಪ್ತರ ಸಭೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ ಜೊತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಂದು ಗಂಟೆಗೂ ಹೆಚ್ಚು ಕಾಲ ಗಂಭೀರವಾಗಿ ಚರ್ಚಿಸಿದರು.

ಚುನಾವಣೆ ಪೂರ್ವ ತಯಾರಿ, ತೀವ್ರ ಪೈಪೋಟಿಯಿರುವ ಕ್ಷೇತ್ರಗಳ ಮಾಹಿತಿ ಪಡೆದಿರುವ ಶಾ, ಮನೆ–ಮನೆಗೆ ತೆರಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಸಬೇಕು. ಚುನಾವಣೆ ಸಂದರ್ಭ ಎದುರಾಗುವ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಪರಿಹರಿಸಬೇಕು ಎಂದು ಮುಖಂಡರಿಗೆ ಸೂಚಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು