ಶಿಬಿರಕ್ಕೆ ಬಾರದ ಮದವೇರಿದ ‘ಗೋಪಿ’

ಭಾನುವಾರ, ಏಪ್ರಿಲ್ 21, 2019
26 °C
ದುಬಾರೆ: ಪ್ರವಾಸಿಗರಿಗೆ ನಿರ್ಬಂಧ ಮುಂದುವರಿಕೆ

ಶಿಬಿರಕ್ಕೆ ಬಾರದ ಮದವೇರಿದ ‘ಗೋಪಿ’

Published:
Updated:

ಕುಶಾಲನಗರ: ಸಮೀಪದ ನಂಜರಾಯಪಟ್ಟಣ ಬಳಿಯ ದುಬಾರೆ ಸಾಕಾನೆ ಶಿಬಿರದಿಂದ ಪಾಲಾಯನ ಮಾಡಿದ್ದ ಮದವೇರಿದ ಗೋಪಿ ಹೆಸರಿನ ಆನೆ ಎರಡನೇ ದಿನವೂ ಸಾಕಾನೆ ಶಿಬಿರಕ್ಕೆ ಬಂದಿಲ್ಲ. ಹೀಗಾಗಿ, ಮಂಗಳವಾರವೂ ಆನೆ ಶಿಬಿರದಲ್ಲಿ ಬಿಗುವಿನ ವಾತಾವರಣ ಇತ್ತು. 

ಸಾಕಾನೆ ಗೋಪಿ ‘ಸಂಗಾತಿ’ ಹುಡುಕಿಕೊಂಡು ದುಬಾರೆ ಅರಣ್ಯ ಪ್ರದೇಶಕ್ಕೆ ತೆರಳಿದ್ದು ಈ ಆನೆಯನ್ನು ಮರಳಿ ಶಿಬಿರಕ್ಕೆ ತರಲು ಅರಣ್ಯ ಸಿಬ್ಬಂದಿಗಳು ಹಾಗೂ ಮಾವುತರು ಎರಡು ದಿನಗಳಿಂದ ಹರಸಾಹಸ ಪಡುತ್ತಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಹೆಣ್ಣಾನೆಗಾಗಿ ಸುತ್ತಾಡುತ್ತಿರುವ ‘ಗೋಪಿ’ಯು ಅಲ್ಲಿಯೇ ಬೀಡುಬಿಟ್ಟಿದೆ. ಗೋಪಿಯನ್ನು ಮಾವುತರು ಹದ್ದಿನಕಣ್ಣಿಟ್ಟು ಹುಡುಕಿದರೂ ಸಿಕ್ಕಿಲ್ಲ.

ಗೋಪಿ ಕಾಡಾನೆಗಳೊಂದಿಗೆ ಕಾದಾಟ ಆಡಿ ಅಪಾಯ ಉಂಟಾಗುವ ಸಾಧ್ಯತೆಯಿದ್ದು ಎಚ್ಚರಿಕೆ ವಹಿಸಲಾಗಿದೆ.  ಕಾಡಾನೆಗಳಿಗೂ ಮದವೇರಿ ಪುಂಡಾಟದಲ್ಲಿ ತೊಡಗುವ ಸಾಧ್ಯತೆಯಿದ್ದು, ಅವುಗಳು ಶಿಬಿರದ ಆನೆಗಳತ್ತ ಬಾರದಂತೆ ಕಟ್ಟೆಚ್ಚರ ವಹಿಸಲಾಗಿದೆ. ಮದವೇರಿದ ಸಾಕಾನೆ ಹಾಗೂ ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಸಿಬ್ಬಂದಿ, ಮಾವುತರು, ಕಾವಾಡಿಗರು ಹಗಲಿರುಳು ಶ್ರಮಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. 

ಉಳಿದ ಸಾಕಾನೆಗಳು ಕಾಡಿಗೆ ತೆರಳದಂತೆ ಕಟ್ಟಿ ಹಾಕಲಾಗಿದ್ದು ಆಹಾರ ಪದಾರ್ಥವನ್ನು ಶಿಬಿರದಲ್ಲೇ ನೀಡಲಾಗುತ್ತಿದೆ. ಆದರೆ, ಎಂದಿನಂತೆ ಸಲುಗೆಯಿಂದ ಮಾವುತರು ಹತ್ತಿರ ಸುಳಿಯಲು ಸಾಧ್ಯವಾಗುತ್ತಿಲ್ಲ.

‘ಆನೆಗಳಿಗೆ ಮದವೇರಿದರೆ ತುಂಬ ಅಪಾಯಕಾರಿ. ಅವುಗಳಿಗೆ ಸಿಟ್ಟು ನೆತ್ತಿಗೇರಿದರೆ ಏನು ಮಾಡುತ್ತವೆಯೋ ಹೇಳಲು ಸಾಧ್ಯವಿಲ್ಲ. ಯಾರು ಆನೆಗಳ ಬಳಿಗೆ ಹೋಗದಂತೆ ಸೂಚನೆ ನೀಡಲಾಗಿದೆ’ ಎಂದು ದುಬಾರೆ ಸಾಕಾನೆ ಶಿಬಿರ ಅರಣ್ಯಾಧಿಕಾರಿ ರಂಜನ್ ತಿಳಿಸಿದ್ದಾರೆ.

ಪ್ರವಾಸಿಗರು ಹಾಗೂ ಸಾರ್ವಜನಿಕರು ಶಿಬಿರದೊಳಗೆ ಬಾರದಂತೆ ನಿರ್ಬಂಧಿಸಲಾಗಿದೆ. ದಿನನಿತ್ಯ ಪ್ರವಾಸಿಗರ ಕಲರವದಿಂದ ಕೂಡಿದ್ದ ದುಬಾರೆ ಶಿಬಿರ ಈಗ ಭಣಗುಡುತ್ತಿದೆ. ಮಾಹಿತಿಯಿಲ್ಲದೇ ಹೊರಗಿನಿಂದ ಬರುವ ನೂರಾರು ಪ್ರವಾಸಿಗರು ಕಾವೇರಿ ನದಿಯ ನೀರಿನಲ್ಲಿ ಈಜಾಡಿ ವಾಪಸ್‌ ಆಗುತ್ತಿದ್ದಾರೆ. ಸಾಕಾನೆಗಳನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗದೇ ಮಕ್ಕಳೂ ನಿರಾಶೆಯಿಂದ ಮಂಗಳವಾರ ವಾಪಸ್‌ ಆದರು. 

ಆನೆಗಳಿಗೆ ಮದ ಇಳಿದ ಬಳಿಕ ಎಂದಿನಂತೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !