ಗುರುವಾರ , ಜೂನ್ 17, 2021
22 °C
ಕೋವಿಡ್–19 ಲಾಕ್‌ಡೌನ್‌ ಸ್ಥಿತ್ಯಂತರ: ನಡೆಯದ ಬೇಕರಿ ವ್ಯಾಪಾರ – ಕೃಷಿಯೆಡೆಗೆ ಮುಖಮಾಡಿ ಖುಷಿಯಾದ ಜಯೇಂದ್ರ

ಕೀರೆಹೊಳೆ ದಡದಲ್ಲಿ ನಳನಳಿಸಿದ ಮಿಶ್ರ ಹಣ್ಣಿನ ತೋಟ

ಜೆ.ಸೋಮಣ್ಣ Updated:

ಅಕ್ಷರ ಗಾತ್ರ : | |

Prajavani

ಗೋಣಿಕೊಪ್ಪಲು: ಪಟ್ಟಣದ ಕೀರೆಹೊಳೆ ದಡದಲ್ಲಿ ಮಿಶ್ರ ಹಣ್ಣಿನ ತೋಟ ತಲೆ ಎತ್ತಿದೆ. ಕೋವಿಡ್ ಲಾಕ್‌ಡೌನ್‌ನಿಂದ ಸಿಕ್ಕಿದ ಸಮಯವನ್ನು ‘ಪ್ಯಾರಗಾನ್’ ಬೇಕರಿಯ ಮಾಲೀಕ ಜಯೇಂದ್ರ ಕೃಷಿಗೆ ಬಳಸಿಕೊಂಡಿದ್ದಾರೆ.

ಕಾಂಕ್ರೀಟ್ ಕಾಡುಗಳ ನಡುವಿನ ಪಟ್ಟಣದ ಅಂಚಿನಲ್ಲಿಯೇ ಇರುವ 6 ಎಕರೆ ಜಾಗದಲ್ಲಿ 27 ಬಗೆಯ ಹಣ್ಣು ಮತ್ತು ತೋಟಗಾರಿಕಾ ಸಸ್ಯಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಹರಿಶ್ಚಂದ್ರಪುರದ ಕೀರೆಹೊಳೆ ದಡದಲ್ಲಿರುವ ತಮ್ಮ ಗದ್ದೆ ಜಾಗವನ್ನು ವಿವಿಧ ಹಣ್ಣುಗಳ ತೋಟವಾಗಿ ಜಯೇಂದ್ರ ಪರಿವರ್ತಿಸಿದ್ದಾರೆ.

ಇಲ್ಲಿ 350 ತೆಂಗು, 200 ಅಡಿಕೆ, 350 ನಿಂಬೆ, 150 ಬಟರ್ ಫ್ರೂಟ್, 100 ಮೋಸಂಬಿ, 1650 ನೇಂದ್ರ ಬಾಳೆ, 200 ಕಿತ್ತಳೆ, 50 ಸೀಬೆ, 50 ಹಲಸು, 300 ಕಿತ್ತಳೆ, 20 ನೇರಳೆ, 30 ಮಾವು, 100 ಫ್ಯಾಷನ್ ಫ್ರೂಟ್, 20 ಪಪ್ಪಾಯಿ, 20 ನೆಲ್ಲಿ, 25 ನುಗ್ಗೆ, ಕೈ ಹುಳಿ, ಮಾದಳ ಮೊದಲಾದ ಗಿಡಗಳು ಸಮೃದ್ಧವಾಗಿ ಬೆಳೆದಿವೆ. ಮೂರು ವರ್ಷಗಳ ಹಿಂದೆ ನೆಟ್ಟಿದ್ದ ಈ ಗಿಡಗಳು ಸಮೃದ್ಧವಾಗಿ ಬೆಳೆದು ಫಲ ಕೊಡುತ್ತಿವೆ.

ಕೇರಳದ ತ್ರಿಶೂರ್‌ನಿಂದ ತಂದ ಗಿಡ್ಡ ತಳಿಯ ತೆಂಗಿನ ಸಸಿಗಳನ್ನು 17 ಅಡಿಗೆ ಒಂದರಂತೆ ನೆಟ್ಟಿದ್ದಾರೆ. ತೋಟದ ಸುತ್ತಲಿನ ರಸ್ತೆ ಬದಿಯಲ್ಲಿ ಸಾಲಾಗಿ ಕಿತ್ತಳೆ, ಮಾವು, ಹಲಸು, ನೇರಳೆ, ಸೀಬೆ, ಬಟರ್ ಫ್ರೂಟ್, ಮೋಸಂಬಿ ಮೊದಲಾದ ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ಬಾಳೆಯ ನಡುವೆ ಕಾಫಿ, ಅಡಿಕೆ, ನಿಂಬೆ, ಮಾವುಗಳನ್ನು ಬೆಳೆಸಿದ್ದಾರೆ.

ಗಿಡಗಳ ಸುತ್ತ ಪಾತಿ ಮಾಡಿ ಕಾಲಕಾಲಕ್ಕೆ ಕೊಟ್ಟಿಗೆ ಗೊಬ್ಬರ, ರಸಗೊಬ್ಬರ ಹಾಕಿ ನೀರುಣಿಸುತ್ತಿದ್ದಾರೆ. ಆಗಾಗ್ಗೆ ರೋಗನಿರೋಧಕ ಔಷಧಿ ಸಿಂಪಡಿಸುತ್ತಿದ್ದಾರೆ. ಯಾವುದಾದರೂ ಒಂದು ಗಿಡ ಸತ್ತು ಹೋದರೆ ಅದರ ಜಾಗಕ್ಕೆ ಕೂಡಲೇ ಮತ್ತೊಂದು ಸಸಿ ನೆಟ್ಟು ಆರೈಕೆ ಮಾಡಿದ್ದಾರೆ.

ಕೋವಿಡ್‌ನಿಂದಾಗಿ ಕೃಷಿಯೆಡೆಗೆ: ಯಾವುದೇ ಪ್ರಯೋಜನಕ್ಕೆ ಬಾರದೆ ಹಳ್ಳಕೊಳ್ಳಗಳಿಂದ ಕೂಡಿದ್ದ ಈ ಜಾಗವನ್ನು ಜಯೇಂದ್ರ ಕೃಷಿ ಮಾಡಲು ಹೊರಟದ್ದು 2018ರಲ್ಲಿ. ಇವರು ಮೂಲತಃ ವ್ಯಾಪಾರಸ್ಥರು. ಬಸ್ ನಿಲ್ದಾಣದ ಬಳಿ ಬೇಕರಿ ವ್ಯಾಪಾರ ನಡೆಸುತ್ತಿದ್ದರು. 2020 ಮಾರ್ಚ್‌ನಲ್ಲಿ ಇಡೀ ದೇಶ ಕೋವಿಡ್‌ನಿಂದ ಲಾಕ್‌ಡೌನ್ ಒಳಗಾದಾಗ ಮುಚ್ಚಿದ ಬೇಕರಿ ಮತ್ತೆ ತೆರೆಯಲೇ ಇಲ್ಲ. ಈ ವೇಳೆಯಲ್ಲಿ ಅವರು ಕೈಕಟ್ಟಿ ಕೂರದೆ ಕೃಷಿಯೆಡೆಗೆ ಗಮನಹರಿಸಿದರು.

ಕೀರೆಹೊಳೆ ಪ್ರವಾಹದಿಂದ ಫಲವತ್ತತೆ ಕಳೆದುಕೊಂಡಿದ್ದ ಮಣ್ಣನ್ನು ಬದಲಾಯಿಸಿದರು. ನೂರಾರು ಲೋಡು ಹೊಸಮಣ್ಣು ತುಂಬಿಸಿದರು. ಅನಗತ್ಯವಾಗಿ ನೀರು ನಿಲ್ಲದಂತೆ ಅಲ್ಲಲ್ಲೆ ಕಾಲುವೆ ನಿರ್ಮಿಸಿದರು. ಬೇಸಿಗೆಯಲ್ಲಿ ನೀರು ಕೊಡಲು ಎರಡು ಬೋರ್‌ವೆಲ್ ತೆಗೆಸಿದರು. ಝಟ್ ಮೂಲಕ ಗಿಡಗಳಿಗೆ ಅಗತ್ಯ ನೀರನ್ನು ಪೂರೈಸಿದರು.

ಇದರ ಫಲದಿಂದ ಸಮೃದ್ಧವಾಗಿ ಬೆಳೆದಿರುವ ಕೇವಲ ಮೂರು ವರ್ಷದ ಹಲಸಿನ ಸಸಿಗಳು ಬುಡದಲ್ಲಿಯೇ ಫಸಲು ಬಿಟ್ಟಿವೆ. ಸೀಬೆಹಣ್ಣು ಎಲೆಯೇ ಕಾಣದಂತೆ ತುಂಬಿಕೊಂಡಿವೆ. ಬಟರ್ ಫ್ರೂಟ್ ಗಿಡದಲ್ಲಿ ನೇತು ಹಾಕಿವೆ. ಉತ್ಕೃಷ್ಟವಾಗಿರುವ ತೆಂಗು ಮತ್ತು ಅಡಿಕೆ ಸಸಿಗಳು ನೆಲದಲ್ಲಿಯೇ ಹಾಸುಕೊಂಡಿವೆ. ನಿತ್ಯವೂ ತೋಟದಲ್ಲಿ 10 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಭತ್ತದ ಕಣದಲ್ಲಿ ಹಣ್ಣಿನ ತೋಟ: ಭತ್ತದ ಕಣವನ್ನೂ ಹಣ್ಣಿನ ಉದ್ಯಾನವನ್ನಾಗಿ ಮಾರ್ಪಾಟು ಮಾಡಿದ್ದಾರೆ. ಸಂಜೆ ವೇಳೆ ತೋಟದೊಳಗೆ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ. ತಮ್ಮ ಮನೆಯ ಮೇಲು ಚಾವಣಿಯಲ್ಲಿ 10 ಜೇನು ಪೆಟ್ಟಿಗೆ ಇಟ್ಟು ಜೇನು ಸಂಗ್ರಹಿಸುತ್ತಿದ್ದಾರೆ. ಮತ್ತೊಂದು ಕಡೆ 8 ಎಕರೆ ಕಾಫಿ ತೋಟವನ್ನೂ ಉತ್ತಮಗೊಳಿಸಿದ್ದಾರೆ.

ಕೃಷಿಕರಿಗೆ ಮಾದರಿ:  ‘ಪಟ್ಟಣದ ವ್ಯಾಪ್ತಿಯಲ್ಲಿರುವ ಕಾಫಿ ತೋಟ ಮತ್ತು ಗದ್ದೆಗಳನ್ನು ನಿವೇಶನವಾಗಿ ಪರಿವರ್ತಿಸಿ ಕಾಂಕ್ರೀಟ್ ಕಾಡು ಬೆಳೆಸಿರುವವರ ಮಧ್ಯೆ ಜಯೇಂದ್ರ ಅವರು ಒಬ್ಬ ಮಾದರಿ ಕೃಷಿಕರಾಗಿದ್ದಾರೆ. ಕೃಷಿಯಿಂದ ನಷ್ಟವಾಗುತ್ತದೆ ಎಂದು ಹೇಳುತ್ತ ಕೃಷಿ ಕಡೆಗೆ ಬೆನ್ನು ತಿರುಗಿಸಿದವರಿಗೆ ಇವರೊಬ್ಬರು ಕೃಷಿಕರಿಗೆ ಮಾದರಿ ವ್ಯಕ್ತಿಯಾಗಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ನಾರಾಯಣಸ್ವಾಮಿ ನಾಯ್ಡು ಹರ್ಷದಿಂದ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು