ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಜಿಲ್ಲೆ ಸಂಪರ್ಕ ಕಲ್ಪಿಸುವ ಹೇಮಾವತಿ ನದಿ ಸೇತುವೆಯ ಮೂರೂ ರಸ್ತೆಗಳು ಬಂದ್

Last Updated 8 ಏಪ್ರಿಲ್ 2020, 12:17 IST
ಅಕ್ಷರ ಗಾತ್ರ

ಶನಿವಾರಸಂತೆ: ಕೊಡಗು ಜಿಲ್ಲೆಯಿಂದ ಹಾಸನ ಜಿಲ್ಲೆಗೆ ಸಂಪರ್ಕ ಕಲ್ಪಿಸುವ 3 ಭಾಗಗಳಲ್ಲಿ ಹಾಸನ ಜಿಲ್ಲೆಯ ಗ್ರಾಮಸ್ಥರು ಸೇತುವೆ ರಸ್ತೆಗಳಿಗೆ ಅಡ್ಡಲಾಗಿ ಬೃಹತ್ ಗಾತ್ರದ ಮರದ ದಿಮ್ಮಿಗಳನ್ನಿಟ್ಟು ರಸ್ತೆ ಸಂಪರ್ಕ ಬಂದ್ ಮಾಡಿದ್ದಾರೆ. ಇದರಿಂದ ನಿತ್ಯದ ಅವಶ್ಯಕತೆಗೆ ಹಾಸನಕ್ಕೆ ತೆರಳುತ್ತಿದ್ದವರಿಗೆ ತೊಂದರೆಯಾಗುತ್ತಿದ್ದು ರಸ್ತೆಯನ್ನು ತೆರವುಗೊಳಿಸಬೇಕು ಎಂದು ಕೊಡ್ಲಿಪೇಟೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಕೊಡ್ಲಿಪೇಟೆಯಿಂದ ಕೆಲಕೊಡ್ಲಿ ಗ್ರಾಮದ ಮೂಲಕ ಹಾಸನದ ಕಾಗನೂರಿಗೆ ಸಂಪರ್ಕ ಕಲ್ಪಿಸಲು ಎರಡು ವರ್ಷದ ಹಿಂದೆ ಹೇಮಾವತಿ ನದಿಗೆ ನೂತನ ಸೇತುವೆ ನಿರ್ಮಿಸಲಾಗಿತ್ತು. ಇದೀಗ ಹಾಸನ ಜಿಲ್ಲೆಯ ಗ್ರಾಮಸ್ಥರು ಸೇತುವೆ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರದ ದಿಮ್ಮಿಗಳನ್ನಿಟ್ಟು ಸಂಚಾರ ನಿರ್ಬಂಧಿಸಿದ್ದಾರೆ.

ಅದೇ ರೀತಿ ಕೊಡ್ಲಿಪೇಟೆಯಿಂದ ಜನಾರ್ಧನಹಳ್ಳಿ, ನೀರುಗುಂದ ಮೂಲಕ ಹಾಸನದ ಬರ್ತೂರಿಗೆ ಸಂಪರ್ಕ ಕಲ್ಪಿಸಲು ಹೇಮಾವತಿ ನದಿಗೆ ಸೇತುವೆ ನಿರ್ಮಿಸಲಾಗಿದೆ. ಗ್ರಾಮಸ್ಥರು ಈ ರಸ್ತೆಗೂ ಅಡ್ಡಲಾಗಿ ಮರದ ದಿಮ್ಮಿ ಹಾಗೂ ಚಪ್ಪಡಿಕಲ್ಲನ್ನು ಇಟ್ಟು ಸಂಪರ್ಕ ಬಂದ್ ಮಾಡಿದ್ದಾರೆ.

ಕೊಡ್ಲಿಪೇಟೆಯಿಂದ ಕ್ಯಾತೆ ಗ್ರಾಮದ ಮೂಲಕ ಹಾಸನ ಜಿಲ್ಲೆಯ ಯಸಳೂರು, ಚಂಗಡಹಳ್ಳಿ, ಬಿಸ್ಲೆ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಕ್ಯಾತೆ ರಸ್ತೆಗೂ ಮಣ್ಣು ಸುರಿದು ಬಂದ್ ಮಾಡಿದ್ದಾರೆ ಎಂದು ಕೊಡ್ಲಿಪೇಟೆ ಗ್ರಾಮಸ್ಥರು ದೂರಿದ್ದಾರೆ.

ಕೊಡ್ಲಿಪೇಟೆ ಭಾಗದ ಬಹುತೇಕ ಕೃಷಿಕರ ತೋಟ– ಗದ್ದೆಗಳು ಹಾಸನ ಜಿಲ್ಲೆಯ ಕೆಲ ಭಾಗದಲ್ಲಿದ್ದು ಅವುಗಳನ್ನು ತಲುಪಲು ಈ ರಸ್ತೆಗಳನ್ನು ಅವಲಂಬಿಸಿದ್ದರು. ಹಾಸನದಿಂದ ದಿನನಿತ್ಯದ ತರಕಾರಿ ಹಣ್ಣು ಇನ್ನಿತರ ವಸ್ತುಗಳನ್ನು ಸಾಗಣೆಗೂ ಈ ರಸ್ತೆಗಳೇ ಆಧಾರವಾಗಿವೆ. ಅಲ್ಲದೇ ಈ ಭಾಗದ ಜನರು ಆರೋಗ್ಯ ಸಮಸ್ಯೆ ಉಂಟಾದಾಗ ತುರ್ತು ಸೇವೆಗಾಗಿ ರೋಗಿಯನ್ನು ಇದೇ ರಸ್ತೆಯ ಮೂಲಕವೇ ಹಾಸನದ ವಿವಿಧ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಇದೀಗ ಮೂರೂ ರಸ್ತೆಗಳು ಬಂದ್ ಆಗಿದ್ದು ಜನರು ಸಂಚಾರಕ್ಕೆ ಪರದಾಡುವಂದಾಗಿದೆ.

ಈಗ ಹಾಸನ ತಲುಪಬೇಕೆಂದರೆ 25-30 ಕಿ.ಮೀ. ದೂರ ಸುತ್ತಿ ಬಳಸಿ ಹೋಗಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ಯಾವ ಗ್ರಾಮಸ್ಥರು ರಸ್ತೆಗಳನ್ನು ಬಂದ್‌ ಮಾಡಿದ್ದಾರೋ ಅವರಿಗೆ ತಿಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಕೊಡ್ಲಪೇಟೆ ಗ್ರಾಮದ ಜನರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT