ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಸಮಾಜ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಖಂಡಿತ: ಅನಂತಕುಮಾರ್ ಹೆಗಡೆ

Last Updated 27 ಜನವರಿ 2019, 13:21 IST
ಅಕ್ಷರ ಗಾತ್ರ

ಸುಂಟಿಕೊಪ್ಪ (ಕೊಡಗು): ಹಿಂದೂಗಳು ಜಾತಿ–ಜಾತಿಗಳ ನಡುವೆ ಸ್ವಾರ್ಥವನ್ನು ಬಿಟ್ಟು ಹೊರಬರದಿದ್ದರೆ ಹಿಂದೂ ಧರ್ಮಕ್ಕೆ ಅಪಾಯ ಖಂಡಿತ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಅಭಿಪ್ರಾಯಪಟ್ಟರು.

ಹಿಂದೂ ಜಾಗರಣಾ ವೇದಿಕೆ ಆಶ್ರಯದಲ್ಲಿ ಸಮೀಪದ ಮಾದಾಪುರ ಕಲ್ಲುಕೋರೆ ಚೌಂಡಿಯಮ್ಮ ಹಾಗೂ ಗುಳಿಗಪ್ಪ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಆಯೋಜಿಸಿದ್ದ, ನವೀಕರಣಗೊಂಡ ದೇವಾಲಯದ ಉದ್ಘಾಟನೆ ಮತ್ತು ಹಿಂದೂ ಐಕ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಹಿಂದೂ ಸಮಾಜ ಎದ್ದು ನಿಲ್ಲದೇ ಇದ್ದರೆ ರಾಮ ರಹೀಂ ಹಾಗೂ ಸೀತೆ ಬೀಬಿ ಆಗುವುದರಲ್ಲಿ ಸಂಶಯವಿಲ್ಲ. ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಇಂದಿನ ಹಿಂದೂ ಸಮಾಜ ಜಾತಿಯನ್ನು ದೂರವಿಟ್ಟು ಎದ್ದುನಿಂತಿದೆ. ಇದರಿಂದ ಅವನತಿ ಹೊಂದಿರುವ ದೇವಾಲಯಗಳಿಗೆ ಮತ್ತೆ ಶಕ್ತಿ ತುಂಬುವ ಮಹಾಕಾರ್ಯದಲ್ಲಿ ತೊಡಗಿಕೊಂಡಿವೆ’ ಎಂದರು.

ಹಿಂದೆ ಜಾತಿ ಜಾತಿಗಳ ನಡುವೆ ವಿಷಬೀಜವನ್ನು ಬಿತ್ತಿ ಹಿಂದೂ ಸಮಾಜವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದ ಕಿಡಿಗೇಡಿಗಳು ದೇವಾಲಯಗಳನ್ನು ಸರ್ವನಾಶ ಮಾಡುವ ಮಹಾತ್ಕಾರ್ಯಕ್ಕೆ ಕೈಹಾಕಿದ್ದರು. ಆದರೆ, ಇಂದು ಎಲ್ಲವೂ ಬದಲಾಗಿದೆ. ಇನ್ನೂ ಹಿಂದೂಗಳು ಮಲಗಿದ್ದರೆ ನಿಮ್ಮ ಅಕ್ಕಪಕ್ಕದಲ್ಲೂ ಮಸೀದಿ, ಚರ್ಚ್‌ಗಳು ತಲೆ ಎತ್ತಲಿವೆ ಎಂದು ಹೇಳಿದರು.

ಸೋಮವಾರಪೇಟೆ ವಿರಕ್ತ ಮಠದ ವಿಶ್ವೇಶ್ವರ ಸ್ವಾಮೀಜಿ ಮಾತನಾಡಿ, ದೇವಾಲಯಗಳು ಹಿಂದೂ ಧರ್ಮದ ಬೇರು. ಅದರಲ್ಲಿ ಜಾತಿ, ಮತವನ್ನು ತರದೆ ನಾವೆಲ್ಲ ಹಿಂದೂ ಎಂಬ ಮನೋಭಾವ ಇದ್ದರೆ ಮಾತ್ರ ಸ್ವಾಸ್ಥ್ಯ ಹಿಂದೂ ಸಮಾಜ ಎದ್ದು ನಿಲ್ಲಲು ಸಾಧ್ಯ. ಧರ್ಮದ ಅವನತಿ ಮತ್ತು ತೊಂದರೆ ನಿವಾರಿಸಲು ಹಿಂದೂ ಸಂಘಟನೆ ಐಕ್ಯವಾಗಬೇಕು ಎಂದು ಕರೆ ನೀಡಿದರು.

ಕೇರಳದ ಹಿಂದೂ ಐಕ್ಯ ವೇದಿಕೆಯ ರಾಜ್ಯ ಪ್ರದಾನ ಕಾರ್ಯದರ್ಶಿ ಬ್ರಹ್ಮಚಾರಿ ಭಾರ್ಗವ ರಾಮ್ ಮಾತನಾಡಿದರು. ಅಧ್ಯಕ್ಷತೆಯನ್ನು ಗರಗಂದೂರು ಕಾಫಿ ಬೆಳಗಾರ ಎಂ.ಬಿ. ಮಧುಬೋಪಣ್ಣ ವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಮಾದಾಪುರ ಕಲ್ಲುಕೋರೆ ಚೌಂಡಿಯಮ್ಮ ಮತ್ತು ಗುಳಿಗಪ್ಪ ದೇವಸ್ಥಾನದ ಬಾವುಟವನ್ನು ವಿಶ್ವೇಶ್ವರ ಸ್ವಾಮೀಜಿ ಏರಿಸಿದರು. ದೇವಸ್ಥಾನದ ಶಿಲಾನ್ಯಾಸದ ಉದ್ಘಾಟನೆಯನ್ನು ಸಚಿವ ಅನಂತಕಮಾರ್ ಹೆಗಡೆ ನೆರವೇರಿಸಿದರು. ಗರುಡ ಸ್ತಂಭವನ್ನು ಹಿಂದೂ ಜಾಗರಣಾ ವೇದಕೆ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಉದ್ಘಾಟಿಸಿದರು.

ನಂತರ ದೇವಾಲಯದ ಆವರಣದಿಂದ ನೂರಾರು ಹಿಂದೂ ಕಾರ್ಯಕರ್ತರು ಮತ್ತು ಮಹಿಳೆಯರು ಕಳಸ ಹೊತ್ತು ಮಾದಾಪುರ ಎಸ್.ಜೆ.ಎಂ ಶಾಲಾ ಮೈದಾನದವರೆಗೆ ಶೋಭಾಯಾತ್ರೆ ನಡೆಸಿದರು.

ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಬಾಲಕೃಷ್ಣ ಪೈ, ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್, ರಾಜ್ಯ ನಿಧಿ ಪ್ರಮುಖ್ ನಾಗೇಂದ್ರ ಪ್ರಸಾದ್, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಣ್ಣ, ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಪಿ.ಪ್ರಭಾಕರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಟಿ.ಸುಭಾಷ್, ವಿವಿಧ ಸಂಘಟನೆಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT