ಶನಿವಾರ, ಜನವರಿ 25, 2020
19 °C

ಮಗು ಸಾವು: ನರ್ಸ್, ವೈದ್ಯರ ನಿರ್ಲಕ್ಷ್ಯ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ನರ್ಸ್ ಹಾಗೂ ವೈದ್ಯರ ನಿರ್ಲಕ್ಷ್ಯದಿಂದ ಎರಡೂವರೆ ತಿಂಗಳ ಹಸುಗೂಸು ಮೃತಪಟ್ಟಿದೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.

ಮುತ್ತಾರ್ಮುಡಿ ನಿವಾಸಿ ಅಶೋಕ್ ಮತ್ತು ತೇಜಸ್ವಿನಿ ದಂಪತಿ ಪುತ್ರ ಮನ್ವಿತ್ ಮೃತ ಕಂದಮ್ಮ.

ಹೆರಿಗೆಯಾದ ಬಳಿಕ ತೇಜಸ್ವಿನಿ ಭಾಗಮಂಡಲದಲ್ಲಿರುವ ತನ್ನ ತವರು ಮನೆಯಲ್ಲಿದ್ದರು ಎನ್ನಲಾಗಿದೆ. ತಿಂಗಳ ತಪಾಸಣೆಗೆಂದು ಭಾಗಮಂಡಲದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಮಗುವನ್ನು ಪರೀಕ್ಷಿಸಿದ ವೈದ್ಯರು ಯಾವುದೇ ತೊಂದರೆಯಿಲ್ಲ, ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದಿದ್ದರು. ಬಳಿಕ ಆಸ್ಪತ್ರೆಯ ನರ್ಸ್‌ವೊಬ್ಬರು ಮಗುವಿಗೆ ಲಸಿಕೆ ಹಾಕಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಮಗುವಿನ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಮಗುವನ್ನು ಕೂಡಲೇ ಮತ್ತೆ ಆಸ್ಪತ್ರೆಗೆ ಕರೆತರಲಾಯಿತು. ತಪಾಸಣೆ ನಡೆಸಿದ ವೈದ್ಯರು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವಂತೆ ಸೂಚನೆ ನೀಡಿದ್ದಾರೆ. ಕೂಡಲೇ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ವೈದ್ಯರು ಮಗು ಮೃತಪಟ್ಟು 1 ಗಂಟೆಯಾಗಿರುವುದಾಗಿ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪೋಷಕರು ಹಾಗೂ ಕುಟುಂಬಸ್ಥರು ನರ್ಸ್ ಹಾಗೂ ವೈದ್ಯರ ನಿರ್ಲಕ್ಷ್ಯವೇ ಮಗು ಸಾವಿಗೆ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದರು.

ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು