ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳಮೀಸಲಾತಿಗಾಗಿ ಸಮಿತಿ: ನಟ ಚೇತನ್ ಒತ್ತಾಯ

ಕೊಡಗಿನ ಕಾಫಿ ತೋಟಗಳ ಲೈನ್‌ಮನೆಯಲ್ಲಿರುವ ಕಾರ್ಮಿಕರ ನೆರವಿಗೆ ಧಾವಿಸಲು ಸರ್ಕಾರಕ್ಕೆ ಮನವಿ
Published 4 ಜೂನ್ 2024, 2:25 IST
Last Updated 4 ಜೂನ್ 2024, 2:25 IST
ಅಕ್ಷರ ಗಾತ್ರ

ಮಡಿಕೇರಿ: ಪರಿಶಿಷ್ಟ ಪಂಗಡಗಳಿಗೆ ಸರ್ಕಾರ ಒಳ ಮೀಸಲಾತಿ ನೀಡಲು ಸಮಿತಿಯೊಂದನ್ನು ತುರ್ತಾಗಿ ರಚಿಸಬೇಕು ಎಂದು ನಟ ಚೇತನ್ ಒತ್ತಾಯಿಸಿದರು.

ಕಾಂಗ್ರೆಸ್‌ ಪಕ್ಷವು ಬಿಜೆಪಿಯನ್ನು ಮೀಸಲಾತಿ ವಿರೋಧಿ ಎಂದು ಟೀಕಿಸುತ್ತಲೇ ಅಧಿಕಾರಕ್ಕೆ ಬಂದಿತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದು 1 ವರ್ಷ ಕಳೆದರೂ, ಒಳಮೀಸಲಾತಿ ವಿಚಾರದಲ್ಲಿ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

‘ಮೀಸಲಾತಿಯ ಪ್ರಮಾಣ ಶೇ 50ನ್ನು ದಾಟಬಾರದು ಎಂದೇನಿಲ್ಲ. ಈಗಾಗಲೇ ತಮಿಳುನಾಡಿನಲ್ಲಿ ಈ ಗಡಿಯನ್ನು ದಾಟಲಾಗಿದೆ. ಅಲ್ಲಿ ಆಗಿದ್ದು, ಇಲ್ಲಿ ನಮ್ಮಲ್ಲೇಕೆ ಸಾಧ್ಯವಾಗದು’ ಎಂದೂ ಪ್ರಶ್ನಿಸಿದರು.

ಅಸಮಾನತೆಯನ್ನು ಹೋಗಲಾಡಿಸಲು ಆಯಾಯ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು. ಅಹಿಂದ ಎಂಬ ಹೆಸರನ್ನೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮೊದಲು ಸಮರ್ಪಕವಾದ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದರೆ ಯಾವುದೇ ತಪ್ಪಿಲ್ಲ. ಆದರೆ, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಖಾತೆ ಸಚಿವ ನಾಗೇಂದ್ರ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲೆಯ ಕಾಫಿತೋಟಗಳಲ್ಲಿರುವ ಲೈನ್‌ಮನೆಯಲ್ಲಿ ವಾಸಿಸುತ್ತಿರುವ ಕಾರ್ಮಿಕರ ಕಲ್ಯಾಣಕ್ಕಾಗಿ ಸಮಿತಿಯೊಂದನ್ನು ಸರ್ಕಾರ ರಚಿಸಬೇಕು. ಅವರು ಬಡ್ಡಿ, ಚಕ್ರಬಡ್ಡಿಗಳನ್ನು ಪಾವತಿಸಿ, ತೀರಾ ಸಂಕಷ್ಟಮಯ ಬದುಕಿನಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಇವರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕು ಎಂದರು.

ಆದಿವಾಸಿಗಳಿಗೆ ಪ್ರತ್ಯೇಕ ಧರ್ಮದ ಅಗತ್ಯ ಇದೆ. ಹಿಂದೂ ಧರ್ಮಕ್ಕೂ ಮುನ್ನವೇ ಆದಿವಾಸಿಗಳು ಈ ಭೂಮಿಯಲ್ಲಿ ಬದುಕಿದ್ದರು. ಅವರ ಸಾಂಸ್ಕೃತಿಕತೆಯೇ ಬೇರೆ ಇದೆ ಎಂದೂ ಪ್ರತಿಪಾದಿಸಿದರು.

ಆದಿವಾಸಿ ಮುಖಂಡರಾದ ಅನಿತಾ ಮಾತನಾಡಿ, ‘ಮತದಾನ ಬಂದಾಗ ಮಾತ್ರ ರಾಜಕೀಯ ಪಕ್ಷಗಳಿಗೆ ಆದಿವಾಸಿಗಳ ನೆನಪಾಗುತ್ತದೆ. ನಂತರ ಬೆಟ್ಟಕುರುಬ, ಜೇನುಕುರುಬ, ಫಣಿಯ ಸೇರಿದಂತೆ ಇತರೆ ಸಮುದಾಯಗಳಿವೆ ಎಂಬುದನ್ನೇ ಅವರು ಮರೆತುಬಿಡುತ್ತಾರೆ. ಎರಡೂ ಸರ್ಕಾರಗಳೂ ನಮ್ಮ ಮನವಿಗಳಿಗೆ ಸ್ಪಂದಿಸುತ್ತಿಲ್ಲ. ಭೂಮಿ ಕೊಡುತ್ತೇವೆ ಎಂದು ಹೇಳಿದ್ದ ಸರ್ಕಾರ ಇದುವರೆಗೂ ಭೂಮಿ ನೀಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದಿವಾಸಿ ಮುಖಂಡರಾದ ಜಯಾ ಮಾತನಾಡಿ, ‘ಬಡ್ಡಿಗೆ ಸಾಲ ತೆಗೆದು ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದೇವೆ. ನಮಗೆ ಸರ್ಕಾರ ಮೊದಲು ಭೂಮಿ ನೀಡಬೇಕು’ ಎಂದು ಆಗ್ರಹಿಸಿದರು.

ಆದಿವಾಸಿ ಮುಖಂಡ ಅರ್ಜುನ್ ಭಾಗವಹಿಸಿದ್ದರು.

‘ಸಮೀಕ್ಷೆಗಳಂತೆ ಬಿಜೆಪಿಗೆ ಬಹುಮತ’

‘ಚುನಾವಣೋತ್ತರ ಎಲ್ಲ ಸಮೀಕ್ಷೆಗಳೂ ಬಿಜೆಪಿಗೆ ಬಹುಮತ ಬರುತ್ತವೆ ಎಂದು ಹೇಳಿವೆ ಎಂದರೆ ಅದರಲ್ಲಿ ನಿಜ ಇದ್ದಿರಲೇಬೇಕು. ಬಿಜೆಪಿ ಬಹುಮತ ಪಡೆಯುವ ಸಾಧ್ಯತೆ ಇದೆ’ ಎಂದು ನಟ ಚೇತನ್ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬಹುದು. ಆದರೆ ಅವರ ವರ್ಚಸ್ಸು ಕಡಿಮೆಯಾಗಿದೆ. ಕಾಂಗ್ರೆಸ್ ಹೇಳುವಂತೆ ಬಿಜೆಪಿ ಸಂವಿಧಾನದ ಮೂಲಸ್ವರೂಪವನ್ನೇ ಬದಲಾಯಿಸುತ್ತದೆ ಎಂದು ನನಗನ್ನಿಸುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT