ಮಂಗಳವಾರ, ಜೂನ್ 28, 2022
21 °C
ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಕೊಡುಗೆ

ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಣಿಕೊಪ್ಪಲು: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಕೊಡುಗೆಯಾಗಿ ನೀಡಿದ ಆಂಬುಲೆನ್ಸ್ ಹಾಗೂ 5 ಆಕ್ಸಿಜನ್ ಕಾನ್ಸೆಂಟ್ರೇಟರ್‌ಗಳನ್ನು ತಾಲ್ಲೂಕು ವೈದ್ಯಾಧಿಕಾರಿ ಡಾ.ಯತಿರಾಜ್ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಭಾನುವಾರ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಅವರು, ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಪಕ್ಷದ ವತಿಯಿಂದ ರಾಜ್ಯದ 224 ವಿಧಾನಸಭಾ ಕ್ಷೇತ್ರಕ್ಕೆ ಆಂಬುಲೆನ್ಸ್ ಕೊಡುಗೆ ನೀಡಲಾಗಿದೆ. ರಾಜ್ಯ ಯುವ ಕಾಂಗ್ರೆಸ್ ಘಟಕವೂ ಬಹಳಷ್ಟು ಸಹಾಯ ಮಾಡುತ್ತಿದೆ. ಕಷ್ಟದಲ್ಲಿರುವ ರೈತರಿಂದ ಹಣ್ಣು, ತರಕಾರಿಗಳನ್ನು ಖರೀದಿಸಿ ಬಡವರಿಗೆ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಆರೋಗ್ಯ ಹಸ್ತ ಕಾರ್ಯಕ್ರಮ ಪಕ್ಷದ ಬಹು ದೊಡ್ಡ ಯೋಜನೆಯಾಗಿದೆ. ರಾಜ್ಯದ ಜನತೆಯನ್ನು ಕಾಡುತ್ತಿರುವ ಕೋವಿಡ್ ನಿಯಂತ್ರಣಕ್ಕೆ ಪಕ್ಷ ಭೇದ ಮರೆತು ಸರ್ಕಾರಕ್ಕೆ ಸಹಾಯ ಮಾಡಲಾಗುತ್ತಿದೆ. ಆದರೆ ಸರ್ಕಾರ ಇದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ವಿಫಲವಾಗಿದೆ. ಚಾಮರಾಜನಗರದಲ್ಲಿ ಆಕ್ಸಿಜನ್‌ ಕೊರತೆಯಿಂದ ಆದ ಸಾವಿಗೆ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯವೇ ಕಾರಣ’ ಎಂದು ದೂರಿದರು.

‘ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಇದಕ್ಕೆ ನಿದರ್ಶನ ಮೈಸೂರಿನ ಇಬ್ಬರು ಐಎಎಸ್ ಅಧಿಕಾರಿಗಳ ಬೀದಿ ಜಗಳ’ ಎಂದು ವ್ಯಂಗ್ಯವಾಡಿದರು.

ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣ ಅಚ್ಚಯ್ಯ ಮಾತನಾಡಿ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇವತ್ತು ಕೋವಿಡ್ ಪ್ರಕರಣಗಳು ಇಳಿಮುಖ ಆಗಿದ್ದರೆ ಅದಕ್ಕೆ ಕಾರಣ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರೇ ಹೊರತು ಸರ್ಕಾರವಲ್ಲ’ ಎಂದು ಹೇಳಿದರು.

ಎ.ಎಸ್.ಪೊನ್ನಣ್ಣ ಮಾತನಾಡಿ, ‘ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ಕಾಲದಲ್ಲಿ ಬಿಜೆಪಿವರು ಅಧಿಕಾರ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ಸಿ.ಡಿ ಪ್ರಕರಣ, ಭ್ರಷ್ಟಾಚಾರದಲ್ಲಿ ಸಿಲುಕಿರುವ ಸಚಿವರು ಮತ್ತು ಶಾಸಕರೇ ಪರಸ್ಪರ ಆರೋಪದಲ್ಲಿ ತೊಡಗಿದ್ದಾರೆ. ಇವರಿಗೆ ಅಧಿಕಾರ ಮುಖ್ಯವೇ ಹೊರತು ಜನರ ಪ್ರಾಣವಲ್ಲ. ಸರ್ಕಾರದ ವೈಫಲ್ಯವನ್ನು ಮನಗಂಡ ಕಾಂಗ್ರೆಸ್‌ ಪಕ್ಷ ನಾಡಿನ ಜನರ ರಕ್ಷಣೆಗೆ ಮುಂದಾಗಿದೆ’ ಎಂದು
ಹೇಳಿದರು.

ಕೆಪಿಸಿಸಿ ವೀಕ್ಷಕ ಟಿ.ಎಂ.ಸಾಹಿದ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ತೀತಿರ ಧರ್ಮಜ, ಮುಖಂಡರಾದ ಸಿ.ಎಸ್.ಅರುಣ್ ಮಾಚಯ್ಯ, ಕೇಚಮಾಡ ಸರಿತಾ ಪೂಣಚ್ಚ, ನೆರವಂಡ ಉಮೇಶ್, ಬಿ.ಎನ್.ಪೃಥ್ಯು, ಟಾಟು ಮೊಣ್ಣಪ್ಪ, ಕುಲ್ಲಚಂಡ ಗಣಪತಿ, ಪಿ.ಆರ್.ಪಂಕಜಾ, ಮೀದಿರಿರ ನವೀನ್, ಅಜಿತ್ ಅಯ್ಯಪ್ಪ, ನರೇನ್ ಕಾರ್ಯಪ್ಪ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು