ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಟ್ಟಿನ ಗಿರಣಿಯ ಬೆಲ್ಟ್‌ಗೆ ಸಿಲುಕಿದ್ದ ತಾಯಿಯನ್ನು ರಕ್ಷಿಸಿದ ಮಗ

ಬಾಲಕನ ಸಮಯ ಪ್ರಜ್ಞೆಗೆ ಒಲಿದ ‘ಹೊಯ್ಸಳ ಶೌರ್ಯ ಪ್ರಶಸ್ತಿ’
Last Updated 14 ನವೆಂಬರ್ 2022, 9:15 IST
ಅಕ್ಷರ ಗಾತ್ರ

ಶನಿವಾರಸಂತೆ: ಹಿಟ್ಟಿನ ಗಿರಣಿಯ ಬೆಲ್ಟ್‌ಗೆ ಸಿಲುಕಿದ ತಾಯಿಯನ್ನು ಸಮಯ ಪ್ರಜ್ಞೆಯಿಂದ ರಕ್ಷಿಸಿ ಬುದ್ಧಿವಂತಿಕೆ ಮೆರೆದ ಸಮೀಪದ ಕೂಡ್ಲೂರು ಗ್ರಾಮದ ಕೆ.ಆರ್.ದೀಕ್ಷಿತ್‌ ಇತರ ಮಕ್ಕಳಿಗೆ ಮಾದರಿ.

ವರ್ಷದ ಹಿಂದೆ ಕೂಡ್ಲೂರು ಗ್ರಾಮದ ಮನೆಯಲ್ಲಿ ಚಾಲನೆಯಲ್ಲಿದ್ದ ಹಿಟ್ಟಿನ ಗಿರಣಿಯ ಬೆಲ್ಟ್‌ಗೆ ತಾಯಿ ಅರ್ಪಿತಾ ಅವರ ತಲೆಕೂದಲು ಸಿಲುಕಿಕೊಂಡು ಆಕೆ ಜೋರಾಗಿ ಕೂಗಿಕೊಂಡರು. ತಾಯಿ ಕೂಗು ಕೇಳಿ ದೂರದಲ್ಲಿ ಆಟವಾಡುತ್ತಿದ್ದ ಪುತ್ರ ದೀಕ್ಷಿತ್ ಓಡಿ ಬಂದು ಗಿರಣಿಯ ವಿದ್ಯುತ್ ಸ್ವಿಚ್ ಆಫ್ ಮಾಡುವ ಮೂಲಕ ತಾಯಿ ಪ್ರಾಣವನ್ನು ಉಳಿಸಿದ್ದ.

ಪ್ರಸ್ತುತ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ಓದುತ್ತಿರುವ ದೀಕ್ಷಿತ್ ಓದಿನಲ್ಲೂ ಮುಂದು. ರವಿಕುಮಾರ್– ಅರ್ಪಿತಾ ದಂಪತಿಗೆ ಗಿರಣಿಯ ಬಗ್ಗೆ, ವಿದ್ಯುತ್ ಬಗ್ಗೆ ಏನೂ ತಿಳಿಯದ ಮಗನ ಸಾಹಸ ಹಾಗೂ ಸಮಯ ಪ್ರಜ್ಞೆ ಬಗ್ಗೆ ಬಹಳ ಹೆಮ್ಮೆ. ಬಾಲಕನ ಸಮಯಪ್ರಜ್ಞೆಯನ್ನು ಪರಿಗಣಿಸಿದ ಸರ್ಕಾರ ಆತನಿಗೆ 2021–22ನೇ ಸಾಲಿನಲ್ಲಿ ‘ಹೊಯ್ಸಳ ಶೌರ್ಯ ಪ್ರಶಸ್ತಿ’ ನೀಡಿ ಗೌರವಿಸಿತು.

‘ಮಗನಿಗೆ ಪ್ರಶಸ್ತಿ ಸಿಕ್ಕಿದ ಸಂತೋಷ. ಅದಕ್ಕಿಂತಲೂ ತಾಯಿಯ ಪ್ರಾಣ ಉಳಿಸಿದನೆಂಬ ಹೆಮ್ಮೆ ನಮಗೆ ಜೀವನದುದ್ದಕ್ಕೂ ಇರುತ್ತದೆ. ಈಗ ಗ್ರಾಮಸ್ಥರು, ಶಾಲಾ ಮಕ್ಕಳು ಮಗನ ಹೆಸರು ಹೇಳಿ ನಮ್ಮನ್ನು ಗುರುತಿಸುತ್ತಾರೆ’ ಎಂದು ತಂದೆ ರವಿಕುಮಾರ್ ಸಂತಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ, ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗ್ರಾಮೀಣ ಪ್ರದೇಶದ ದೀಕ್ಷಿತ್‌ನ ಶೌರ್ಯ ಗುರುತಿಸಿ ಪ್ರಶಸ್ತಿ ನೀಡಿದೆ. ಈಚೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆದ ಚೆಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಇದಲ್ಲದೆ ಮಣ್ಣಿನ ಕಲಾಕೃತಿಗಳನ್ನೂ ತಯಾರಿಸುವುದರಲ್ಲಿ ಸಿದ್ಧ ಹಸ್ತನಾಗಿದ್ದಾನೆ.

ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ದಂಪತಿಗೆ ಮಗ ಮತ್ತು ಮಗಳು ಕಶ್ವಿತಾಳ ಮುಂದಿನ ವಿದ್ಯಾಭ್ಯಾಸ ಹಾಗೂ ಉತ್ತಮ ಭವಿಷ್ಯದ ಬಗ್ಗೆ ಚಿಂತೆ ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT